
ನವದೆಹಲಿ(ಡಿ.24): 2018ರಲ್ಲಿ ನಡೆಯಲಿರುವ ಪ್ರೊ ಕುಸ್ತಿ ಲೀಗ್‌ಗೆ ₹ 55 ಲಕ್ಷಗಳಿಗೆ ಬಿಕರಿಗೊಳ್ಳುವ ಮೂಲಕ ಭಾರತದ ಅನುಭವಿ ಕುಸ್ತಿಪಟು ಸುಶೀಲ್ ಕುಮಾರ್ ದಾಖಲೆ ಬರೆದಿದ್ದಾರೆ. ಈ ಮೂಲಕ ಲೀಗ್'ನಲ್ಲಿ ಇದುವರೆಗೂ ದುಬಾರಿ ಮೊತ್ತಕ್ಕೆ ಹರಾಜಾದ ಕುಸ್ತಿಪಟು ಎಂಬ ಕೀರ್ತಿಗೆ ಸುಶೀಲ್ ಪಾತ್ರರಾಗಿದ್ದಾರೆ.
ದಾಖಲೆ ಮೊತ್ತ ನೀಡಿ ದೆಹಲಿ ಸುಲ್ತಾನ್ಸ್ ತಂಡ ಸುಶೀಲ್'ರನ್ನು ಖರೀದಿಸಿದೆ. ವಿಚಿತ್ರವೆಂದರೆ ಎರಡು ವರ್ಷ ಹಿಂದೆ ನಡೆದ ಹರಾಜಿನಲ್ಲಿ ಯೋಗೇಶ್ವರ್ ದತ್ ಹಾಗೂ ಮೂವರು ಮಹಿಳಾ ಕುಸ್ತಿಪಟುಗಳಿಗಿಂತ ಕಡಿಮೆ ಮೊತ್ತಕ್ಕೆ ಸುಶೀಲ್ ಹರಾಜಾಗಿದ್ದರು. ಹೀಗಾಗಿ ಟೂರ್ನಿ ಆರಂಭಕ್ಕೆ ಕೇವಲ ಒಂದು ದಿನ ಬಾಕಿಯಿದ್ದಾಗ ಹರಾಜು ಪ್ರಕ್ರಿಯೆಯಿಂದ ಬೇಸತ್ತು ಟೂರ್ನಿಯಿಂದ ಹೊರಗುಳಿದಿದ್ದರು ಎಂದು ವರದಿಯಾಗಿತ್ತು. 2015ರ ಹರಾಜಿಗಿಂತ ಈ ಬಾರಿ 17 ಲಕ್ಷ ರುಪಾಯಿ ಹೆಚ್ಚಿಗೆ ಮೊತ್ತವನ್ನು ದೇಶದ ಅನುಭವಿ ಕುಸ್ತಿಪಟು ಪಡೆದುಕೊಂಡಿದ್ದಾರೆ.
ಇನ್ನು ₹ 46 ಲಕ್ಷಕ್ಕೆ ಹರಾಜುಗೊಂಡು ಹರ್ಯಾಣ ಹ್ಯಾಮರ್ಸ್ಸ್ ಪಾಲಾದ ಇರಾನ್ ಹಸ್ಸನ್ ರಹಿಮ್ ಅತಿ ಹೆಚ್ಚು ಬೆಲೆ ಪಡೆದ ವಿದೇಶಿ ಕುಸ್ತಿಪಟು ಎನಿಸಿಕೊಂಡರೆ, ₹44 ಲಕ್ಷ ಪಡೆದ ಅಮೆರಿಕದ ಹೆಲೆನ್ ದುಬಾರಿ ಬೆಲೆಗೆ ಹರಾಜುಗೊಂಡು ಮಹಿಳಾ ಕುಸ್ತಿಪಟು ಎನಿಸಿಕೊಂಡಿದ್ದಾರೆ.
ಪ್ರೊ ಕುಸ್ತಿ ಲೀಗ್ ಜನವರಿ 09ರಿಂದ ಆರಂಭವಾಗಲಿದೆ. ಇದು ಮೂರನೇ ಆವೃತ್ತಿಯಾಗಿದ್ದು, ಮೊದಲ ಆವೃತ್ತಿಯಲ್ಲಿ ರೇವಾಂತ ಮುಂಬೈ ಗರುಡ ಚಾಂಪಿಯನ್ ಆಗಿದ್ದರೆ, ಎರಡನೇ ಆವೃತ್ತಿಯಲ್ಲಿ ಎನ್'ಸಿಆರ್ ಪಂಜಾಬ್ ರಾಯಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.