ಡೆವಿಲ್ಸ್ ಗುಡುಗಿಗೆ ನಡುಗಿದ ಲಯನ್ಸ್ : ಪಂತ್ ಸಿಕ್ಸ್'ರ್ಗಳ ಭರ್ಜರಿ ಆಟ

By Suvarna Web DeskFirst Published May 4, 2017, 6:17 PM IST
Highlights

ಸ್ಯಾಮ್ಸನ್ 61 ರನ್ ಗಳಿಸಿ ಔಟಾದರೆ, ಪಂತ್ 97 ರನ್‌ಗೆ ವಿಕೆಟ್ ಕಳೆದುಕೊಳ್ಳುವ ಮೂಲಕ ಐಪಿಎಲ್‌ನಲ್ಲಿ ಶತಕ ಬಾರಿಸಿದ ಅತಿ ಕಿರಿಯ ಬ್ಯಾಟ್ಸ್‌ಮನ್ ಎನ್ನುವ ದಾಖಲೆಯಿಂದ ವಂಚಿತರಾದರು. ಕೊನೆಯಲ್ಲಿ ಕೋರಿ ಆ್ಯಂಡರ್‌ಸನ್ ಹಾಗೂ ಶ್ರೇಯಸ್ ಅಯ್ಯರ್ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಐಪಿಎಲ್‌ನಲ್ಲಿ 2ನೇ ಅತಿಹೆಚ್ಚು ಮೊತ್ತ ಬೆನ್ನತ್ತಿದ ಕೀರ್ತಿಗೆ ಡೆಲ್ಲಿ ಪಾತ್ರವಾಯಿತು.

ನವದೆಹಲಿ(ಮೇ.04): ರಿಶಬ್ ಪಂತ್ (97: 43 ಎಸೆತ, 6 ಬೌಂಡರಿ, 9 ಸಿಕ್ಸರ್) ಹಾಗೂ ಸಂಜು ಸ್ಯಾಮ್ಸನ್ (61: 31 ಎಸೆತ, 7 ಸಿಕ್ಸರ್) ಸ್ಫೋಟಕ ಆಟದ ನೆರವಿನಿಂದ ಗುಜರಾತ್ ಲಯನ್ಸ್ ನೀಡಿದ 209 ರನ್‌ಗಳ ಗುರಿಯನ್ನು ಕೇವಲ 17.3 ಓವರ್‌ಗಳಲ್ಲಿ ಬೆನ್ನತ್ತಿದ ಡೆಲ್ಲಿ ಡೇರ್‌ಡೆವಿಲ್ಸ್ 7 ವಿಕೆಟ್‌ಗಳ ಗೆಲುವು ಸಾಧಿಸಿದೆ. ಆ ಮೂಲಕ ಪ್ಲೇ-ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಬೆಟ್ಟದಂಥ ಮೊತ್ತವನ್ನು ಬೆನ್ನತ್ತಲು ಇಳಿದ ಡೆಲ್ಲಿ, ಮೊದಲ ಓವರ್‌ನಿಂದಲೇ ಆಕ್ರಮಣಕಾರಿ ಆಟಕ್ಕಿಳಿಯಿತು. ನಾಯಕ ಕರುಣ್ ನಾಯರ್ 12 ರನ್ ಗಳಿಸಿ ಔಟಾದ ಬಳಿಕ, ಸ್ಯಾಮ್ಸನ್ ಜೊತೆಗೂಡಿದ ಪಂತ್, ಗುಜರಾತ್ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ತಳಿಸಿದರು. ಭಾರತದ ಈ ಇಬ್ಬರು ಯುವ ಬ್ಯಾಟ್ಸ್‌ಮನ್‌ಗಳ ಪ್ರಹಾರಕ್ಕೆ ರೈನಾ ಪಡೆ ನಲುಗಿ ಹೋಯಿತು. 63 ಎಸೆತಗಳಲ್ಲಿ ಈ ಜೋಡಿ 143 ರನ್ ಜೊತೆಯಾಟವಾಡಿತು.

ಸ್ಯಾಮ್ಸನ್ 61 ರನ್ ಗಳಿಸಿ ಔಟಾದರೆ, ಪಂತ್ 97 ರನ್‌ಗೆ ವಿಕೆಟ್ ಕಳೆದುಕೊಳ್ಳುವ ಮೂಲಕ ಐಪಿಎಲ್‌ನಲ್ಲಿ ಶತಕ ಬಾರಿಸಿದ ಅತಿ ಕಿರಿಯ ಬ್ಯಾಟ್ಸ್‌ಮನ್ ಎನ್ನುವ ದಾಖಲೆಯಿಂದ ವಂಚಿತರಾದರು. ಕೊನೆಯಲ್ಲಿ ಕೋರಿ ಆ್ಯಂಡರ್‌ಸನ್ ಹಾಗೂ ಶ್ರೇಯಸ್ ಅಯ್ಯರ್ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಐಪಿಎಲ್‌ನಲ್ಲಿ 2ನೇ ಅತಿಹೆಚ್ಚು ಮೊತ್ತ ಬೆನ್ನತ್ತಿದ ಕೀರ್ತಿಗೆ ಡೆಲ್ಲಿ ಪಾತ್ರವಾಯಿತು.

ಸಿಂಹಗಳ ಗರ್ಜನೆಗೆ ದಂಗಾದ ಡೆವಿಲ್ಸ್!

ಸತತ ವೈಲ್ಯದಿಂದಾಗಿ ಟೀಕೆಗೆ ಗುರಿಯಾಗಿದ್ದ ಗುಜರಾತ್ ಲಯನ್ಸ್ ತಂಡದ ಬಲಿಷ್ಠ ಬ್ಯಾಟಿಂಗ್ ಕ್ರಮಾಂಕ ಗುರುವಾರ ತನ್ನ ಸಾಮರ್ಥ್ಯಕ್ಕೆ ತಕ್ಕ ಆಟವಾಡಿತು. ಪ್ರಮುಖವಾಗಿ ತಂಡದ ಬ್ಯಾಟಿಂಗ್ ತಾರೆಯರಾದ ನಾಯಕ ಸುರೇಶ್ ರೈನಾ(77: 43 ಎಸೆತ, 5 ಬೌಂಡರಿ, 4 ಸಿಕ್ಸರ್) ಹಾಗೂ ದಿನೇಶ್ ಕಾರ್ತಿಕ್ (65: 34 ಎಸೆತ, 5 ಬೌಂಡರಿ, 5 ಸಿಕ್ಸರ್) ಅಬ್ಬರದ ಆಟದ ನೆರವಿನಿಂಂದ ಗುಜರಾತ್ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 208 ರನ್ ಪೇರಿಸಿತು.

ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟ ಗುಜರಾತ್ 2ನೇ ಓವರ್‌ನಲ್ಲೇ 10 ರನ್ ಗಳಿಸುವಷ್ಟರಲ್ಲಿ ಆರಂಭಿಕರಾದ ಬ್ರೆಂಡನ್ ಮೆಕ್ಕಲಂ ಹಾಗೂ ಡ್ವೇನ್ ಸ್ಮಿತ್ ವಿಕೆಟ್ ಕಳೆದುಕೊಂಡಿತು. ಸುರೇಶ್ ರೈನಾ ಕೇವಲ 2 ರನ್ ಗಳಿಸಿದ್ದಾಗ ಸ್ಲಿಪ್‌ನಲ್ಲಿದ್ದ ಶ್ರೇಯಸ್ ಅಯ್ಯರ್ ಕ್ಯಾಚ್ ಕೈಚೆಲ್ಲಿದ್ದು ಡೆಲ್ಲಿಗೆ ದುಬಾರಿಯಾಯಿತು. 3ನೇ ವಿಕೆಟ್‌ಗೆ ಕಾರ್ತಿಕ್ ಜತೆ ಸೇರಿ ರೈನಾ 72 ಎಸೆತಗಳಲ್ಲಿ 133 ರನ್ ಸೇರಿಸಿದರು. ಈ ಜೊತೆಯಾಟ ಲಯನ್ಸ್ ಬೃಹತ್ ಮೊತ್ತ ದಾಖಲಿಸಲು ಕಾರಣವಾಯಿತು. ಕಳಪೆಯಾಟದಿಂದ ಬಳಲಿದ್ದ ದಿನೇಶ್ ಕಾರ್ತಿಕ್, ಸೊಓಂೀಟಕ ಇನ್ನಿಂಗ್ಸ್ ಮೂಲಕ ಲಯಕ್ಕೆ ಮರಳಿದರು. ಆರೋನ್ ಫಿಂಚ್ (27) ಹಾಗೂ ಕೊನೆಯಲ್ಲಿ ರವೀಂದ್ರ ಜಡೇಜಾ 7 ಎಸೆತಗಳಲ್ಲಿ 2 ಸಿಕ್ಸರ್‌ಗಳೊಂದಿಗೆ 18 ರನ್ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.

ಟಿ20ಯಲ್ಲಿ ರೈನಾ ಮತ್ತಷ್ಟು ದಾಖಲೆ:

ಐಪಿಎಲ್‌ನಲ್ಲಿ 31ನೇ ಅರ್ಧಶತಕ ಸಿಡಿಸಿದ ರೈನಾ, ಭಾರತೀಯ ನೆಲದಲ್ಲಿ 5000 ರನ್ ಕಲೆಹಾಕಿದ 2ನೇ ಬ್ಯಾಟ್ಸ್‌ಮನ್ ಅನ್ನುವ ಕೀರ್ತಿಗೆ ಪಾತ್ರರಾದರು. ವಿರಾಟ್ ಕೊಹ್ಲಿ ಈ ಮೊದಲು ಈ ಸಾಧನೆ ಮಾಡಿದ್ದರು. ಇದರ ಜತೆಗೆ ಐಪಿಎಲ್‌ನಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದರು. 172 ಸಿಕ್ಸರ್‌ಗಳೊಂದಿಗೆ ರೈನಾ ಒಟ್ಟಾರೆ ಗರಿಷ್ಠ ಸಿಕ್ಸರ್ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.

ಸ್ಕೋರ್

ಗುಜರಾತ್ ಲಯನ್ಸ್: 208/7 (20)

ಡೆಲ್ಲಿ ಡೇರ್ ಡೇವಿಲ್ಸ್: 214/3(17.3)

ಪಂದ್ಯಶ್ರೇಷ್ಠ: ರಿಶಬ್ ಪಂತ್

click me!