ಪ್ರೊ ಕಬಡ್ಡಿ ಟೂರ್ನಿಯ 49ನೇ ಪಂದ್ಯದಲ್ಲಿ ಯು ಮುಂಬಾ ತಂಡವನ್ನು ಮಣಿಸಿ ಹರಿಯಾಣ ಸ್ಟೀಲರ್ಸ್ ತಂಡವು ಅಂಕಪಟ್ಟಿಯಲ್ಲಿ ಮೇಲೇರಿದೆ. ಇನ್ನೊಂದು ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು ಯು.ಪಿ ಯೋಧಗೆ ಶರಣಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಚೆನ್ನೈ(ಆ.20): ತಾರಾ ರೈಡರ್ ವಿಕಾಸ್ ಕಂಡೋಲ ಭರ್ಜರಿ ರೈಡಿಂಗ್ ನೆರವಿನಿಂದ ಹರ್ಯಾಣ ಸ್ಟೀಲರ್ಸ್ ಸೋಮವಾರದ ಮೊದಲ ಪಂದ್ಯದಲ್ಲಿ ಯು ಮುಂಬಾ ವಿರುದ್ಧ 30-27 ಅಂಕಗಳಲ್ಲಿ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಹರ್ಯಾಣ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ.
ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ ಪ್ರಕಟ!
ಪ್ರೊ ಕಬಡ್ಡಿ 7ನೇ ಆವೃತ್ತಿಯ 49ನೇ ಪಂದ್ಯದ ಮೊದಲಾರ್ಧದಲ್ಲಿ ಹರ್ಯಾಣ ಉತ್ತಮ ಪ್ರದರ್ಶನ ನೀಡಿತು. ಅದ್ಭುತ ಪ್ರದರ್ಶನ ಮುಂದುವರಿಸಿದ ವಿಕಾಸ್ ಆವೃತ್ತಿಯಲ್ಲಿ 50ನೇ ರೈಡ್ ಅಂಕ ಸಂಪಾದಿಸಿದರು. ತಂಡದ ಡಿಫೆಂಡರ್‌ಗಳು ವಿಕಾಸ್‌ಗೆ ಸೂಕ್ತ ಬೆಂಬಲ ಒದಗಿಸಿದ್ದರಿಂದ ಮೊದಲಾರ್ಧದ ಮುಕ್ತಾಯಕ್ಕೆ ಹರ್ಯಾಣ 16-8ರ ಮುನ್ನಡೆ ಪಡೆಯಿತು. ದ್ವಿತೀಯಾರ್ಧಲ್ಲೂ ಮುನ್ನಡೆ ಕಾಯ್ದುಕೊಂಡ ಹರ್ಯಾಣ, ಈ ಆವೃತ್ತಿಯಲ್ಲಿ 5ನೇ ಗೆಲುವು ದಾಖಲಿಸಿತು.
PKL7: ದಬಾಂಗ್ ದಿಲ್ಲಿ vs ಬೆಂಗಾಲ್ ವಾರಿಯರ್ಸ್ ನಡುವಿನ ಪಂದ್ಯ ರೋಚಕ ಟೈ!
ಯೋಧಾಗೆ ಶರಣಾದ ಪ್ಯಾಂಥರ್ಸ್
ಸೋಮವಾರ ನಡೆದ 2ನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಯು.ಪಿ.ಯೋಧಾ 31-24 ಅಂಕಗಳಲ್ಲಿ ಗೆಲುವು ಸಾಧಿಸಿತು. ಈ ಆವೃತ್ತಿಯಲ್ಲಿ ಯೋಧಾಗಿದು 3ನೇ ಗೆಲುವಾದರೆ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಜೈಪುರಕ್ಕೆ 2ನೇ ಸೋಲಾಗಿದೆ. ಯುವ ರೈಡರ್ ಸುರೀಂದರ್ ಗಿಲ್ 7 ರೈಡಿಂಗ್ ಅಂಕ ಗಳಿಸಿ ಯೋಧಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಯುವ ಡಿಫೆಂಡರ್ ಸುಮಿತ್ 4 ಟ್ಯಾಕಲ್ ಅಂಕ ಪಡೆದರು. ಜೈಪುರ ನಾಯಕ ದೀಪಕ್ ಹೂಡಾ 9 ಅಂಕ ಕಲೆಹಾಕಿದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.