ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಾಲ್ ವಾರಿಯರ್ಸ್ ಹಾಗೂ ದಬಾಂಗ್ ದಿಲ್ಲಿ ನಡುವಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯವಾಗಿದೆ. ಪಂದ್ಯ ಆರಂಭದಿಂದ ಅಂತಿಮ ಹಂತದವರೆಗೆ ಉಭಯ ತಂಡಗಳ ಹೋರಾಟಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಚೆನ್ನೈ(ಆ.17): ದಬಾಂಗ್ ದಿಲ್ಲಿ ಹಾಗೂ ಬೆಂಗಾಲ್ ವಾರಿಯರ್ಸ್ ತಂಡಕ್ಕೆ ಗೆಲುವು ಬೇಕೆ ಬೇಕು. ಉಭಯ ತಂಡಗಳು ಸೋಲನ್ನು ಸಹಿಸುವುದಿಲ್ಲ. ಪ್ರೊ ಕಬಡ್ಡಿ ಟೂರ್ನಿಯ 46ನೇ ಲೀಗ್ ಪಂದ್ಯದಲ್ಲಿ ಇವರಿಬ್ಬರ ಹೋರಾಟ ಅಭಿಮಾನಿಗಳ ಸಖತ್ ಮನರಂಜನೆ ನೀಡಿತು. ಅಂತಿಮ ಕ್ಷಣದವರೆಗೆ ದಿಲ್ಲಿ ಹಾಗೂ ಬೆಂಗಾಲ್ ಹೋರಾಟದಲ್ಲಿ ಗೆಲುವು ಯಾರಿಗೆ ಅನ್ನೋ ಕುತೂಹಲ ಮನೆ ಮಾಡಿತು. ಆದರೆ ಪಂದ್ಯ ರೋಚಕ ಟೈ ಆಗೋ ಮೂಲಕ ಕುತೂಹಲಕ್ಕೆ ತೆರೆ ಬಿತ್ತು.
ಇದನ್ನೂ ಓದಿ: ಪ್ರೊ ಕಬಡ್ಡಿ 7ನೇ ಆವೃತ್ತಿ ಹಾಗೂ ವಿಶೇಷತೆ!
ಪಂದ್ಯದ ಆರಂಭದಲ್ಲೇ ಆಕ್ರಮಣಕಾರಿ ಆಟವಾಡಿದ ದಿಲ್ಲಿ, ಬೆಂಗಾಲ್ ತಂಡಕ್ಕೆ ಶಾಕ್ ಮೇಲೆ ಶಾಕ್ ನೀಡಿತು. ಆರಂಭಿಕ 5ನಿಮಿಷದ ಮುಕ್ತಾಯದ ವೇಳೆಗೆ ದಿಲ್ಲಿ 9-5 ಅಂಕಗಳ ಮುನ್ನಡೆ ಪಡೆಯಿತು. ಬಂಗಾಳ ತಂಡ ಹೋರಾಟ ನಡೆಸಿದರೂ ಮುನ್ನಡೆ ಸಿಗಲಿಲ್ಲ. ಮೊದಲಾರ್ಧದ ಮುಕ್ತಾಯದ ವೇಳೆಗೆ ದಿಲ್ಲಿ 18-11 ಅಂಕಗಳ ಮುನ್ನಡೆ ಪಡೆದುಕೊಂಡು ನಿಟ್ಟುಸಿರು ಬಿಟ್ಟಿತು.
ಇದನ್ನೂ ಓದಿ: ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ !
ದ್ವಿತಿಯಾರ್ಧದಲ್ಲಿ ಪಂದ್ಯದ ಗತಿ ಬದಲಾಯಿತು. ಬೆಂಗಾಲ್ ವಾರಿಯರ್ಸ್ ತಿರುಗೇಟು ನೀಡಿತು. 10 ನಿಮಿಷದ ಮುಕ್ತಾಯಕ್ಕೆ ಬೆಂಗಾಲ್ 20-23 ಅಂಕ ಸಂಪಾದಿಸಿ ಅಂತರ ತಗ್ಗಿಸಿತು. 12ನೇ ನಿಮಿಷದಲ್ಲಿ ಬೆಂಗಾಲ್ ವಾರಿಯರ್ಸ್ 25-25 ಅಂಕಗಳ ಮೂಲಕ ಅಂಕ ಸಮಬಲಗೊಳಿಸಿತು. ದಿಲ್ಲಿ ಕೂಡ ಅಷ್ಟೇ ವೇಗದಲ್ಲಿ ಕಮ್‌ಬ್ಯಾಕ್ ಮಾಡಿತು. ಆದರೆ ಅಂತಿಮ ಹಂತದಲ್ಲಿ 30-30 ಅಂಕಗಳೊಂದಿಗೆ ಪಂದ್ಯ ಟೈನಲ್ಲಿ ಅಂತ್ಯವಾಯಿತು.