ಪ್ರೊ ಕಬಡ್ಡಿ 2018: ಬೆಂಗಳೂರು ಬುಲ್ಸ್‌ ಸೂಪರ್‌ ಹಿಟ್‌!

Published : Nov 08, 2018, 07:34 AM IST
ಪ್ರೊ ಕಬಡ್ಡಿ 2018: ಬೆಂಗಳೂರು ಬುಲ್ಸ್‌ ಸೂಪರ್‌ ಹಿಟ್‌!

ಸಾರಾಂಶ

ಪ್ರೊ ಕಬಡ್ಡಿ 6ನೇ ಆವೃತ್ತಿ ಆರಂಭಗೊಂಡು ಬುಧವಾರಕ್ಕೆ (ನ.7) ಸರಿಯಾಗಿ ಒಂದು ತಿಂಗಳು. ಅ.7ರಂದು ಚೆನ್ನೈನಲ್ಲಿ ಆರಂಭಗೊಂಡ ಪಂದ್ಯಾವಳಿ ಸದ್ಯ 5ನೇ ಚರಣವನ್ನು ಕಾಣುತ್ತಿದೆ. ಮೊದಲ ತಿಂಗಳಲ್ಲಿ ಯಾವ ತಂಡದ ಪ್ರದರ್ಶನ ಅತ್ಯುತ್ತಮವಾಗಿತ್ತು. ನಿರೀಕ್ಷೆ ಉಳಿಸಿಕೊಂಡವರಾರ‍ಯರು, ಉಳಿಸಿಕೊಳ್ಳದವರಾರ‍ಯರು. ಅಚ್ಚರಿ ಮೂಡಿಸಿದ ತಂಡಗಳು ಯಾವ್ಯಾವು, ಅಗ್ರ ರೈಡರ್‌ಗಳ್ಯಾರು, ಅಗ್ರ ಡಿಫೆಂಡರ್‌ಗಳ್ಯಾರು. ಈ ಎಲ್ಲಾ ವಿಶ್ಲೇಷಣೆ ಇಲ್ಲಿದೆ.

ಬೆಂಗಳೂರು(ನ.08):  ಪ್ರೊ ಕಬಡ್ಡಿಯಲ್ಲಿ ಮೊದಲ ಆವೃತ್ತಿಯಿಂದಲೂ ಆಡುತ್ತಿರುವ ಬೆಂಗಳೂರು ಬುಲ್ಸ್‌, ಈ ವರ್ಷ ನೀಡುತ್ತಿರುವ ಪ್ರದರ್ಶನದ ರೀತಿ ಯಾವ ವರ್ಷವೂ ನೀಡಿರಲಿಲ್ಲ. ಈ ವರ್ಷ ಉಳಿದೆಲ್ಲಾ ತಂಡಗಳಿಗೆ ಹೋಲಿಸಿದರೆ ಅತಿ ಕಡಿಮೆ ಪಂದ್ಯವಾಡಿರುವ ಬುಲ್ಸ್‌ ಈಗಾಗಲೇ ಪ್ಲೇ-ಆಫ್‌ಗೇರುವ ನೆಚ್ಚಿನ ತಂಡ ಎಂದು ಕರೆಸಿಕೊಳ್ಳುತ್ತಿದೆ. ಆಡಿರುವ 6 ಪಂದ್ಯಗಳಲ್ಲಿ ಬುಲ್ಸ್‌ 5ರಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯವನ್ನು ಅತಿ ಕಡಿಮೆ ಅಂತರದಲ್ಲಿ ಸೋತಿದೆ. 26 ಅಂಕಗಳೊಂದಿಗೆ ಬುಲ್ಸ್‌ ‘ಬಿ’ ವಲಯದಲ್ಲಿ 2ನೇ ಸ್ಥಾನದಲ್ಲಿದೆ. ತಂಡ ಪ್ರತಿ ಪಂದ್ಯದಲ್ಲೂ ಸರಾಸರಿ 35.16 ಅಂಕಗಳನ್ನು ಕಲೆಹಾಕುತ್ತಿದ್ದು, 12 ತಂಡಗಳ ಪೈಕಿ ಇದು ಗರಿಷ್ಠವೆನಿಸಿದೆ. ಮೊದಲ ಸ್ಥಾನದಲ್ಲಿರುವ ಯು.ಪಿ.ಯೋಧಾ ಗಳಿಸಿರುವುದು 28 ಅಂಕ, ಆದರೆ ತಂಡ ಈಗಾಗಲೇ 11 ಪಂದ್ಯಗಳನ್ನು ಆಡಿದೆ.

ಬುಲ್ಸ್‌ ಯಶಸ್ಸಿಗೆ ಕಾರಣವೇನು?: ಕಳೆದ 5 ಆವೃತ್ತಿಗಳಲ್ಲಿ ಬೆಂಗಳೂರು ಬುಲ್ಸ್‌ ತಂಡದ ಸಂಯೋಜನೆಯಲ್ಲಿ ಎಡವಟ್ಟು ಮಾಡಿಕೊಳ್ಳುತ್ತಿತ್ತು. ತಾರಾ ರೈಡರ್‌ಗಳು ಇದ್ದರೆ, ಡಿಫೆಂಡರ್‌ಗಳ ಕೊರತೆ ಎದುರಾಗುತ್ತಿತ್ತು. ಕಳೆದ 2 ಆವೃತ್ತಿಗಳಲ್ಲಂತೂ ರೋಹಿತ್‌ ಕುಮಾರ್‌ಗೆ ಸರಿಯಾದ ಬೆಂಬಲ ನೀಡಬಲ್ಲ ರೈಡರ್ರೇ ತಂಡದಲ್ಲಿ ಇರಲಿಲ್ಲ. ಆದರೆ ಈ ಬಾರಿ ಆಟಗಾರರ ಹರಾಜಿನಲ್ಲಿ ಅಳೆದು ತೂಗಿ ತಂಡವನ್ನು ರಚಿಸಿಕೊಂಡ ಬುಲ್ಸ್‌ ತಕ್ಕ ಪ್ರತಿಫಲ ಪಡೆಯುತ್ತಿದೆ. ರೋಹಿತ್‌ ಕುಮಾರ್‌ ನಾಯಕತ್ವವನ್ನು ಅಚ್ಚುಕಟ್ಟಾಗಿ, ಯಾವುದೇ ಒತ್ತಡವಿಲ್ಲದೆ ನಿಭಾಯಿಸಲು ಸಾಧ್ಯವಾಗುತ್ತಿದೆ. ಕಾರಣ, ಪವನ್‌ ಶೆರಾವತ್‌ ತಂಡದ ನಂ.1 ರೈಡರ್‌ ಆಗಿ ಹೊರಹೊಮ್ಮಿದ್ದಾರೆ. 6 ಪಂದ್ಯಗಳಲ್ಲಿ ಪವನ್‌ ಬರೋಬ್ಬರಿ 79 ರೈಡಿಂಗ್‌ ಅಂಕಗಳನ್ನು ಹೆಕ್ಕಿದ್ದಾರೆ. ಪ್ರತಿ ಪಂದ್ಯದಲ್ಲಿ ಸರಾಸರಿ 13.17 ರೈಡಿಂಗ್‌ ಅಂಕ ಗಳಿಸುತ್ತಿರುವ ಪವನ್‌, ಈಗಾಗಲೇ 4 ಪಂದ್ಯಗಳಲ್ಲಿ 10ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. ತಂಡದ ಪಾಲಿನ ಡು ಆರ್‌ ಡೈ ರೈಡ್‌ ತಜ್ಞರಾಗಿಯೂ ಪವನ್‌ ಕಾರ್ಯನಿರ್ವಹಿಸುತ್ತಿದ್ದಾರೆ. 6 ಪಂದ್ಯಗಳಿಂದ 13 ಡು ಆರ್‌ ಡೈ ರೈಡ್‌ ಅಂಕ ಕಲೆಹಾಕಿದ್ದಾರೆ. ರೋಹಿತ್‌ ಕುಮಾರ್‌ 6 ಪಂದ್ಯಗಳಿಂದ 32 ರೈಡಿಂಗ್‌ ಅಂಕ ಗಳಿಸಿದ್ದಾರೆ.

ಕಾಶಿ ಆಲ್ರೌಂಡ್‌ ಆಟ: ಕಳೆದ ಆವೃತ್ತಿಗಳಲ್ಲಿ ತಾವು ಪ್ರತಿನಿಧಿಸುತ್ತಿದ್ದ ತಂಡಗಳ ನಂ.1 ರೈಡರ್‌ ಆಗಿ ಕಾಣಿಸಿಕೊಂಡಿದ್ದ ಕಾಶಿಲಿಂಗ್‌ ಅಡಕೆ, ಈ ಬಾರಿ ಬುಲ್ಸ್‌ನ 3ನೇ ರೈಡರ್‌ ಆಗಿದ್ದಾರೆ. ಪವನ್‌, ರೋಹಿತ್‌ಗೆ ತಕ್ಕ ಬೆಂಬಲ ನೀಡುತ್ತಿರುವ ಕಾಶಿ 6 ಪಂದ್ಯಗಳಲ್ಲಿ 32 ಅಂಕ ಗಳಿಸಿದ್ದಾರೆ. ವಿಶೇಷ ಎಂದರೆ ಈ ಬಾರಿ ಕಾಶಿಲಿಂಗ್‌ ಒಬ್ಬ ಡಿಫೆಂಡರ್‌ ಆಗಿಯೂ ಗಮನ ಸೆಳೆಯುತ್ತಿದ್ದಾರೆ. 6 ಪಂದ್ಯಗಳಲ್ಲಿ 13 ಟ್ಯಾಕಲ್‌ ಅಂಕಗಳನ್ನು ಅವರು ಗಳಿಸಿದ್ದಾರೆ.

ಈ ಮೂವರು ಆಟಗಾರರ ಜತೆ ಆಶಿಶ್‌ ಕುಮಾರ್‌, ಮಹೇಂದರ್‌ ಸಿಂಗ್‌, ಸಂದೀಪ್‌, ಜಸ್ಮೇರ್‌ ಸಿಂಗ್‌ ಗುಲಿಯಾ ತಂಡದ ಯಶಸ್ಸಿಗೆ ನೆರವಾಗುತ್ತಿದ್ದಾರೆ. ಉಳಿದೆಲ್ಲಾ ತಂಡಗಳಿಗಿಂತ ಕಡಿಮೆ ಪಂದ್ಯಗಳನ್ನು ಆಡಿದ್ದರೂ, ಬುಲ್ಸ್‌ 6 ಪಂದ್ಯಗಳಲ್ಲಿ ಒಟ್ಟು 148 ರೈಡಿಂಗ್‌ ಅಂಕ, 63 ಟ್ಯಾಕಲ್‌ ಅಂಕಗಳನ್ನು ಗಳಿಸಿದೆ. 9 ಬಾರಿ ಎದುರಾಳಿ ತಂಡಗಳನ್ನು ಆಲೌಟ್‌ ಮಾಡಿ, ಪಟ್ಟಿಯಲ್ಲಿ 5ನೇ ಸ್ಥಾನ ಪಡೆದುಕೊಂಡಿದೆ.

ಜೈಂಟ್ಸ್‌, ಮುಂಬಾ ಮಿಂಚು: ಕಳೆದ ಆವೃತ್ತಿಯ ರನ್ನರ್‌-ಅಪ್‌ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ಹಾಗೂ ಯು ಮುಂಬಾ ಈ ಆವೃತ್ತಿಯಲ್ಲಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿವೆ. ‘ಎ’ ವಲಯದಲ್ಲಿರುವ ಮುಂಬಾ 8 ಪಂದ್ಯಗಳಲ್ಲಿ 6ರಲ್ಲಿ ಜಯಿಸಿದರೆ, ಗುಜರಾತ್‌ 7 ಪಂದ್ಯಗಳಲಲ್ಲಿ 5ರಲ್ಲಿ ಗೆಲುವು ಪಡೆದಿದೆ. ಉಭಯ ತಂಡಗಳು ತಲಾ ಒಂದು ಪಂದ್ಯವನ್ನು ಟೈ ಮಾಡಿಕೊಂಡಿವೆ.

ಹಾಲಿ ಚಾಂಪಿಯನ್‌ ಪಾಟ್ನಾ ಪೈರೇಟ್ಸ್‌ ಈಗಾಗಲೇ 10 ಪಂದ್ಯಗಳಲ್ಲಿ 6ರಲ್ಲಿ ಸೋಲುಂಡಿದೆ. ತಮಿಳ್‌ ತಲೈವಾಸ್‌ ಸಹ 6ರಲ್ಲಿ ಸೋತಿದೆ. ಪುಣೇರಿ ಪಲ್ಟನ್‌ 13 ಪಂದ್ಯಗಳನ್ನು ಪೂರೈಸಿದ್ದು 6 ಜಯ, 6 ಸೋಲು ಕಂಡರೆ, ಯು.ಪಿ.ಯೋಧಾ 11 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 5ರಲ್ಲಿ ಸೋತಿದೆ. ತಂಡದ 3 ಪಂದ್ಯಗಳು ಟೈ ಆಗಿವೆ. ಬೆಂಗಾಲ್‌ ವಾರಿಯ​ರ್‍ಸ್ ಸ್ಥಿರ ಪ್ರರ್ದಶನ ಕಾಯ್ದುಕೊಳ್ಳುವಲ್ಲಿ ವಿಫಲವಾಗಿದೆ. ಜೈಪುರ ಪಿಂಕ್‌ ಪ್ಯಾಂಥ​ರ್‍ಸ್, ಹರ್ಯಾಣ ಸ್ಟೀಲ​ರ್‍ಸ್, ದಬಾಂಗ್‌ ಡೆಲ್ಲಿ ಹೀನಾಯ ಪ್ರದರ್ಶನ ಮುಂದುವರಿಸಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂಬೈನಲ್ಲಿ ಸಚಿನ್, ಛೆಟ್ರಿ ಭೇಟಿಯಾಗಲಿರುವ ಮೆಸ್ಸಿ; ಈ ಲಿಸ್ಟ್‌ನಲ್ಲಿದ್ದಾರೆ ಹಲವು ಸೆಲಿಬ್ರಿಟೀಸ್!
U19 Asia Cup: ಪಾಕಿಸ್ತಾನ ಎದುರು ಮುಗ್ಗರಿಸಿದ 14 ವರ್ಷದ ವೈಭವ್ ಸೂರ್ಯವಂಶಿ; ಸ್ಪರ್ಧಾತ್ಮಕ ಮೊತ್ತದತ್ತ ಯುವ ಪಡೆ ದಾಪುಗಾಲು