
ಜೈಪುರ(ಜ.15): ಅಪ್ಪಟ ಭಾರತೀಯ ದೇಸಿ ಕ್ರೀಡೆ ಕಬಡ್ಡಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದು, ಪ್ರೇಕ್ಷಕ ಸ್ನೇಹಿಯಾಗಿಸಿದ ಪ್ರೊ ಕಬಡ್ಡಿ ಲೀಗ್ ಸದ್ಯ ಸಾವಿರ ಪಂದ್ಯಗಳ ಮೈಲಿಗಲ್ಲು ತಲುಪಲು ಸಜ್ಜಾಗಿದೆ. ಸೋಮವಾರ ಜೈಪುರದಲ್ಲಿ ನಡೆಯಲಿರುವ ಬೆಂಗಳೂರು ಬುಲ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ನಡುವಿನ ಪಂದ್ಯ ಪ್ರೊ ಕಬಡ್ಡಿಯ 1000ದ ಪಂದ್ಯ.
2014ರಲ್ಲಿ ಮಶಾಲ್ ಸ್ಪೋರ್ಟ್ಸ್ ಸಂಸ್ಥೆಯು ಪ್ರೊ ಕಬಡ್ಡಿಯನ್ನು ಪರಿಚಯಿಸಿತ್ತು. ಆ ವರ್ಷ ಜು.24ರಂದು ಯು ಮುಂಬಾ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್ ನಡುವೆ ಮುಂಬೈನಲ್ಲಿ ಮೊತ್ತ ಮೊದಲ ಪಂದ್ಯ ನಡೆದಿತ್ತು. ಆರಂಭಿಕ 4 ಆವೃತ್ತಿಗಳಲ್ಲಿ 8 ತಂಡಗಳು ಆಡಿದ್ದವು. ಬಳಿಕ 5ನೇ ಆವೃತ್ತಿ(2017)ರಿಂದ 12 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿವೆ. ಈ ಪೈಕಿ ಪಾಟ್ನಾ ಪೈರೇಟ್ಸ್ 3 ಬಾರಿ ಪ್ರಶಸ್ತಿ ಗೆದ್ದು ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದೆ. ಜೈಪುರ 2, ಬೆಂಗಳೂರು, ಬೆಂಗಾಲ್, ಡೆಲ್ಲಿ, ಮುಂಬಾ ತಲಾ 1 ಬಾರಿ ಚಾಂಪಿಯನ್ ಆಗಿವೆ. ಬೆಂಗಳೂರು, ಪಾಟ್ನಾ ತಲಾ 190ಕ್ಕೂ ಹೆಚ್ಚು ಪಂದ್ಯಗಳನ್ನಾಡಿದ್ದು, ಪಾಟ್ನಾ ಹಾಗೂ ಮುಂಬಾ ತಲಾ 100ಕ್ಕೂ ಹೆಚ್ಚು ಪಂದ್ಯ ಗೆದ್ದ ತಂಡಗಳು ಎನಿಸಿಕೊಂಡಿವೆ.
ಸಾತ್ವಿಕ್-ಚಿರಾಗ್ ಕೈತಪ್ಪಿದ ಮಲೇಷ್ಯಾ ಓಪನ್ ಕಿರೀಟ
ಪ್ರೊ ಕಬಡ್ಡಿಯ ಐತಿಹಾಸಿಕ 1000ನೇ ಪಂದ್ಯ ಆಡಲು ಕಾತುರರಾಗಿದ್ದೇವೆ. ಹಿಂದೆ ಮಾಡಿದ ತಪ್ಪು ತಿದ್ದಿಕೊಂಡು ಚೆನ್ನಾಗಿ ಆಡುವ ವಿಶ್ವಾಸವಿದೆ. ನಮ್ಮ ಕೆಲ ಆಟಗಾರರು ಫಾರ್ಮ್‍ನಲ್ಲಿ ಇಲ್ಲ. ಆದರೆ ಅದೃಷ್ಟ ನಮ್ಮ ಪರವಾಗಿದ್ದರೆ ಮತ್ತು ತಂಡ ಸ್ಫೂರ್ತಿಯಿಂದ ಆಡಿದರೆ ಗೆಲುವು ನಮ್ಮದಾಗುತ್ತದೆ. ಕಬಡ್ಡಿಯಲ್ಲಿ ಪರಿಶ್ರಮದಷ್ಟೇ ಅದೃಷ್ಟ ಕೂಡ ಮುಖ್ಯ.
- ಸೌರಭ್ ನಂದಲ್, ಬೆಂಗಳೂರು ಬುಲ್ಸ್ ನಾಯಕ
ಕಬಡ್ಡಿಯಂತಹ ಗ್ರಾಮೀಣ ಕ್ರೀಡೆ ಪ್ರೊ ಕಬಡ್ಡಿಯಂತಹ ಆಧುನಿಕ ರೂಪದಲ್ಲಿ 10ನೇ ಆವೃತ್ತಿವರೆಗೆ ಹಾಗೂ 1000ನೇ ಪಂದ್ಯದವರೆಗೆ ಬಂದಿರುವುದನ್ನು ನನಗೆ ನಂಬಲಾಗುತ್ತಿಲ್ಲ. ಬ್ಯಾಡ್ಮಿಂಟನ್, ಟೆನಿಸ್ ರೀತಿ ಕಬಡ್ಡಿಯನ್ನು ಬೆಳೆಸುವ ಕನಸು ನನ್ನದಾಗಿತ್ತು. ಅದು ಇಂದು ನನಸಾಗುತ್ತಿದೆ. ಭವಿಷ್ಯದಲ್ಲಿ ಪ್ರೊ ಕಬಡ್ಡಿಗೆ ಇನ್ನಷ್ಟು ತಾಂತ್ರಿಕತೆಯನ್ನು ತುಂಬುವ ಯೋಚನೆಯಿದೆ.
- ಪ್ರಸಾದ್ ರಾವ್, ಪ್ರೊ ಕಬಡ್ಡಿ ತಾಂತ್ರಿಕ ನಿರ್ದೇಶಕ
1000ನೇ ಪಂದ್ಯ ಕಬಡ್ಡಿ ಲೋಕದ ಬಹುದೊಡ್ಡ ಸಾಧನೆ. ಜಗತ್ತಿನಾದ್ಯಂತ ಇರುವ ಕಬಡ್ಡಿ ಆಟಗಾರರಿಗೆ ಇದು ಹೆಮ್ಮೆಯ ವಿಷಯ. ಗಂಗಾ ಕಿ ಸೌಗಂದ್ ಸಿನಿಮಾದಲ್ಲಿ ನನ್ನ ತಂದೆ ಕಬಡ್ಡಿ ಆಡುವುದನ್ನು ನೋಡಿದ ಬಳಿಕ ಅವರಿಂದಲೇ ನಾನು ಕಬಡ್ಡಿ ಕಲಿತೆ. ನಮ್ಮ ತೋಟದಲ್ಲೇ ಕಬಡ್ಡಿ ಕಲಿಸಿದರು. ದೆಹಲಿಯಲ್ಲಿ ಶಾಲೆಯಲ್ಲಿ ನಾನೂ ಕಬಡ್ಡಿ ಆಡುತ್ತಿದ್ದೆ.
ಅಭಿಷೇಕ್ ಬಚ್ಚನ್, ಜೈಪುರ ತಂಡದ ಮಾಲಿಕ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.