ಪ್ರೊ ಕಬಡ್ಡಿ ಲೀಗ್: ಬಲಿಷ್ಠ ಹರ್ಯಾಣ ಮಣಿಸಿ ಗೆದ್ದು ಬೀಗಿದ ಬೆಂಗಳೂರು ಬುಲ್ಸ್!

Published : Sep 09, 2025, 08:25 AM IST
Bengaluru Bulls

ಸಾರಾಂಶ

ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್‌ ತಂಡ ಹರಿಯಾಣ ಸ್ಟೀಲರ್ಸ್‌ ವಿರುದ್ಧ 7 ಅಂಕಗಳ ಭರ್ಜರಿ ಗೆಲುವು ದಾಖಲಿಸಿದೆ. ಅಲಿರೇಜಾ ಮಿರ್ಜಾಯಿನ್‌ ಅವರ ಸೂಪರ್‌ ಟೆನ್‌ ಸಾಹಸ ಮತ್ತು ಸಾಂಘಿಕ ಪ್ರದರ್ಶನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದರೊಂದಿಗೆ ಬುಲ್ಸ್‌ ಸತತ ಎರಡನೇ ಜಯ ಸಾಧಿಸಿದೆ.

ವೈಜಾಗ್‌(ಸೆ.9): ಆಲ್‌ರೌಂಡರ್‌ ಅಲಿರೇಜಾ ಮಿರ್ಜಾಯಿನ್‌ ಅವರ ಸೂಪರ್‌ ಟೆನ್‌ ಸಾಹಸದ ಜತೆಗೆ ಮತ್ತೊಮ್ಮೆ ಸಾಂಘಿಕ ಪ್ರದರ್ಶನ ತೋರಿದ ಬೆಂಗಳೂರು ಬುಲ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 12ನೇ ಆವೃತ್ತಿಯ ತನ್ನ ಐದನೇ ಪಂದ್ಯದಲ್ಲಿಹರಿಯಾಣ ಸ್ಟೀಲರ್ಸ್‌ ವಿರುದ್ಧ 7 ಅಂಕಗಳ ಭರ್ಜರಿ ಗೆಲುವು ಸಾಧಿಸಿತು.

ಇಲ್ಲಿನ ವಿಶ್ವನಾಥ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಸೋಮವಾರ ನಡೆದ ಮೊದಲ ಹಣಾಹಣಿಯಲ್ಲಿ ಬೆಂಗಳೂರು ತಂಡ 40-33 ಅಂಕಗಳ ಅಂತರದಿಂದ ಹರ್ಯಾಣ ಸ್ಟೀಲರ್ಸ್‌ಗೆ ಆಘಾತ ನೀಡಿತು. ಇದರೊಂದಿಗೆ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಸತತ ಎರಡನೇ ಜಯ ಗಳಿಸಿದ ಬುಲ್ಸ್‌, ಸದ್ಯ ನಾಲ್ಕು ಅಂಕಗಳನ್ನು ಕಲೆಹಾಕಿದೆ. ಅತ್ತ ಎರಡನೇ ಸೋಲಿಗೆ ಗುರಿಯಾದ ಸ್ಟೀಲರ್ಸ್‌, ಹ್ಯಾಟ್ರಿಕ್‌ ಗೆಲುವಿನ ಅವಕಾಶವನ್ನು ಕೈಚೆಲ್ಲಿತು.

ಬೆಂಗಳೂರು ಬುಲ್ಸ್‌ ತಂಡದ ಪರ ಅಲಿರೇಜಾ ಮಿರ್ಜಾಯಿನ್‌( 12 ಅಂಕ), ಆಶಿಶ್‌ ಮಲಿಕ್‌(5 ಅಂಕ), ದೀಪಕ್‌(5 ಅಂಕ) ಮತ್ತು ಯೋಗೇಶ್‌(6 ಅಂಕ) ಮಿಂಚಿದರೆ, ಹರಿಯಾಣ ಸ್ಟೀಲರ್ಸ್‌ ತಂಡದ ಪರ ಮಯಾಂಕ್‌ ಸೈನಿ (6 ಅಂಕ), ಶಿವಂ ಪತರೆ(7 ಅಂಕ) ಮತ್ತು ಜಯಸೂರ್ಯ (5 ಅಂಕ) ಗಮನ ಸೆಳೆದರು. ಪಂದ್ಯ ಮುಕ್ತಾಯಕ್ಕೆ ಹತ್ತು ನಿಮಿಷಗಳಿರುವಾಗ 32-24ರಲ್ಲಿಅಂತರ ಹೆಚ್ಚಿಸಿದ ಬುಲ್ಸ್‌, ಸತತ ಎರಡನೇ ಗೆಲುವಿನ ಮುನ್ಸೂಚನೆ ನೀಡಿತು. 26ನೇ ನಿಮಿಷದಲ್ಲಿಎರಡು ರೇಡಿಂಗ್‌ ಅಂಕಗಳ ಜತೆಗೆ ಎರಡು ಆಲೌಟ್‌ ಪಾಯಿಂಟ್ಸ್‌ ತಂದುಕೊಟ್ಟ ಅಲಿರೇಜಾ ಮಿರ್ಜಾಯಿನ್‌, ಬುಲ್ಸ್‌ ತಂಡದ ಮುನ್ನಡೆಯನ್ನು 29-23ಕ್ಕೆ ಹಿಗ್ಗಿಸುವುದರೊಂದಿಗೆ ತಂಡವನ್ನು ಸುಸ್ಥಿತಿಗೆ ತಂದು ನಿಲ್ಲಿಸಿದರು.

ಮುನ್ನಡೆ ವಿಸ್ತರಿಸುವ ಗುರಿಯೊಂದಿಗೆ ದ್ವಿತೀಯಾರ್ಧ ಆರಂಭಿಸಿದ ಬುಲ್ಸ್‌, 3 ನಿಮಿಷಗಳ ಅಂತರದಲ್ಲಿ24-19ರಲ್ಲಿ ಮೇಲುಗೈ ಸಾಧಿಸಿ ಎದುರಾಳಿ ತಂಡವನ್ನು ಖಾಲಿ ಮಾಡಿಸುವ ಹಂತಕ್ಕೆ ತಲುಪಿತು. ಆದರೆ ಆಶಿಶ್‌ ಮಲಿಕ್‌ ಮತ್ತು ದೀಪಕ್‌ ಶಂಕರ್‌ ಅವರನ್ನು ಔಟ್‌ ಮಾಡಿದ ಜಯಸೂರ್ಯ, ಹರಿಯಾಣ ತಂಡದ ಹಿನ್ನಡೆಯನ್ನು 21-24ಕ್ಕೆ ತಗ್ಗಿಸಿ ಪ್ರಬಲ ಹೋರಾಟಕ್ಕೆ ಸಾಕ್ಷಿಯಾದರು.

ಇದಕ್ಕೂ ಮುನ್ನ ಪಟನಾ ಪೈರೇಟ್ಸ್‌ ಎದುರು ಲಭಿಸಿದ ಗೆಲುವಿನಿಂದ ಆತ್ಮವಿಶ್ವಾಸದೊಂದಿಗೆ ಅಖಾಡಕ್ಕಿಳಿದ ಬೆಂಗಳೂರು ಬುಲ್ಸ್‌, ರೇಡಿಂಗ್‌ ಮತ್ತು ಟ್ಯಾಕಲ್‌ ಎರಡರಲ್ಲೂ ಮಿಂಚುವ ಮೂಲಕ ಪ್ರಥಮಾರ್ಧಕ್ಕೆ 21-18 ಅಂಕಗಳಿಂದ ಮೇಲುಗೈ ಸಾಧಿಸಿತು. ಪಂದ್ಯ ಆರಂಭವಾದ ಕೇವಲ 5 ನಿಮಿಷಗಳ ಅಂತರದಲ್ಲಿಅಲಿರೇಜಾ ಅವರ ಮಿಂಚಿನ ರೇಡ್‌ ನೆರವಿನಿಂದ ಹರಿಯಾಣ ಸ್ಟೀಲರ್ಸ್‌ ತಂಡವನ್ನು ಆಲೌಟ್‌ ಬಲೆಗೆ ಬೀಳಿಸಿದ ಮಾಜಿ ಚಾಂಪಿಯನ್ಸ್‌ ಬುಲ್ಸ್‌ ಆಟಗಾರರು 9-2ರಲಿ ಮುನ್ನಡೆ ಸಾಧಿಸಿದರು. ಹತ್ತು ನಿಮಿಷಗಳ ಮುಕ್ತಾಯಕ್ಕೆ ತಂಡದ ಮುನ್ನಡೆಯನ್ನು 13-8ಕ್ಕೆ ವಿಸ್ತರಿಸಿದ ಯೋಗೇಶ್‌ ನಾಯಕತ್ವದ ಬುಲ್ಸ್‌, ನಂತರದ ಸಮಯದಲ್ಲಿಎದುರಾಳಿಯಿಂದ ತುರುಸಿನ ಪೈಪೋಟಿ ಎದುರಿಸಿತು.

ಇದರ ನಡುವೆಯೂ ಆಲ್‌ರೌಂಡರ್‌ ಅಲಿರೇಜಾ ಮತ್ತು ಆಶಿಶ್‌ ಮಲಿಕ್‌ ಮಿಂಚಿದ ಕಾರಣ ಬುಲ್ಸ್‌ ತಂಡದ ಹಿಡಿತ ಮುಂದುವರಿಯಿತು. 12ನೇ ನಿಮಿಷದಲ್ಲಿ ಮಹಿಪಾಲ್‌ ಅವರನ್ನು ಟ್ಯಾಕಲ್‌ ಮಾಡಿದ ಜೈದೀಪ್‌ ಹರಿಯಾಣ ತಂಡಕ್ಕೆ ಎರಡು ಆಲೌಟ್‌ ಪಾಯಿಂಟ್ಸ್‌ ತಂದುಕೊಟ್ಟರು. ಇದರಿಂದ ಹರಿಯಾಣ ಹಿಂದಿನ ಆಲೌಟ್‌ಗೆ ಮುಯ್ಯಿ ತೀರಿಸಿಕೊಂಡಿತು. ಒಂದು ಹಂತದಲ್ಲಿ13-16ರಲ್ಲಿಪ್ರತಿರೋಧ ಒಡ್ಡಿದ ಸ್ಟೀಲರ್ಸ್‌, ಪ್ರಬಲವಾಗಿ ಪುಟಿದೆದ್ದಿತು. ಆದರೆ ಬುಲ್ಸ್‌ ಸಂಘಟನಾತ್ಮಕ ಪ್ರದರ್ಶನ ನೀಡಿ ಮೇಲುಗೈ ಕಾಯ್ದುಕೊಂಡಿತು. ಈ ಗೆಲುವಿನೊಂದಿಗೆ ಬೆಂಗಳೂರು ಬುಲ್ಸ್ ತಂಡವು ಆಡಿದ 5 ಪಂದ್ಯಗಳಲ್ಲಿ 2 ಗೆಲುವು ಹಾಗೂ ಮೂರು ಸೋಲು ಸಹಿತ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ.

ಬೆಂಗಳೂರು ಬುಲ್ಸ್‌ ತನ್ನ ಮುಂದಿನ ಪಂದ್ಯದಲ್ಲಿ ಸೆಪ್ಟೆಂಬರ್‌ 12ರಂದು ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡವನ್ನು ಎದುರಿಸಲಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ