ಪ್ರೊ ಕಬಡ್ಡಿ: ಪ್ಲೇ-ಆಫ್‌ ಹೊಸ್ತಿಲಲ್ಲಿ ಬೆಂಗಳೂರು ಬುಲ್ಸ್‌!

By Web DeskFirst Published Dec 13, 2018, 8:52 AM IST
Highlights

ಪ್ರೊ ಕಬಡ್ಡಿ 6ನೇ ಆವೃತ್ತಿಯಲ್ಲಿ ಅಬ್ಬರಿಸುತ್ತಿರುವ ಬೆಂಗಳೂರು ಬುಲ್ಸ್ ತಂಡ ಇದೀಗ ಪ್ಲೇ ಆಫ್‌ಗೆ ಲಗ್ಗೆ ಇಡಲು ಸಜ್ಜಾಗಿದೆ. ತೆಲುಗು ಟೈಟಾನ್ಸ್ ಮಣಿಸಿದ ಬುಲ್ಸ್ ಟೂರ್ನಿಯಲ್ಲಿ ಬಲಿಷ್ಠ ತಂಡ ಎನ್ನುದನ್ನ ಮತ್ತೊಮ್ಮೆ ಸಾಬೀತುಪಡಿಸಿದೆ.

ವಿಶಾಖಪಟ್ಟಣಂ(ಡಿ.13): ಪ್ರೊ ಕಬಡ್ಡಿ 6ನೇ ಆವೃತ್ತಿಯಲ್ಲಿ 11ನೇ ಗೆಲುವು ಸಾಧಿಸಿರುವ ಬೆಂಗಳೂರು ಬುಲ್ಸ್‌, ಪ್ಲೇ-ಆಫ್‌ ಹೊಸ್ತಿಲು ತಲುಪಿದೆ. ಬುಧವಾರ ಇಲ್ಲಿ ನಡೆದ ತೆಲುಗು ಟೈಟಾನ್ಸ್‌ ವಿರುದ್ಧದ ಪಂದ್ಯದಲ್ಲಿ 37-24 ಅಂಕಗಳ ಗೆಲುವು ಸಾಧಿಸಿದ ಬುಲ್ಸ್‌, 18 ಪಂದ್ಯಗಳಲ್ಲಿ 64 ಅಂಕಗಳೊಂದಿಗೆ ‘ಬಿ’ ವಲಯದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ತಂಡಕ್ಕೆ ಲೀಗ್‌ ಹಂತದಲ್ಲಿ ಇನ್ನೂ 4 ಪಂದ್ಯ ಬಾಕಿ ಇದ್ದು, ಒಂದರಲ್ಲಿ ಗೆಲುವು ಸಾಧಿಸಿದರೂ ಸಾಕು ಪ್ಲೇ-ಆಫ್‌ ಸ್ಥಾನ ಖಚಿತವಾಗಲಿದೆ.

ನಿರ್ಣಾಯಕ ಹಂತದಲ್ಲಿ ಸತತ 2 ಸೋಲುಂಡು ಆತಂಕಕ್ಕೀಡಾಗಿದ್ದ ಬುಲ್ಸ್‌ಗೆ ಈ ಗೆಲುವು, ಆತ್ಮವಿಶ್ವಾಸ ಮರಳಿ ಪಡೆಯಲು ನೆರವಾಗಿದೆ. 2ನೇ ಸ್ಥಾನದಲ್ಲಿರುವ ಪಾಟ್ನಾ ಪೈರೇಟ್ಸ್‌ಗೆ ಇನ್ನೂ 5 ಪಂದ್ಯ ಬಾಕಿ ಇದ್ದು, ಬುಲ್ಸ್‌ಗಿಂತ 13 ಅಂಕ ಹಿಂದಿದೆ. ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡ, ಪ್ಲೇ-ಆಫ್‌ನಲ್ಲಿ ಕ್ವಾಲಿಫೈಯರ್‌-1 ಪಂದ್ಯಕ್ಕೆ ಅರ್ಹತೆ ಪಡೆಯಲಿದ್ದು, ಬುಲ್ಸ್‌ ಗೆಲುವಿನ ಲಯ ಉಳಿಸಿಕೊಳ್ಳುವ ಅನಿವಾರ್ಯವೆನಿಸಿದೆ.

ತೆಲುಗು ಟೈಟಾನ್ಸ್‌ನ ಬಲಿಷ್ಠ ಡಿಫೆನ್ಸ್‌ ಎದುರು ಚುರುಕಿನ ಆಟವಾಡಿದ ಬುಲ್ಸ್‌ ರೈಡರ್‌ಗಳು ಅಂಕ ಗಳಿಕೆಯಲ್ಲಿ ಮುನ್ನಡೆ ಸಾಧಿಸಿದರು. ಡಿಫೆಂಡರ್‌ಗಳು ಸಹ ಉತ್ತಮ ಪ್ರದರ್ಶನ ತೋರಿದ್ದು, ಬೆಂಗಳೂರು ಗೆಲುವನ್ನು ಸುಲಭಗೊಳಿಸಿತು. ಮೊದಲಾರ್ಧದ ಅಂತ್ಯಕ್ಕೆ 10-12ರಿಂದ ಹಿಂದಿದ್ದ ಬುಲ್ಸ್‌, ದ್ವಿತೀಯಾರ್ಧದ ಮೊದಲ 5 ನಿಮಿಷಗಳಲ್ಲಿ ವೇಗವಾಗಿ ಅಂಕ ಕಲೆಹಾಕಿತು. 25ನೇ ನಿಮಿಷದಲ್ಲಿ ಟೈಟಾನ್ಸ್‌ ತಂಡವನ್ನು ಆಲೌಟ್‌ ಮಾಡಿದ ಬುಲ್ಸ್‌ 17-14ರ ಮುನ್ನಡೆ ಪಡೆಯಿತು. 5 ನಿಮಿಷಗಳಲ್ಲಿ ಬುಲ್ಸ್‌ 7 ಅಂಕ ಗಳಿಸಿದರೆ, ಟೈಟಾನ್ಸ್‌ ಗಳಿಸಿದ್ದು 2 ಅಂಕ ಮಾತ್ರ. ಮುಂದಿನ 15 ನಿಮಿಷಗಳ ಕಾಲ ಟೈಟಾನ್ಸ್‌ನಿಂದ ಪ್ರತಿರೋಧ ವ್ಯಕ್ತವಾದರೂ, ಮುನ್ನಡೆ ಬಿಟ್ಟುಕೊಡದ ಬುಲ್ಸ್‌ 13 ಅಂಕಗಳ ಗೆಲುವು ಸಂಪಾದಿಸಿತು.

ಟರ್ನಿಂಗ್‌ ಪಾಯಿಂಟ್‌: 37ನೇ ನಿಮಿಷದಲ್ಲಿ ಟೈಟಾನ್ಸ್‌ ಕೇವಲ 2 ಅಂಕ ಹಿಂದಿತ್ತು. ರೈಡರ್‌ ಪವನ್‌ರನ್ನು ಯಶಸ್ವಿಯಾಗಿ ಟ್ಯಾಕಲ್‌ ಮಾಡಿದರೂ, ಟೈಟಾನ್ಸ್‌ನ ಆಟಗಾರ ಬುಲ್ಸ್‌ ಅಂಕಣಕ್ಕೆ ಕಾಲಿಟ್ಟಕಾರಣ ಪವನ್‌ ಸುರಕ್ಷಿತರಾಗಿ ಮರಳಿ 1 ಅಂಕ ಪಡೆದರು. ಮರು ನಿಮಿಷದಲ್ಲಿ 1 ಟ್ಯಾಕಲ್‌ ಅಂಕ ಗಳಿಸಿದ ಬುಲ್ಸ್‌, ಮುನ್ನಡೆಯನ್ನು 4 ಅಂಕಕ್ಕೇರಿಸಿಕೊಂಡು ಪಂದ್ಯ ತನ್ನ ಕೈಜಾರದಂತೆ ನೋಡಿಕೊಂಡಿತು.

ಗುಜರಾತ್‌ಗೆ 14ನೇ ಗೆಲುವು
ಹರ್ಯಾಣ ಸ್ಟೀಲ​ರ್‍ಸ್ ವಿರುದ್ಧ ಬುಧವಾರ ನಡೆದ ‘ಎ’ ವಲಯದ ಪಂದ್ಯದಲ್ಲಿ 47-37 ಅಂಕಗಳಲ್ಲಿ ಗೆದ್ದ ಗುಜರಾತ್‌, ಈ ಆವೃತ್ತಿಯಲ್ಲಿ 14ನೇ ಗೆಲುವು ಸಾಧಿಸಿತು. ‘ಎ’ ವಲಯದಲ್ಲಿ ಅಗ್ರಸ್ಥಾನದಲ್ಲಿರುವ ಯು ಮುಂಬಾಗಿಂತ ಕೇವಲ 4 ಅಂಕ ಹಿಂದಿರುವ ಗುಜರಾತ್‌, ಉಳಿದ 3 ಪಂದ್ಯಗಳಲ್ಲಿ ಗೆದ್ದು ಅಗ್ರಸ್ಥಾನ ಕಸಿದುಕೊಳ್ಳುವ ಲೆಕ್ಕಾಚಾರದಲ್ಲಿದೆ. ಮುಂಬಾಗೆ ಇನ್ನು 2 ಪಂದ್ಯ ಮಾತ್ರ ಬಾಕಿ ಇದೆ.

ಇಂದಿನ ಪಂದ್ಯ: ತೆಲುಗು ಟೈಟಾನ್ಸ್‌-ಪಾಟ್ನಾ ಪೈರೇಟ್ಸ್‌ ರಾತ್ರಿ 8ಕ್ಕೆ

click me!