
ಬೆಂಗಳೂರು: ಈ ಬಾರಿ ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್‌ನ ನಾಯಕರಾಗಿ ಆಯ್ಕೆಯಾಗಿದ್ದ ಯುವ ಆಟಗಾರ ಅಂಕುಶ್ ರಾಠಿ, ತಂಡದ ಕಳೆದೆರಡು ಪಂದ್ಯಗಳಲ್ಲಿ ಕಾಣಿಸಿಕೊಂಡಿಲ್ಲ. ಮುಖ್ಯ ಕೋಚ್ ಬಿ.ಸಿ.ರಮೇಶ್ ಜೊತೆಗಿನ ಮನಸ್ತಾಪ ಅಥವಾ ಇನ್ಯಾವುದೋ ಕಾರಣದಿಂದ ಅವರನ್ನು ತಂಡದಿಂದ ಹೊರಗಿಡಲಾಗಿದೆ ಎಂದು ಹೇಳಲಾಗುತ್ತಿದೆ.
ಅಂಕುಶ್ ಆರಂಭಿಕ 2 ಪಂದ್ಯಗಳಲ್ಲಿ ತಂಡದ ನಾಯಕತ್ವ ವಹಿಸಿದ್ದರು. ಆದರೆ ಯು ಮುಂಬಾ, ಪಾಟ್ನಾ ಪೈರೇಟ್ಸ್ ವಿರುದ್ಧ ಆಡಿರಲಿಲ್ಲ. ಈ ನಡುವೆ ಅವರು ಸಾಮಾಜಿಕ ತಾಣಗಳಲ್ಲಿ ಬುಲ್ಸ್ ಖಾತೆಯನ್ನು ಅನ್‌ಫಾಲೋ ಮಾಡಿ, ತಂಡಕ್ಕೆ ಸಂಬಂಧಿಸಿದ ಎಲ್ಲಾ ಪೋಸ್ಟ್‌ಗಳನ್ನು ಅಳಿಸಿಹಾಕಿದ್ದಾರೆ ಎಂದು
ತಿಳಿದುಬಂದಿದೆ. ಅಲ್ಲದೆ, ತಂಡ ಆಡಿರುವ 4 ಪಂದ್ಯಗಳಲ್ಲಿ ಮೂವರು ನಾಯಕರನ್ನು ಕಂಡಿದೆ. ಹೀಗಾಗಿ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ತಂಡದಲ್ಲಿ ಯಾವುದೇ ಮನಸ್ತಾಪ ಇಲ್ಲ ಎಂದು ಕೋಚ್ ರಮೇಶ್ ಅವರು 'ಕನ್ನಡಪ್ರಭ' ಸ್ಪಷ್ಟಪಡಿಸಿದ್ದಾರೆ.
ಅಂಕುಶ್ ಈಗಲೂ ತಂಡದ ಭಾಗ
ಅಂಕುಶ್ ಈಗಲೂ ಬೆಂಗಳೂರು ಬುಲ್ಸ್‌ನ ಭಾಗವಾಗಿದ್ದಾರೆ. ಮನಸ್ತಾಪ, ಬಿರುಕು ಎಂಬುದರ ಬಗ್ಗೆ ನಾನು ಏನೂ ಹೇಳಲ್ಲ. ಕಬಡ್ಡಿಯಲ್ಲಿ ಅದೆಲ್ಲವೂ ಸಹಜ. ತಂಡದ ಆಂತರಿಕ ವಿಷಯದ ಬಗ್ಗೆ ಮಾತನಾಡಲ್ಲ. ಆಟಗಾರರು ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದು ಬೆಂಗಳೂರು ಬುಲ್ಸ್ ಕೋಚ್ ಬಿ.ಸಿ.ರಮೇಶ್ ಹೇಳಿದ್ದಾರೆ.
ಡೆಲ್ಲಿ, ಟೈಟಾನ್ಸ್‌ಗೆ ಜಯ
ವಿಶಾಖಪಟ್ಟಣಂ: ಪ್ರೊ ಕಬಡ್ಡಿಯಲ್ಲಿ ಭಾನುವಾರ ಬೆಂಗಾಲ್ ವಿರುದ್ಧ ತೆಲುಗು ಟೈಟಾನ್ಸ್, ಜೈಪುರ ವಿರುದ್ಧ ದಬಾಂಗ್ ಡೆಲ್ಲಿ ಜಯಗಳಿಸಿದವು. ವಿಜಯ್ ಮಲಿಕ್ ಹಾಗೂ ಭರತ್ ಹೂಡಾ ದಾಖಲಿಸಿದ ಸೂಪರ್ 10 ಹಾಗೂ ಅಂಕಿತ್ ಹೈ ಫೈವ್ ನೆರವಿಂದ ತೆಲುಗು ಟೈಟಾನ್ಸ್ ತಂಡವು ಬೆಂಗಾಲ್ ವಾರಿಯರ್ಸ್ ಎದುರು 44-34 ಅಂತರದ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿದ ತೆಲುವು ಟೈಟಾನ್ಸ್ ತಂಡವು, ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್‌ಗೆ ಮೇಲುಗೈ ಸಾಧಿಸಲು ಅವಕಾಶವನ್ನೇ ನೀಡಲಿಲ್ಲ.
ಎರಡನೇ ಪಂದ್ಯದಲ್ಲಿ ಕೊನೆಯ ಕ್ಷಣದ ಎಡವಟ್ಟಿನಿಂದಾಗಿ ಜೈಪುರ ಪಿಂಕ್‌ಪ್ಯಾಂಥರ್ಸ್ ಸೋಲಿನ ಕಹಿಯುಂಡಿತು. ಕೊನೆಯ ಕ್ಷಣದವರೆಗೂ ರೋಚಕ ಕಾದಾಟಕ್ಕೆ ಸಾಕ್ಷಿಯಾದ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡವು 36-35 ಅಂಕ ಅಂತರದ ವಿರೋಚಿತ ಗೆಲುವು ಸಾಧಿಸಿತು.
ಭಾನುವಾರದ ದಿನದಾಟದ ಅಂತ್ಯದ ವೇಳೆಗೆ ಪುಣೇರಿ ಪಲ್ಟಾನ್ಸ್ ತಂಡವು 4 ಪಂದ್ಯಗಳಲ್ಲಿ ಮೂರು ಗೆಲುವು ಹಾಗೂ ಒಂದು ಸೋಲು ಸಹಿತ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಭದ್ರವಾಗಿದೆ. ಇನ್ನು ಯು ಮುಂಬಾ ಕೂಡಾ ಮೂರು ಗೆಲುವು ಹಾಗೂ ಒಂದು ಸೋಲು ಸಹಿತ ಆರು ಅಂಕ ಗಳಿಸಿ ಎರಡನೇ ಸ್ಥಾನದಲ್ಲಿದೆ. ಮತ್ತೊಂದೆಡೆ ದಬಾಂಗ್ ಡೆಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಭರ್ಜರಿ ಗೆಲುವು ಸಾಧಿಸಿ 6 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಇನ್ನು ತೆಲುಗು ಟೈಟಾನ್ಸ್ ತಂಡವು ಆಡಿದ 4 ಪಂದ್ಯಗಳ ಪೈಕಿ ಎರಡು ಗೆಲುವು ಹಾಗೂ ಎರಡು ಸೋಲುಗಳೊಂದಿಗೆ 4 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.