ಪೃಥ್ವಿ ಶಾ ಫೋಟೋ ಬಳಸಿದ ಕಂಪೆನಿಗಳಿಗೆ 1 ಕೋಟಿ ದಂಡ!

By Web DeskFirst Published Oct 10, 2018, 9:22 AM IST
Highlights

ವೆಸ್ಟ್ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ ಪೃಥ್ವಿ ಶಾ ಶತಕದ ಮೂಲಕ ದಾಖಲೆ ಬರೆದಿದ್ದರು. ಪೃಥ್ವಿಗೆ ಅಭಿನಂದನೆ ಸಲ್ಲಿಸೋ ನೆಪದಲ್ಲಿ ಸ್ವಿಗ್ಗಿ, ಫ್ರೀಚಾರ್ಜ್ ಸೇರಿದಂತೆ ಹಲವು ಕಂಪೆನಿಗಳು ಶಾ ಫೋಟೋ ಬಳಸಿ ಅಭಿನಂದನೆ ಸಲ್ಲಿಸಿತ್ತು. ಇದೀಗ ಈ ಕಂಪೆನಿಗಳಿಗೆ ನೊಟೀಸ್ ನೀಡಲಾಗಿದೆ. 
 

ನವದೆಹಲಿ(ಅ.10) : ಇತ್ತೀಚೆಗಷ್ಟೇ ರಾಜ್‌ಕೋಟ್‌ನಲ್ಲಿ ಮುಕ್ತಾಯವಾಗಿದ್ದ ವಿಂಡೀಸ್ ವಿರುದ್ಧದ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದ ಪೃಥ್ವಿ ಶಾ, ಅದೇ ಪಂದ್ಯದಲ್ಲಿ
ಭರ್ಜರಿ ಶತಕ ಬಾರಿಸುವ ಮೂಲಕ ದೇಶದ ಗಮನ ಸೆಳೆದಿದ್ದರು. ಉಪಹಾರ ಕಂಪನಿ ಸ್ವಿಗ್ಗಿ ಹಾಗೂ ಫ್ರಿಚಾರ್ಜ್ ಕಂಪನಿಗಳು, ಪೃಥ್ವಿಗೆ ಅಭಿನಂದನೆ ತಿಳಿಸುವುದಕ್ಕಾಗಿ ಅವರ ಫೋಟೋಗಳನ್ನು ಬಳಸಿ ಯಡವಟ್ಟು ಮಾಡಿಕೊಂಡಿವೆ. 

ಈ ಯಡವಟ್ಟಿಗೆ ಎರಡೂ ಕಂಪನಿಗಳು ತಲಾ ₹1 ಕೋಟಿ ದಂಡ ತೆರಬೇಕಾಗಿದೆ. ಪೃಥ್ವಿ, ವಾಣಿಜ್ಯ ವ್ಯವಹಾರಗಳನ್ನು ನೋಡಿಕೊಳ್ಳುವ ಬೇಸ್ ಲೈನ್ ಕಂಪನಿ, ‘ಅನುಮತಿಯಿಲ್ಲದೆ ಟ್ವೀಟರ್ ನಲ್ಲಿ ಪೃಥ್ವಿ ಶಾ ಫೋಟೊಗಳನ್ನು ಬಳಸಿದ್ದಕ್ಕಾಗಿ ತಲಾ ಒಂದು ಕೋಟಿ ದಂಡ ನೀಡಬೇಕು’ ಎಂದು ನೋಟೀಸ್ ನೀಡಲಾಗಿದೆ. 

ಇದು ಈ ಎರಡೂ ಕಂಪನಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದು ಆಟಗಾರರಿಗೆ ಮಾಡಿದ ಅನ್ಯಾಯ ಮಾತ್ರವಲ್ಲ ಜೊತೆಗೆ ಆಟಗಾರನ ಪ್ರಾಯೋಜಕತ್ವದ ಸಂಸ್ಥೆಗೂ ಮಾಡಿದ ಅನ್ಯಾಯ ವಾಗಿದೆ. ಎರಡೂ ಕಂಪೆನಿಗಳ ವಿರುದ್ಧ ಕಾ ನೂನು ಕ್ರಮ ಜರುಗಿಸಲಾಗುವುದು ಎಂದು ಸಂಸ್ಥೆ ಯ ವ್ಯವಸ್ಥಾಪಕ ನಿರ್ದೇಶಕ ತುಹಿನ್ ಮಿಶ್ರಾ ಹೇಳಿದ್ದಾರೆ. 

ಸ್ವಿಗ್ಗಿ, ಫ್ರೀಚಾರ್ಜ್, ಡ್ಯುರೆಕ್ಸ್ ಕಾಂಡೋಮ್ ಸೇರಿದಂತೆ ಹಲವು ಕಂಪೆನಿಗಳು ಪೃಥ್ವಿ ಶಾ ಶತಕವನ್ನ ಬಳಸಿಕೊಂಡಿತ್ತು. ಈ ಮೂಲಕ ತಮ್ಮ ಬ್ರ್ಯಾಂಡ್ ಪ್ರಮೋಶನ್ ನಡೆಸಿತ್ತು. ಇದೀಗ ಈ ಕಂಪೆನಿಗಳಿಗೆ ಬಿಸಿ ಮುಟ್ಟಿದೆ.

click me!