
ಧನಂಜಯ ಎಸ್ ಹಕಾರಿ ಬೆಂಗಳೂರು
ಬೆಂಗಳೂರು(ಫೆ.01): ಟೆಸ್ಟ್ ಮತ್ತು ಏಕದಿನ ಸರಣಿ ಜಯಿಸಿ ಅತ್ಯಂತ ಆತ್ಮವಿಶ್ವಾಸದಲ್ಲಿದ್ದ ಭಾರತ ತಂಡವನ್ನು ಚುಟುಕು ಸರಣಿಯ ಆರಂಭಿಕ ಪಂದ್ಯದಲ್ಲಿ ಕೆಣಕಿದ್ದ ಪ್ರವಾಸಿ ಇಂಗ್ಲೆಂಡ್‌ಗೆ ಎರಡನೇ ಪಂದ್ಯದಲ್ಲಿ ತಿರುಗೇಟು ನೀಡಿದ ವಿರಾಟ್ ಕೊಹ್ಲಿ ಸಾರಥ್ಯದ ಟೀಂ ಇಂಡಿಯಾ ಇದೀಗ, ಉದ್ಯಾನ ನಗರಿಯಲ್ಲಿ ಇಂದು ನಡೆಯಲಿರುವ ಅಂತಿಮ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸಿ ಆ ಮೂಲಕ ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ.
ಟಿ20 ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಕಳಪೆ ಬ್ಯಾಟಿಂಗ್‌ನಿಂದ ಭಾರತ ತಂಡ ಕಂಗೆಟ್ಟಿತ್ತು. ಕರ್ನಾಟಕದ ಸ್ಟಾರ್ ಆಟಗಾರ ಲೋಕೇಶ್ ರಾಹುಲ್, ನಾಗ್ಪುರ ಪಂದ್ಯವನ್ನು ಹೊರತುಪಡಿಸಿದರೆ ಆರಂಭಿಕರಾಗಿ ವೈಫಲ್ಯ ಕಂಡಿದ್ದೆ ಹೆಚ್ಚಾಗಿದೆ. ಆದರೂ 2ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಆಕರ್ಷಕ ಅರ್ಧಶತಕ ಸಿಡಿಸಿದ್ದರ ಪರಿಣಾಮ ಭಾರತ ತಂಡದ ರೋಚಕ ಜಯಕ್ಕೆ ಕಾರಣರಾಗಿದ್ದರು. ಅಲ್ಲದೇ ರಾಹುಲ್ ಮತ್ತು ಯುವ ಆಟಗಾರ ಮನೀಶ್ ಪಾಂಡೆ ಸ್ಥಳೀಯ ಆಟಗಾರರಾಗಿರುವುದರಿಂದ ಎಲ್ಲರ ಕಣ್ಣು ಇವರಿಬ್ಬರ ಮೇಲೆ ನೆಟ್ಟಿದೆ. ಆರ್‌ಸಿಬಿ ತಂಡದ ನಾಯಕ ಕೊಹ್ಲಿ ಅವರಿಗೂ ಚಿನ್ನಸ್ವಾಮಿ ಮೈದಾನ ಚಿರಪರಿಚಿತವಾಗಿದೆ. ಹೀಗಾಗಿ ಭಾರತ ತಂಡ ನಿರೀಕ್ಷೆಯಂತೆ ಪ್ರಬಲವಾಗಿದೆ. ಹಾಗೆ ಭಾರತದ ಮಧ್ಯಮ ಕ್ರಮಾಂಕದಲ್ಲಿನ ಬ್ಯಾಟ್ಸ್‌ಮನ್‌ಗಳಾದ ಸುರೇಶ್ ರೈನಾ, ಮಹೇಂದ್ರ ಸಿಂಗ್ ಧೋನಿ ಮತ್ತು ಯುವರಾಜ್ ಸಿಂಗ್ ತಂಡದ ಬ್ಯಾಟಿಂಗ್‌ಗೆ ನೆರವಾಗಲಿದ್ದಾರೆ. ಕಳೆದ ಎರಡು ಟಿ20 ಪಂದ್ಯದಲ್ಲಿ ಭಾರತದ ಮಧ್ಯಮ ಕ್ರಮಾಂಕ ವೈಫಲ್ಯ ಹೊಂದಿತ್ತು. ಹೀಗಾಗಿ ಕೊಹ್ಲಿ ಪಡೆ ಬ್ಯಾಟಿಂಗ್‌ಗೆ ಹೆಚ್ಚಿನ ಒತ್ತು ನೀಡಿದ್ದು ಸರಿಸುಮಾರು 3 ಗಂಟೆಗೂ ಹೆಚ್ಚು ಕಾಲ ಮೈದಾನದಲ್ಲಿ ಬೆವರು ಸುರಿಸಿತು.
ಮಾರ್ಗನ್ ಪಡೆಗೆ ಜಯದ ವಿಶ್ವಾಸ:
ಇತ್ತ ಪ್ರವಾಸಿ ಇಂಗ್ಲೆಂಡ್ ತಂಡ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದು ಉತ್ತಮ ಜಯ ಸಾಧಿಸಿತ್ತು. ಇದೇ ವಿಶ್ವಾಸದಲ್ಲಿರುವ ಮಾರ್ಗನ್ ಪಡೆ ನಿರ್ಣಾಯಕ ಪಂದ್ಯದಲ್ಲಿ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿ ಕಣಕ್ಕಿಳಿಯುತ್ತಿದೆ. ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಂಡು ಎರಡು ತಿಂಗಳಾಗಿದ್ದು, ಮೊದಲ ಟಿ20ಯಲ್ಲಿ ಜಯಿಸಿದ್ದು ಹೊರತುಪಡಿಸಿದರೆ ಯಾವುದೇ ಪಂದ್ಯ ಗೆದ್ದಿಲ್ಲ. ಹೀಗಾಗಿ ಈ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸ ಆಂಗ್ಲರಲ್ಲಿದೆ.
ಇಂಗ್ಲೆಂಡ್ ತಂಡದಲ್ಲಿ ಜೋ ರೂಟ್, ನಾಯಕ ಇಯಾನ್ ಮಾರ್ಗನ್, ಬೆನ್ ಸ್ಟೋಕ್ಸ್, ಆರಂಭಿಕರಾದ ಜಾಸನ್ ರಾಯ್ ಮತ್ತು ಸ್ಯಾಮ್ ಬಿಲ್ಲಿಂಗ್ಸ್ ಬ್ಯಾಟಿಂಗ್ ವಿಭಾಗದಲ್ಲಿ ತಂಡಕ್ಕೆ ಬಲ ತುಂಬಿದ್ದಾರೆ. ಇನ್ನುಳಿದಂತೆ ಟೈಮಲ್ ಮಿಲ್ಸ್, ಲಿಯಾಮ್ ಪ್ಲಂಕೆಟ್, ಆಲ್ರೌಂಡರ್ ಬೆನ್ ಸ್ಟೋಕ್ಸ್ ಮತ್ತು ಮೋಯಿನ್ ಅಲಿ ತಂಡದ ಬೌಲಿಂಗ್‌ನಲ್ಲಿ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವ ಸಾಮರ್ಥ್ಯ ಹೊಂದಿದ್ದಾರೆ.
ಬಿಗಿಭದ್ರತೆ:
ಕ್ರೀಡಾಂಗಣಕ್ಕೆ ಹೆಚ್ಚಿನ ಭದ್ರತೆ ಒದಗಿಸಿದ್ದು, 3 ಎಸಿಪಿಗಳು, 6 ಮಂದಿ ಇನ್ಸ್'ಪೆಕ್ಟರ್‌ಗಳು, ಮಹಿಳಾ ಕಾನ್ಸ್‌ಟೇಬಲ್ ಸೇರಿದಂತೆ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.