7ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯ ನಿರ್ಣಾಯಕ ಘಟ್ಟದತ್ತ ಸಾಗುತ್ತಿದೆ. ಪ್ರಸ್ತುತ ಬೆಂಗಳೂರು ಚರಣದ ಪಂದ್ಯಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಪ್ಲೇ ಆಫ್ ಪ್ರವೇಶಿಸುವ ತಂಡಗಳು ಯಾವುವು ಎನ್ನುವುದರ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ ನೋಡಿ...
ಬೆಂಗಳೂರು[ಸೆ.04]: ಪ್ರೊ ಕಬಡ್ಡಿ 7ನೇ ಆವೃತ್ತಿ ರೋಚಕ ಪಂದ್ಯಗಳಿಗೆ ಸಾಕ್ಷಿಯಾಗುತ್ತಿದೆ. ಲೀಗ್ ಅರ್ಧ ಭಾಗ ಮುಕ್ತಾಯಗೊಂಡಿದ್ದು, ಹಲವು ಅನಿರೀಕ್ಷಿತ ಪ್ರದರ್ಶನಗಳು ಮೂಡಿಬರುತ್ತಿವೆ. ಬೆಂಗಳೂರಿನ ಅರ್ಧ ಚರಣದ ಬಳಿಕ ಯಾವ ತಂಡ ಅಗ್ರಸ್ಥಾನದಲ್ಲಿದೆ. ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರುತ್ತಿರುವ ತಂಡ ಯಾವುದು?, ಬೆಂಗಳೂರು ಬುಲ್ಸ್ ಸ್ಥಿತಿ ಹೇಗಿದೆ?, ಪ್ಲೇ-ಆಫ್ ರೇಸ್ನಲ್ಲಿರುವ ತಂಡಗಳು ಯಾವ್ಯಾವು?, ಯಾವ್ಯಾವ ತಂಡಗಳು ಲೀಗ್ ಹಂತದಲ್ಲೇ ಹೊರಬೀಳುವ ಸಾಧ್ಯತೆ ಇದೆ? ಈ ಎಲ್ಲದರ ವಿಶ್ಲೇಷಣೆ ಇಲ್ಲಿದೆ.
ಡೆಲ್ಲಿ ಭರ್ಜರಿ ಓಟ:
6ನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಪ್ಲೇ-ಆಫ್ ಪ್ರವೇಶಿಸಿದ್ದ ದಬಾಂಗ್ ಡೆಲ್ಲಿ, ಈ ಆವೃತ್ತಿಯಲ್ಲಿ ಪ್ರಚಂಡ ಲಯದಲ್ಲಿದೆ. ಯಾರೂ ನಿರೀಕ್ಷೆ ಮಾಡದಂತಹ ಪ್ರದರ್ಶನ ತೋರುತ್ತಿರುವ ಡೆಲ್ಲಿ, ಆಡಿರುವ 11 ಪಂದ್ಯಗಳಲ್ಲಿ 9ರಲ್ಲಿ ಗೆದ್ದು, 1 ಪಂದ್ಯವನ್ನು ಟೈ ಮಾಡಿಕೊಂಡಿದೆ. ಕೇವಲ 1 ಪಂದ್ಯದಲ್ಲಿ ಸೋತಿರುವ ಡೆಲ್ಲಿ, 49 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. ತಂಡ ಬಾಕಿ ಇರುವ ಇನ್ನು 11 ಪಂದ್ಯಗಳಲ್ಲಿ ಎರಡರಿಂದ ಮೂರು ಪಂದ್ಯಗಳನ್ನು ಗೆದ್ದರೆ ಸಾಕು ಪ್ಲೇ-ಆಫ್ ಸ್ಥಾನ ಬಹುತೇಕ ಖಚಿತವಾಗಲಿದೆ. ಡೆಲ್ಲಿ ಯಶಸ್ಸಿಗೆ ಯುವ ರೈಡರ್ ನವೀನ್ ಕುಮಾರ್ ಪ್ರಮುಖ ಕಾರಣ. 130 ರೈಡ್ ಅಂಕಗಳೊಂದಿಗೆ ನವೀನ್ 2ನೇ ಅತ್ಯಂತ ಯಶಸ್ವಿ ರೈಡರ್ ಎನಿಸಿದ್ದಾರೆ.
ಬುಲ್ಸ್‌ಗೆ ಪವನ್ ಆಸರೆ:
ಬೆಂಗಳೂರು ಬುಲ್ಸ್ ನಿರೀಕ್ಷಿತ ಮಟ್ಟದಲ್ಲಿ ಆಡದಿದ್ದರೂ, ಪ್ಲೇ-ಆಫ್ ರೇಸ್‌ನಲ್ಲಿ ಉಳಿದುಕೊಂಡಿದೆ. ಒಟ್ಟು 424 ಅಂಕ ಪಡೆದಿರುವ ಹಾಲಿ ಚಾಂಪಿಯನ್, ಗರಿಷ್ಠ ಅಂಕ ಗಳಿಸಿದ ತಂಡಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಆದರೆ 410 ಅಂಕಗಳನ್ನು ಬಿಟ್ಟುಕೊಡುವ ಮೂಲಕ, ಗರಿಷ್ಠ ಅಂಕ ಬಿಟ್ಟುಕೊಟ್ಟ ತಂಡಗಳ ಪಟ್ಟಿಯಲ್ಲಿಯೂ ಅಗ್ರಸ್ಥಾನ ಪಡೆದಿದೆ. ಬುಲ್ಸ್ ಗಳಿಸಿರುವ ಒಟ್ಟು 410 ಅಂಕಗಳ ಪೈಕಿ 242 ರೈಡ್ ಅಂಕಗಳಾಗಿವೆ. ಇದರಲ್ಲಿ 148 ಅಂಕಗಳನ್ನು ಪವನ್ ಶೆರಾವತ್ ಒಬ್ಬರೇ ಗಳಿಸಿದ್ದಾರೆ. ಪವನ್ ಮಿಂಚಿದರಷ್ಟೇ ಬುಲ್ಸ್‌ಗೆ ಜಯ ಎನ್ನುವಂತಾಗಿದೆ. 13 ಪಂದ್ಯಗಳಲ್ಲಿ 7 ಗೆಲುವು, 6 ಸೋಲುಗಳೊಂದಿಗೆ 38 ಅಂಕ ಗಳಿಸಿರುವ ಬುಲ್ಸ್, 4ನೇ ಸ್ಥಾನದಲ್ಲಿದ್ದು ಪ್ಲೇ-ಆಫ್ ರೇಸ್ ಆಸೆ ಜೀವಂತವಾಗಿರಿಸಿಕೊಂಡಿದೆ.
ಹರ್ಯಾಣ, ಬೆಂಗಾಲ್ ಮಿಂಚು:
ಆರಂಭದ 4 ಪಂದ್ಯಗಳಲ್ಲಿ 3ರಲ್ಲಿ ಸೋತರೂ, ಕಳೆದ 8 ಪಂದ್ಯಗಳಲ್ಲಿ 7ರಲ್ಲಿ ಗೆದ್ದಿರುವ ಹರ್ಯಾಣ ಸ್ಟೀಲರ್ಸ್ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಇನ್ನು ಬೆಂಗಾಲ್ ವಾರಿಯರ್ಸ್ ಸಹ ಸ್ಥಿರ ಆಟ ಕಾಯ್ದುಕೊಂಡಿದ್ದು 3ನೇ ಸ್ಥಾನದಲ್ಲಿ ಮುಂದುವರಿದಿದೆ. ಮೊದಲ 7 ಪಂದ್ಯಗಳಲ್ಲಿ 6ರಲ್ಲಿ ಗೆದ್ದಿದ್ದ ಜೈಪುರ, ಸದ್ಯ ಲಯ ಕಳೆದುಕೊಂಡಂತೆ ಕಾಣುತ್ತಿದೆ. ಆದರೂ ತಂಡ 5ನೇ ಸ್ಥಾನದಲ್ಲಿದೆ. ಯು ಮುಂಬಾ 12 ಪಂದ್ಯಗಳಲ್ಲಿ ತಲಾ 6 ಜಯ, ಸೋಲು ಕಂಡು 6ನೇ ಸ್ಥಾನ ಪಡೆದಿದೆ. ಈ 6 ತಂಡಗಳ ಜತೆ ಯು.ಪಿ.ಯೋಧಾ, ಗುಜರಾತ್ ತಂಡಗಳು ಪ್ಲೇ-ಆಫ್ ರೇಸ್‌ನಲ್ಲಿವೆ.
ಪಾಟ್ನಾ ಫ್ಲಾಪ್ ಶೋ!:
3 ಬಾರಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ಈ ಆವೃತ್ತಿಯಲ್ಲಿ ಹೀನಾಯ ಪ್ರದರ್ಶನ ತೋರುತ್ತಿದೆ. 11 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದಿರುವ ತಂಡ ಕೊನೆ ಸ್ಥಾನದಲ್ಲಿದೆ. ಪಾಟ್ನಾ ಹಿನ್ನಡೆ ಅನುಭವಿಸಲು ನಾಯಕ, ರೈಡ್ ಮಷೀನ್ ಪ್ರದೀಪ್ ನರ್ವಾಲ್‌ಗೆ ರೈಡಿಂಗ್‌ನಲ್ಲಿ ಸರಿಯಾದ ಬೆಂಬಲ ದೊರೆಯುತ್ತಿಲ್ಲ. ತಂಡದ ರಕ್ಷಣಾ ಪಡೆ ಕಳಪೆ ಆಟವಾಡುತ್ತಿದ್ದು, 11 ಪಂದ್ಯಗಳಿಂದ ಕೇವಲ 107 ಅಂಕ ಗಳಿಸಿದೆ. ಪ್ರೊ ಕಬಡ್ಡಿಯ ಅತ್ಯಂತ ಅನುಭವಿ ಆಟಗಾರರನ್ನು ಹೊಂದಿರುವ ತಮಿಳ್ ತಲೈವಾಸ್ 13 ಪಂದ್ಯಗಳಲ್ಲಿ 3 ಗೆಲುವು ಕಂಡು 10ನೇ ಸ್ಥಾನದಲ್ಲಿದ್ದರೆ, 12 ಪಂದ್ಯಗಳಲ್ಲಿ 4 ಜಯ ಕಂಡಿರುವ ಪುಣೇರಿ ಪಲ್ಟನ್ 11ನೇ ಸ್ಥಾನದಲ್ಲಿದೆ. 12 ಪಂದ್ಯಗಳಲ್ಲಿ 4 ಜಯದೊಂದಿಗೆ 29 ಅಂಕ ಗಳಿಸಿರುವ ತೆಲುಗು ಟೈಟಾನ್ಸ್ 9ನೇ ಸ್ಥಾನ ಪಡೆದಿದೆ. ಈ ನಾಲ್ಕು ತಂಡಗಳು ಪ್ಲೇ-ಆಫ್ಗೇರಬೇಕಿದ್ದರೆ ಪವಾಡ ನಡೆಯಬೇಕಿದೆ.