ತವರಿನಲ್ಲಿ ಬೆಂಗಳೂರು ಬುಲ್ಸ್ ಘರ್ಜಿಸಿದೆ. ಪಾಟ್ನಾ ಪೈರೇಟ್ಸ್ ವಿರುದ್ದ ರೋಚಕ ಗೆಲುವು ಸಾಧಿಸೋ ಮೂಲಕ ಸತತ 2 ಗೆಲುವು ಕಂಡಿದೆ. ಪಾಟ್ನಾ ಪೈರೇಟ್ಸ್ ಹಾಗೂ ಬುಲ್ಸ್ ಗೂಳಿಗಳ ಹೋರಾಟದ ವಿವರ ಇಲ್ಲಿದೆ.
ಬೆಂಗಳೂರು(ಸೆ.04): ತವರಿನಲ್ಲಿ ಬೆಂಗಳೂರು ಬುಲ್ಸ್ ಗೆಲುವಿನ ಓಟ ಮುಂದುವರಿದಿದೆ. ತಮಿಳಿ ತಲೈವಾಸ್ ವಿರುದ್ಧದ ಗೆಲುವಿನೊಂದಿಗೆ ವಿನ್ನಿಂಗ್ ಟ್ರ್ಯಾಕ್‌ಗೆ ಮರಳಿದ ಬೆಂಗಳೂರು ಬುಲ್ಸ್ ಇದೀಗ ಪಾಟ್ನಾ ಪೈರೇಟ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದೆ. ಕಂಠೀವರ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು 40-39 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು. ಈ ಮೂಲಕ ಬೆಂಗಳೂರು ಅಂಕಪಟ್ಟಿಯಲ್ಲಿ 43 ಅಂಕದೊಂದಿಗೆ 2ನೇ ಸ್ಥಾನಕ್ಕೇರಿದೆ.
ಇದನ್ನೂ ಓದಿ: ಸಂದರ್ಶನ: ಪ್ರೊ ಕಬಡ್ಡಿ ಕನಸು ಕಾಣುವ ಯುವಕರಿಗೆ ಪವನ್ ಶೆರಾವತ್ ಸಲಹೆ...
ಕಾತರದಿಂದ ಕಾದ ಬೆಂಗಳೂರಿನ ಅಭಿಮಾನಿಗಳಿಗೆ ಬುಲ್ಸ್ ರೋಚಕ ಪಂದ್ಯವನ್ನೇ ನೀಡಿದೆ. ಪ್ರದೀಪ್ ನರ್ವಾಲ್ ಯಶಸ್ವಿ ರೈಡ್‌ನಿಂದ ಪಾಟ್ನಾ ಪೈರೇಟ್ಸ್ ಅಂಕ ಖಾತೆ ತೆರೆಯಿತು. ಆದರೆ ಆರಂಭಿಕ ರೈಡ್‌ನಲ್ಲಿ ನಾಯಕ ರೋಹಿತ್ ಕುಮಾರ್ ಅಂಕ ಸಂಪಾದಿಸಲಿಲ್ಲ. ಇನ್ನು ಟ್ಯಾಕಲ್ ಮಾಡುವಲ್ಲಿ ಬೆಂಗಳೂರು ವಿಫಲವಾಯಿತು. ಪಂದ್ಯದ 2ನೇ ನಿಮಿಷದಲ್ಲಿ ಬೆಂಗಳೂರು ಮೊದಲ ಅಂಕ ಸಂಪಾದಿಸಿತು. ಪವನ್ ಶೆರಾವತ್ ಅಬ್ಬರಿಂದ ಬೆಂಗಳೂರು ಬುಲ್ಸ್ 3ನೇ ನಿಮಿಷಕ್ಕೆ 4-2 ಅಂತರದ ಮುನ್ನಡೆ ಪಡೆದುಕೊಂಡಿತು.
ಇದನ್ನೂ ಓದಿ: ಪ್ರೊ ಕಬಡ್ಡಿ 7: ಪ್ಲೇ-ಆಫ್ ಲೆಕ್ಕಾಚಾರ- ಡೆಲ್ಲಿ ಬೆಸ್ಟ್, ಪ್ಲೇ-ಆಫ್ ರೇಸ್‌ನಲ್ಲಿ ಬುಲ್ಸ್!
4ನೇ ನಿಮಿಷದಿಂದ ಪಾಟ್ನಾ ಕೂಡ ತಿರುಗೇಟು ನೀಡಿತು. ಅಂಕ 4-4ರಿಂದ ಸಮಬಲಗೊಂಡಿತು. ಬಳಿಕ ಬೆಂಗಳೂರು ಬುಲ್ಸ್ ಹಾಗೂ ಪಾಟ್ನಾ ಪೈರೇಟ್ಸ್ ಸಮಬಲದ ಹೋರಾಟ ನೀಡಿತು. ಆದರೆ ಪ್ರದೀಪ್ ನರ್ವಾಲ್ ಸೂಪರ್ ರೈಡ್ ಮೂಲಕ ಪಾಟ್ನಾ 17-9 ಅಂಕಗಳ ಮುನ್ನಡೆ ಪಡೆದುಕೊಂಡು ಬೆಂಗಳೂರಿಗೆ ಆಘಾತ ನೀಡಿತು. ಮೊದಲಾರ್ಧದ ಅಂತ್ಯದಲ್ಲಿ ಪಾಟ್ನಾ 22-16 ಅಂಕಗಳ ಅಂತರ ಕಾಪಾಡಿಕೊಂಡಿತು.
ದ್ವಿತಿಯಾರ್ಧದ ಆರಂಭದಲ್ಲೂ ಪಾಟ್ನಾ ಮುನ್ನಡೆ ಕಾಯ್ದುಕೊಂಡಿತು. ಸೆಕೆಂಡ್ ಹಾಫ್‌ನ 5 ನಿಮಿಷ ಮುಕ್ತಾಯದ ವೇಳೆ ಪಾಟ್ನಾ ಅಂಕ 28, ಬೆಂಗಳೂರು 20. 18 ನಿಮಿಷದ ವರೆಗೂ ಪಾಟ್ನಾ ಭಾರಿ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ಅಂತಿಮ 2 ನಿಮಿಷದಲ್ಲಿ ಬೆಂಗಳೂರು ತಂಡ ಆಕ್ರಮಣಕಾರಿ ಆಟವಾಡೋ ಮೂಲಕ 38-38 ಅಂಕಗಳಿಂದ ಸಮಬಲ ಮಾಡಿಕೊಂಡಿತು. ಅಂತಿಮ ಹಂತದಲ್ಲಿ ಬೆಂಗಳೂರು 2 ಅಂಕ ಕಲೆಹಾಕಿ 40 ಅಂಕ ಸಂಪಾದಿಸಿದರೆ, ಪಾಟ್ನಾ 39 ಅಂಕ ಸಂಪಾದಿಸಿತು. ಈ ಮೂಲಕ 1 ಅಂಕಗಳ ರೋಚಕ ಗೆಲುವು ಸಾಧಿಸಿತು.
ದಬಾಂಗ್ ದಿಲ್ಲಿಗೆ ಗೆಲುವು:
ಬೆಂಗಳೂರು ಬುಲ್ಸ್ ಪಂದ್ಯಕ್ಕೂ ಮೊದಲು ದಬಾಂಗ್ ದಿಲ್ಲಿ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ದಬಾಂಗ್ ದಿಲ್ಲಿ 46-44 ಅಂಕಗಳ ಅಂತರದಲ್ಲಿ ಜೈಪುರು ತಂಡವನ್ನು ಮಣಿಸಿತು.