ಇಂದಿನಿಂದ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಂ..! ಜೋಕೋವಿಚ್, ಕಾರ್ಲೊಸ್‌ ಆಲ್ಕರಜ್ ಮೇಲೆ ಎಲ್ಲರ ಕಣ್ಣು..!

By Kannadaprabha News  |  First Published Aug 28, 2023, 10:25 AM IST

ಇತ್ತೀಚೆಗಷ್ಟೇ ಜೋಕೋವಿಚ್‌ರನ್ನೇ ಸೋಲಿಸಿ ವಿಂಬಲ್ಡನ್‌ ಗೆದ್ದಿರುವ 20ರ ಆಲ್ಕರಜ್‌, ಯುಎಸ್‌ ಓಪನ್ ಪ್ರಶಸ್ತಿಯನ್ನು ಉಳಿಸಿಕೊಳ್ಳುವುದರ ಜೊತೆಗೆ 3ನೇ ಗ್ರ್ಯಾನ್‌ಸ್ಲಾಂ ಗೆಲ್ಲಲು ಕಾತರಿಸುತ್ತಿದ್ದಾರೆ.


ನ್ಯೂಯಾರ್ಕ್‌(ಆ.28): ವರ್ಷದ ಕೊನೆಯ ಗ್ರ್ಯಾನ್‌ಸ್ಲಾಂ ಟೂರ್ನಿಯಾಗಿರುವ ಯುಎಸ್‌ ಓಪನ್‌ ಟೆನಿಸ್‌ಗೆ ಸೋಮವಾರ ಚಾಲನೆ ಸಿಗಲಿದೆ. ಇದರೊಂದಿಗೆ ದಾಖಲೆಯ 23 ಗ್ರ್ಯಾನ್‌ಸ್ಲಾಂಗಳ ಒಡೆಯ ನೋವಾಕ್‌ ಜೋಕೋವಿಚ್‌ ಹಾಗೂ ಹಾಲಿ ಚಾಂಪಿಯನ್‌ ಕಾರ್ಲೊಸ್‌ ಆಲ್ಕರಜ್‌ರ ಪ್ರಶಸ್ತಿ ಫೈಟ್‌ಗೆ ಮತ್ತೊಂದು ವೇದಿಕೆ ಸಜ್ಜಾಗಿದೆ.

ಇತ್ತೀಚೆಗಷ್ಟೇ ಜೋಕೋವಿಚ್‌ರನ್ನೇ ಸೋಲಿಸಿ ವಿಂಬಲ್ಡನ್‌ ಗೆದ್ದಿರುವ 20ರ ಆಲ್ಕರಜ್‌, ಯುಎಸ್‌ ಓಪನ್ ಪ್ರಶಸ್ತಿಯನ್ನು ಉಳಿಸಿಕೊಳ್ಳುವುದರ ಜೊತೆಗೆ 3ನೇ ಗ್ರ್ಯಾನ್‌ಸ್ಲಾಂ ಗೆಲ್ಲಲು ಕಾತರಿಸುತ್ತಿದ್ದಾರೆ. ಮತ್ತೊಂದೆಡೆ 2018ರಲ್ಲಿ ಕೊನೆ ಬಾರಿ ಯುಎಸ್‌ ಓಪನ್‌ ಗೆದ್ದಿರುವ ಜೋಕೋ, ಒಟ್ಟಾರೆ 4ನೇ ಚಾಂಪಿಯನ್‌ ಪಟ್ಟದ ಮೇಲೆ ಕಣ್ಣಿಟ್ಟಿದ್ದಾರೆ. ಮೊದಲ ಸುತ್ತಲ್ಲಿ ಜೋಕೋಗೆ ಫ್ರಾನ್ಸ್‌ನ ಮುಲ್ಲರ್‌, ಆಲ್ಕರಜ್‌ಗೆ ಜರ್ಮನಿಯ ಕೂಪರ್‌ ಸವಾಲು ಎದುರಾಗಲಿದೆ. 2021ರ ಚಾಂಪಿಯನ್‌ ಡ್ಯಾನಿಲ್‌ ಮೆಡ್ವೆಡೆವ್‌, 2016ರ ಚಾಂಪಿಯನ್‌ ವಾಂವ್ರಿಕಾ, 2012ರ ಚಾಂಪಿಯನ್‌ ಆ್ಯಂಡಿ ಮರ್ರೆ, ಯುವ ತಾರೆಗಳಾದ ಹೋಲ್ಗರು ರ್‍ಯುನ್‌, ಕ್ಯಾಸ್ಪೆರ್‌ ರುಡ್‌, ಸೇರಿದಂತೆ ಹಲವರು ಪುರುಷರ ಸಿಂಗಲ್ಸ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

Tap to resize

Latest Videos

undefined

ಸತತ 2ನೇ ಪ್ರಶಸ್ತಿ ಮೇಲೆ ಇಗಾ ಚಿತ್ತ

ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವ ನಂ.1, ಹಾಲಿ ಚಾಂಪಿಯನ್‌ ಇಗಾ ಸ್ವಿಯಾಟೆಕ್‌ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದ್ದಾರೆ. ಕಳೆದ ಒಂದೂವರೆ ವರ್ಷದಲ್ಲಿ ಆಸ್ಟ್ರೇಲಿಯನ್‌ ಓಪನ್‌, ಯುಎಸ್‌ ಓಪನ್‌ ಹಾಗೂ 2 ಬಾರಿ ಫ್ರೆಂಚ್‌ ಓಪನ್‌ ಗೆದ್ದಿರುವ ಪೋಲೆಂಡ್‌ನ ಸ್ವಿಯಾಟೆಕ್‌ ಈ ಬಾರಿ ಮತ್ತೊಂದು ಗ್ರ್ಯಾನ್‌ಸ್ಲಾಂ ನಿರೀಕ್ಷೆಯಲ್ಲಿದ್ದಾರೆ. ಇದೇ ವೇಳೆ ಕಳೆದ ವರ್ಷ ಕ್ವಾರ್ಟರ್‌ನಲ್ಲಿ ಸೋತರೂ ತವರಿನ ಅಂಗಳದಲ್ಲಿ ಮೊದಲ ಬಾರಿ ಗ್ರ್ಯಾನ್‌ಸ್ಲಾಂ ಪ್ರಶಸ್ತಿಗೆ ಮುತ್ತಿಡಲು 19ರ ಕೊಕೊ ಗಾಫ್‌ ಕಾಯುತ್ತಿದ್ದಾರೆ. 3 ಬಾರಿ ಯುಎಸ್‌ ಓಪನ್‌ ರನ್ನರ್‌-ಅಪ್‌, ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ, 2023ರ ವಿಂಬಲ್ಡನ್‌ ರನ್ನರ್‌-ಅಪ್‌, ಚೆಕ್‌ ಗಣರಾಜ್ಯದ ಮುಕೋವಾ, 2022ರ ವಿಂಬಲ್ಡನ್‌ ಚಾಂಪಿಯನ್‌, ಕಜಕಸ್ತಾನದ ಎಲೆನಾ ರಬೈಕೆನಾ, ಇತ್ತೀಚೆಗಷ್ಟೇ ವಿಂಬಲ್ಡನ್‌ ಗೆದ್ದ ಚೆಕ್‌ ಗಣರಾಜ್ಯದ ಮಾರ್ಕೆಟಾ ವೊಂಡ್ರೊಸೋವಾ ಕೂಡಾ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿದ್ದಾರೆ.

Neeraj Chopra: ಚಿನ್ನದ ಹುಡುಗ ನೀರಜ್‌ ಚೋಪ್ರಾ ಈಗ ‘ವಿಶ್ವ’ ವಿಜೇತ!

ಸ್ಯಾಫ್‌ ಅ-16 ಫುಟ್ಬಾಲ್‌: ಭಾರತ ತಂಡ ಪ್ರಕಟ

ನವದೆಹಲಿ: ಸೆ.1ರಿಂದ 10ರ ವರೆಗೆ ಭೂತಾನ್‌ನಲ್ಲಿ ನಡೆಯಲಿರುವ ಅಂಡರ್‌-16 ಸ್ಯಾಫ್‌ ಚಾಂಪಿಯನ್‌ಶಿಪ್‌ ಫುಟ್ಬಾಲ್‌ ಟೂರ್ನಿಗೆ 23 ಆಟಗಾರರ ಭಾರತ ತಂಡ ಪ್ರಕಟಗೊಂಡಿದೆ. ರೋಹಿತ್‌, ಸೂರಜ್‌ ಸಿಂಗ್‌, ವಿಶಾಲ್‌ ಯಾದವ್‌, ನ್ಯೂಟನ್‌ ಸಿಂಗ್‌, ಮೊಹಮದ್‌ ಕೈಫ್‌, ಬಾಬಿ ಸಿಂಗ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಟೂರ್ನಿಯಲ್ಲಿ ಭಾರತ ತಂಡ ‘ಎ’ ಗುಂಪಿನಲ್ಲಿ ಬಾಂಗ್ಲಾದೇಶ ಹಾಗೂ ನೇಪಾಳ ತಂಡಗಳ ಜೊತೆ ಸ್ಥಾನ ಗಿಟ್ಟಿಸಿಕೊಂಡಿವೆ. ಭೂತಾನ್‌, ಮಾಲ್ಡೀವ್ಸ್‌ ಹಾಗೂ ಪಾಕಿಸ್ತಾನ ತಂಡಗಳು ‘ಬಿ’ ಗುಂಪಿನಲ್ಲಿವೆ.

ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ​ ಚಿಂತೆ ಹೆಚ್ಚಿಸಿದ ಕೆ ಎಲ್‌ ರಾಹುಲ್ ಫಿಟ್​ನೆಸ್..!

ಮಹಿಳಾ ಹಾಕಿ ಫೈವ್ಸ್‌: ಭಾರತ ಸೆಮಿಫೈನಲ್‌ಗೆ

ಸಲಾಲ(ಒಮಾನ್‌): ಇಲ್ಲಿ ನಡೆಯುತ್ತಿರುವ ಮಹಿಳೆಯರ ಏಷ್ಯನ್ ಹಾಕಿ ಫೈವ್ಸ್‌ ವಿಶ್ವಕಪ್‌ ಅರ್ಹತಾ ಟೂರ್ನಿಯಲ್ಲಿ ಭಾರತ ತಂಡ ಹ್ಯಾಟ್ರಿಕ್‌ ಗೆಲುವಿನೊಂದಿಗೆ ಸೆಮಿಫೈನಲ್‌ ಪ್ರವೇಶಿಸಿದೆ. ಭಾನುವಾರ ಎಲೈಟ್‌ ಗುಂಪಿನ ಕೊನೆ ಪಂದ್ಯದಲ್ಲಿ ಭಾರತ, ಮಲೇಷ್ಯಾ ವಿರುದ್ಧ 5-4 ಗೋಲುಗಳಿಂದ ರೋಚಕ ಗೆಲುವು ಸಾಧಿಸಿತು. ಮೋನಿಕಾ ಟೊಪ್ಪೊ 2, ನವ್‌ಜೋತ್ ಕೌರ್‌, ಮಹಿಮಾ, ಅಜ್ಮಿನಾ ತಲಾ 1 ಗೋಲು ಬಾರಿಸಿದರು. ಆರಂಭಿಕ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ 7-2 ಗೋಲುಗಳಿಂದ ಜಯಗಳಿಸಿದ್ದ ಭಾರತ, 2ನೇ ಪಂದ್ಯದಲ್ಲಿ ಜಪಾನನ್ನು 7-1ರಿಂದ ಮಣಿಸಿತ್ತು.

click me!