ಕೊನೆಗೂ ಫಿಕ್ಸಿಂಗ್ ತಪ್ಪೊಪ್ಪಿಕೊಂಡ ಕನೇರಿಯಾ..!

By Web DeskFirst Published Oct 20, 2018, 12:27 PM IST
Highlights

ಅಲ್ ಜಜೀರಾ ವಾಹಿನಿಗೆ ಸಂದರ್ಶನ ನೀಡಿರುವ ಕನೇರಿಯಾ, ತಾವು ಇಂಗ್ಲೆಂಡ್ ಕೌಂಟಿಯಲ್ಲಿ ಆಡುತ್ತಿದ್ದ ವೇಳೆ ಎಸೆಕ್ಸ್ ತಂಡದ ತಮ್ಮ ಸಹ ಆಟಗಾರ ಮೆರ್ವಿನ್ ವೆಸ್ಟ್‌ಫೀಲ್ಡ್‌ರನ್ನು ‘ಕುಖ್ಯಾತ ಭಾರತೀಯ ಬುಕ್ಕಿ’ಗೆ ಪರಿಚಯಿಸಿ, ಹಣ ಪಡೆದು ಫಿಕ್ಸಿಂಗ್‌ನಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಿದ್ದಾಗಿ ಹೇಳಿದ್ದಾರೆ.

ಕರಾಚಿ(ಅ.20): ಪಾಕಿಸ್ತಾನದ ಮಾಜಿ ಲೆಗ್ ಸ್ಪಿನ್ನರ್ ದಾನಿಶ್ ಕನೇರಿಯಾ ತಮ್ಮ ವಿರುದ್ಧ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಆಜೀವ ನಿಷೇಧ ಹೇರಿದ 6 ವರ್ಷಗಳ ಬಳಿಕ ತಪ್ಪೊಪ್ಪಿಕೊಂಡಿದ್ದಾರೆ. 

ಅಲ್ ಜಜೀರಾ ವಾಹಿನಿಗೆ ಸಂದರ್ಶನ ನೀಡಿರುವ ಕನೇರಿಯಾ, ತಾವು ಇಂಗ್ಲೆಂಡ್ ಕೌಂಟಿಯಲ್ಲಿ ಆಡುತ್ತಿದ್ದ ವೇಳೆ ಎಸೆಕ್ಸ್ ತಂಡದ ತಮ್ಮ ಸಹ ಆಟಗಾರ ಮೆರ್ವಿನ್ ವೆಸ್ಟ್‌ಫೀಲ್ಡ್‌ರನ್ನು ‘ಕುಖ್ಯಾತ ಭಾರತೀಯ ಬುಕ್ಕಿ’ಗೆ ಪರಿಚಯಿಸಿ, ಹಣ ಪಡೆದು ಫಿಕ್ಸಿಂಗ್‌ನಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಿದ್ದಾಗಿ ಹೇಳಿದ್ದಾರೆ.

ವೇಗದ ಬೌಲರ್ ವೆಸ್ಟ್‌ಫೀಲ್ಡ್ 2012ರಲ್ಲಿ ತಪ್ಪೊಪ್ಪಿಕೊಂಡು 2 ತಿಂಗಳು ಜೈಲುವಾಸ ಹಾಗೂ 5 ವರ್ಷ ನಿಷೇಧ ಎದುರಿಸಿದ್ದರು. 2009ರ ಪ್ರೊ40 ದೇಸಿ ಪಂದ್ಯಾವಳಿಯ ಪಂದ್ಯವೊಂದರಲ್ಲಿ ಓವರಲ್ಲಿ 12 ರನ್ ಬಿಟ್ಟುಕೊಡಲು ಅವರು 6000 ಪೌಂಡ್ (ಅಂದಾಜು ₹5.76 ಲಕ್ಷ) ಪಡೆದಿದ್ದರು. ಈ ಪ್ರಕರಣದಲ್ಲಿ ಕನೇರಿಯಾ ಸಹ ಬಂಧನಕ್ಕೊಳಗಾಗಿದ್ದರು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅವರನ್ನು ಬಿಡುಗಡೆ ಮಾಡಲಾಗಿತ್ತು.

‘ಈ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ, ನಾನು ಅಮಾಯಕ’ ಎಂದು ಕನೇರಿಯಾ ಹಲವು ಬಾರಿ ಹೇಳಿಕೊಂಡಿದ್ದರು. ಜತೆಗೆ 2 ಬಾರಿ ತೀರ್ಪು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ನಿಷೇಧ ಹೇರಿದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ತಂಡದಿಂದಲೂ ಕನೇರಿಯಾ ಹೊರಬಿದ್ದರು. ಹಲವು ಬಾರಿ ಪ್ರಯತ್ನಿಸಿದರೂ ಅವರು ಮತ್ತೆ ತಂಡಕ್ಕೆ ಆಯ್ಕೆಯಾಗಲು ಸಾಧ್ಯವಾಗಲಿಲ್ಲ. 2010ರಲ್ಲಿ ಪಾಕಿಸ್ತಾನ ರಾಷ್ಟ್ರೀಯ ತಂಡದ ಪರ ಕನೇರಿಯಾ ಕೊನೆ ಬಾರಿಗೆ ಆಡಿದ್ದರು. 

click me!