ಬಿಸಿಸಿಐ ವಿರುದ್ಧ ಕಾನೂನು ಹೋರಾಟಕ್ಕೆ ಸಜ್ಜಾದ ಪಿಸಿಬಿ

Published : Dec 31, 2016, 05:16 PM ISTUpdated : Apr 11, 2018, 12:54 PM IST
ಬಿಸಿಸಿಐ ವಿರುದ್ಧ ಕಾನೂನು ಹೋರಾಟಕ್ಕೆ ಸಜ್ಜಾದ ಪಿಸಿಬಿ

ಸಾರಾಂಶ

2014ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ವರ್ಷಕ್ಕೆರಡು ಬಾರಿ ದ್ವಿಪಕ್ಷೀಯ ಕ್ರಿಕೆಟ್ ಸರಣಿಯನ್ನು ನಡೆಸುವ ಒಪ್ಪಂದವೊಂದಕ್ಕೆ ಉಭಯ ಕ್ರಿಕೆಟ್ ಮಂಡಳಿಗಳು ಸಹಿ ಹಾಕಿದ್ದವು. ಆದರೆ, ಆನಂತರ, ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧಗಳು ಹದಗೆಡುತ್ತಾ ಸಾಗಿದ್ದರಿಂದಾಗಿ ಉಭಯ ದೇಶಗಳ ನಡುವಿನ ಕ್ರಿಕೆಟ್ ಸರಣಿಗೂ ಮಂಕು ಕವಿದಿತ್ತು.

ಕರಾಚಿ(ಡಿ.31): ಭಾರತ ಹಾಗೂ ಪಾಕಿಸ್ತಾನಗಳ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ನಡೆಸಲು ಸಮ್ಮತಿಸದ ಭಾರತೀಯ ಕ್ರಿಕೆಟ್ ಮಂಡಳಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.

ಸುದ್ದಿಗಾರರಿಗೆ ಈ ವಿಚಾರ ತಿಳಿಸಿದ ಪಿಸಿಬಿ ಅಧ್ಯಕ್ಷ ಶಹರ್ಯಾರ್ ಖಾನ್, ‘‘ಪಿಸಿಬಿಯ ಆಡಳಿತ ಮಂಡಳಿಯು ಬಿಸಿಸಿಐ ವಿರುದ್ಧ ದಾವೆ ಹೂಡಲು ಒಪ್ಪಿಗೆ ನೀಡಿದೆ. ಉಭಯ ದೇಶಗಳ ನಡುವೆ ಪ್ರತಿವರ್ಷವೂ ಕ್ರಿಕೆಟ್ ಸರಣಿ ನಡೆಸುವ ಸಂಬಂಧ 2014ರಲ್ಲಿ ಎರಡೂ ಮಂಡಳಿಗಳು ಪರಸ್ಪರ ಮಾಡಿಕೊಂಡಿದ್ದ ಒಪ್ಪಂದವನ್ನು ಬಿಸಿಸಿಐ ಪ್ರತೀ ವರ್ಷ ನಿರ್ಲಕ್ಷಿಸುತ್ತಿರುವುದರಿಂದ ಆಗುತ್ತಿರುವ ನಷ್ಟವನ್ನು ಭಾರತೀಯ ಮಂಡಳಿಯೇ ತುಂಬಿಕೊಡಬೇಕೆಂಬ ವಾದವನ್ನು ಪಿಸಿಬಿ ಮಂಡಿಸಲಿದೆ’’ ಎಂದು ತಿಳಿಸಿದ್ದಾರೆ.

ಉಭಯ ದೇಶಗಳ ಸರಣಿಯು ಪದೇ ಪದೇ ರದ್ದಾಗುತ್ತಿರುವುದರಿಂದ ಪಿಸಿಬಿಯು ವರ್ಷಕ್ಕೆ ₹ 154 ಕೋಟಿ ರೂಪಾಯಿಯಷ್ಟು ನಷ್ಟ ಅನುಭವಿಸುತ್ತಿದೆಯೆಂದು ಪಿಸಿಬಿ ಹೇಳಿಕೊಂಡಿದೆ. ಬಿಸಿಸಿಐಯು, ಈ ನಷ್ಟವನ್ನು ತುಂಬಿಕೊಡಬೇಕು ಎನ್ನುವುದು ಅದರ ವಾದವಾಗಿದೆ.

ಏಕೆ ಸಮಸ್ಯೆ?

2014ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ವರ್ಷಕ್ಕೆರಡು ಬಾರಿ ದ್ವಿಪಕ್ಷೀಯ ಕ್ರಿಕೆಟ್ ಸರಣಿಯನ್ನು ನಡೆಸುವ ಒಪ್ಪಂದವೊಂದಕ್ಕೆ ಉಭಯ ಕ್ರಿಕೆಟ್ ಮಂಡಳಿಗಳು ಸಹಿ ಹಾಕಿದ್ದವು. ಆದರೆ, ಆನಂತರ, ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧಗಳು ಹದಗೆಡುತ್ತಾ ಸಾಗಿದ್ದರಿಂದಾಗಿ ಉಭಯ ದೇಶಗಳ ನಡುವಿನ ಕ್ರಿಕೆಟ್ ಸರಣಿಗೂ ಮಂಕು ಕವಿದಿತ್ತು.

ಇತ್ತೀಚಿನ ದಿನಗಳಲ್ಲಿ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳು ಮತ್ತಷ್ಟು ಹದಗೆಟ್ಟ ಹಿನ್ನೆಲೆಯಲ್ಲಿ ಪಾಕಿಸ್ತಾನದೊಂದಿಗೆ ಯಾವುದೇ ಕ್ರಿಕೆಟ್ ನಂಟು ಇಟ್ಟುಕೊಳ್ಳುವುದಿಲ್ಲವೆಂದು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಕಿಡಿಕಾರಿದ್ದರು. ಅಷ್ಟೇ ಅಲ್ಲದೆ, ,ಅಂತಾರಾಷ್ಟ್ರೀಯ ಟೂರ್ನಿಗಳ ವೇಳಾಪಟ್ಟಿ ತಯಾರಿಸುವಾಗ ಗುಂಪು ಹಂತದ ಪಂದ್ಯಗಳ ವೇಳೆ, ಭಾರತ ತಂಡವನ್ನು ಪಾಕಿಸ್ತಾನ ತಂಡದೊಟ್ಟಿಗೆ ಒಂದೇ ಗುಂಪಿನಲ್ಲಿ ಹಾಕದಿರುವಂತೆಯೂ ಬಿಸಿಸಿಐ, ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಗೆ (ಐಸಿಸಿ) ಬಿಸಿಸಿಐ ತಾಕೀತು ಮಾಡಿದೆ.

ಮರಳಿ ಯತ್ನಿಸುತ್ತಿದ್ದು ಪಿಸಿಬಿ

ಬಿಸಿಸಿಐನ ಈ ಕಠೋರ ಧೋರಣೆಯ ಹೊರತಾಗಿಯೂ ಪಿಸಿಬಿ, ಉಭಯ ದೇಶಗಳ ನಡುವಿನ ಕ್ರಿಕೆಟ್ ಬಾಂಧವ್ಯ ಬೆಳೆಸುವಂತೆ ಬಿಸಿಸಿಐ ಮೇಲೆ ಆಗಾಗ ಒತ್ತಡ ಹೇರುತ್ತಲೇ ಇತ್ತು. 2016ರ ಡಿಸೆಂಬರ್‌'ನಲ್ಲೂ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಸರಣಿ ನಡೆಸಬೇಕೆಂಬ ಒತ್ತಾಯ ಮಂಡಿಸಿತ್ತು. ಪಾಕಿಸ್ತಾನದಲ್ಲಿ ಬಂದು ಆಡಲು ಅಭದ್ರತೆಯ ಭೀತಿಯಿದ್ದರೆ ಯುಎಇ ಅಥವಾ ಶ್ರೀಲಂಕಾದಲ್ಲಿ ಸರಣಿ ನಡೆಸೋಣವೆಂದೂ ಪಿಸಿಬಿ, ಬಿಸಿಸಿಐ ಮನವೊಲಿಸಲು ಯತ್ನಿಸಿತ್ತು. ಆದರೆ, ಇದಕ್ಕೆ ಬಿಸಿಸಿಐ ಯಾವುದೇ ಉತ್ತರ ನೀಡಿರಲಿಲ್ಲ. ಇದರಿಂದ ಹತಾಶವಾಗಿರುವ ಪಿಸಿಬಿ, ಬಿಸಿಸಿಐ ವಿರುದ್ಧ ಮೊಕದ್ದಮೆ ಹೂಡಲು ನಿರ್ಧರಿಸಿದೆ.

ಒಪ್ಪಂದ ಮುಂದುವರಿಸದಿದ್ದರೆ ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಕಂಡುಕೊಳ್ಳುವ ಬೆದರಿಕೆಯನ್ನು ಪಿಸಿಬಿಯು ಈ ಹಿಂದೆಯೇ ಭಾರತೀಯ ಕ್ರಿಕೆಟ್ ಮಂಡಳಿಗೆ ಹಾಕಿತ್ತು. ಇದಕ್ಕೆ ಬಿಸಿಸಿಐ ಸೊಪ್ಪು ಹಾಕಿರಲಿಲ್ಲ. ಇದೀಗ, ಪಿಸಿಬಿ ನ್ಯಾಯಾಲಯದ ಕದ ತಟ್ಟಲು ನಿರ್ಧರಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?