
ನವದೆಹಲಿ(ಮಾ.15): ಆಫ್ರಿಕಾ ವೇಗಿ ಕಗಿಸೋ ರಬಾಡ ಹಾಗೂ ಆಸೀಸ್ ನಾಯಕ ಸ್ಟೀವ್ ಸ್ಮಿತ ನಡುವಿನ ವಿವಾದದ ಕುರಿತು ಪ್ರತಿಕ್ರಿಯಿಸಿರುವ ದಕ್ಷಿಣ ಆಫ್ರಿಕಾ ತಂಡದ ಮಾಜಿ ಎಡಗೈ ಸ್ಪಿನ್ನರ್ ಪೌಲ್ ಹ್ಯಾರಿಸ್ ಈ ವಿವಾದದಲ್ಲಿ ಕೊಹ್ಲಿ ಹೆಸರನ್ನು ಎಳೆದು ತಂದಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 'ಜೋಕರ್'(ಹಾಸ್ಯಗಾರ)ರಂತೆ ವರ್ತಿಸಿದ್ದರು. ಆದರೆ ಅವರ ಮೇಲೆ ಐಸಿಸಿ ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಕಿಡಿಕಾರಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರಬಾಡ ಐಸಿಸಿಯ 2ನೇ ಹಂತದ ನಿಯಮ ಉಲ್ಲಂಘನೆ ಮಾಡಿದ್ದರು. ಹೀಗಾಗಿ ಐಸಿಸಿ ರಬಾಡ ಮೇಲೆ 2 ಪಂದ್ಯಗಳ ನಿಷೇಧ ಹೇರಿದೆ. ಎದುರಾಳಿ ಆಟಗಾರನ ಮೇಲೆ ಅನುಚಿತ ವರ್ತನೆ ಹಾಗೂ ಉದ್ದೇಶಪೂರ್ವಕವಾಗಿ ದೈಹಿಕ ಸ್ಪರ್ಶ' ಮಾಡಿದ್ದರಿಂದ 2 ಪಂದ್ಯಗಳ ನಿಷೇಧಕ್ಕೆ ರಬಾಡ ಒಳಗಾಗಿದ್ದಾರೆ.
ಪ್ರಿಟೋರಿಯಾದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ವೇಳೆ ಚೆಂಡು ಒದ್ದೆಯಾಗಿದೆ ಎಂದು ಕೊಹ್ಲಿ ಪದೇ-ಪದೇ ಅಂಪೈರ್'ಗೆ ಮನವಿ ಮಾಡಿದ್ದರು. ಕೊಹ್ಲಿ ಮನವಿಯನ್ನು ಅಂಪೈರ್ ಪುರಸ್ಕರಿಸದಿದ್ದಾಗ ಚೆಂಡನ್ನು ನೆಲಕ್ಕೆ ಎಸೆದು ಅನುಚಿತ ವರ್ತನೆ ತೋರಿದ್ದರು. ಹೀಗಾಗಿ ಕೊಹ್ಲಿಗೆ ಐಸಿಸಿ ಪಂದ್ಯದ ಸಂಭಾವನೆಯ 25% ದಂಡ ಹಾಗೂ ಒಂದು ಋಣಾತ್ಮಕ(ಡಿಮೆರಿಟ್)ಅಂಕ ನೀಡಿತ್ತು. ಅದೇ ಪಂದ್ಯದಲ್ಲಿ ರಬಾಡಗೆ ಪಂದ್ಯದ ಸಂಭಾವನೆಯ 50% ದಂಡ ಹಾಗೂ 3 ಡಿಮೆರಿಟ್ ಅಂಕವನ್ನು ಐಸಿಸಿ ನೀಡಿತ್ತು.
ರಬಾಡ 24 ತಿಂಗಳೊಳಗಾಗಿ 8 ಡಿಮೆರಿಟ್ ಅಂಕ ಸಂಪಾದನೆ ಮಾಡಿದ್ದರಿಂದಾಗಿ ಐಸಿಸಿಯು ನಿಯಮದಂತೆ 2 ಪಂದ್ಯಗಳ ನಿಷೇಧ ಹೇರಿದೆ. ಆಸೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ವೇಳೆ ಸ್ಮಿತ್'ಗೆ ರಬಾಡ ಉದ್ದೇಶಪೂರ್ವಕವಾಗಿ ಭುಜಕ್ಕೆ ಭುಜ ತಾಗಿಸಿ ಐಸಿಸಿ ನಿಯಮ ಉಲ್ಲಂಘಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.