
ನ್ಯೂಯಾರ್ಕ್: ದಾಖಲೆಯ 25ನೇ ಗ್ರ್ಯಾನ್‌ಸ್ಲಾಂ ಟ್ರೋಫಿ ಗೆಲುವಿನ ಮೇಲೆ ಕಣ್ಣಿಟ್ಟಿರುವ ದಿಗ್ಗಜ ಟೆನಿಸಿಗ ನೋವಾಕ್ ಜೋಕೋವಿಚ್ ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಹಾಲಿ ಚಾಂಪಿಯನ್ ಅರೈನಾ ಸಬಲೆಂಕಾ ಕೂಡಾ ಗೆಲುವಿನ ಆರಂಭ ಪಡೆದಿದ್ದಾರೆ.
ಭಾನುವಾರ ಮಧ್ಯರಾತ್ರಿ ನಡೆದ ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಸರ್ಬಿಯಾ ಜೋಕೋವಿಚ್, ಅಮೆರಿಕದ ಲರ್ನರ್ ಟೀನ್ ವಿರುದ್ಧ 6-1, 7-6(3), 6-2 ನೇರ ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ಇದರೊಂದಿಗೆ ಅವರು ಟೂರ್ನಿಯಲ್ಲಿ ಮೊದಲ ಸುತ್ತಿನ ಗೆಲುವು-ಸೋಲಿನ ದಾಖಲೆಯನ್ನು 19-0ಗೆ ಹೆಚ್ಚಿಸಿದರು.
ಆದರೆ 38 ವರ್ಷದ ಜೋಕೋವಿಚ್ ಪಂದ್ಯದುದ್ದಕ್ಕೂ ಬಳಲಿದಂತೆ ಕಂಡುಬಂದರು. ಗಾಯದ ಸಮಸ್ಯೆ ಎದುರಾಗದಿದ್ದರೂ, ತೀರಾ ಸುಸ್ತಾಗಿದ್ದು ಗೋಚರಿಸುತ್ತಿತ್ತು. ಟೂರ್ನಿಯಲ್ಲಿ 5ನೇ ಟ್ರೋಫಿ ಗೆಲ್ಲಲು ಎದುರು ನೋಡುತ್ತಿರುವ ಮಾಜಿ ವಿಶ್ವ ನಂ.1 ಜೋಕೋವಿಚ್, 2ನೇ ಸುತ್ತಿನಲ್ಲಿ ಜಕಾರಿ ಸ್ವಜ್ದ ವಿರುದ್ಧ ಸೆಣಸಾಡಲಿದ್ದಾರೆ. ಇನ್ನು ಅಮೆರಿಕದ 4ನೇ ಶ್ರೇಯಾಂಕಿತ ಟೇಲರ್ ಫ್ರಿಟ್ಜ್, 6ನೇ ಶ್ರೇಯಾಂಕಿತ ಬೆನ್ ಶೆಲ್ಟನ್ ಕೂಡಾ 2ನೇ ಸುತ್ತು ಪ್ರವೇಶಿಸಿದರು.
75: ಗ್ರ್ಯಾನ್‌ಸ್ಲಾಂ ಟೂರ್ನಿಯ ಮೊದಲ ಸುತ್ತಿನಲ್ಲಿ ಸತತ 75 ಪಂದ್ಯ ಗೆದ್ದ ಮೊದಲ ಟೆನಿಸಿಗ ಜೋಕೋವಿಚ್
ಸಬಲೆಂಕಾಗೆ ಗೆಲುವು:
ಮಹಿಳಾ ಸಿಂಗಲ್ಸ್‌ನಲ್ಲಿ 3 ಗ್ರ್ಯಾನ್‌ಸ್ಲಾಂ ವಿಜೇತೆ, ಬೆಲಾರಸ್‌ನ ಸಬಲೆಂಕಾ 2ನೇ ಸುತ್ತಿಗೇರಿದರು. ಆರಂಭಿಕ ಸುತ್ತಿನಲ್ಲಿ ಅವರು ಸ್ವಿಜರ್‌ಲೆಂಡ್‌ನ ರೆಬೆಕಾ ಮಸರೋವಾ ವಿರುದ್ಧ 7-5, 6-1 ನೇರ ಸೆಟ್‌ಗಳಲ್ಲಿ ಜಯಗಳಿಸಿದರು. ಕಳೆದ ಬಾರಿ ಟೂರ್ನಿಯ ರನ್ನರ್-ಅಪ್, ಅಮೆರಿಕದ ಜೆಸ್ಸಿಕಾ ಪೆಗುಲಾ ಈಜಿಫ್ಟ್‌ನ ಮಯಾರ್ ಶೆರೀಫ್ ವಿರುದ್ಧ 6-0, 6-4 ಸೆಟ್‌ಗಳಲ್ಲಿ ಗೆದ್ದು 2ನೇ ಸುತ್ತಿಗೇರಿದರು. ಅಮೆರಿಕದ 10ನೇ ಶ್ರೇಯಾಂಕಿತ ಎಮ್ಮಾ ನವಾರೊ, 2 ಬಾರಿ ಆಸ್ಟ್ರೇಲಿಯನ್ ಓಪನ್ ವಿಜೇತ ವಿಕ್ಟೋರಿಯಾ ಅಜರೆಂಕಾ ಕೂಡಾ ಮೊದಲ ಸುತ್ತಿನ ಪಂದ್ಯಗಳಲ್ಲಿ ಗೆದ್ದರು.
ಮೆಡ್ವೆಡೆವ್ ಹೊರಕ್ಕೆ
ಈ ಬಾರಿ ಟೂರ್ನಿಯ ಪ್ರಮುಖ ಆಟಗಾರರಲ್ಲಿ ಓರ್ವರು ಎನಿಸಿಕೊಂಡಿದ್ದ 2021ರ ಚಾಂಪಿಯನ್, ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು. 13ನೇ ಶ್ರೇಯಾಂಕಿತ ಮೆಡ್ವೆಡೆವ್, ಫ್ರಾನ್ಸ್‌ನ ಬೆಂಜಮಿನ್ ಬೊನ್ಜಿ ವಿರುದ್ಧ 3-6, 5-7, 7-6(7/5), 6-0, 4-6 ಸೆಟ್‌ಗಳಲ್ಲಿ ಪರಾಭವಗೊಂಡರು.
ಎಮ್ಮಾ ಭರ್ಜರಿ ಶುಭಾರಂಭ
ಈ ಬಾರಿಯ ಯುಎಸ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ 2021ರ ಚಾಂಪಿಯನ್ ಎಮ್ಮಾ ರಾಡುಕಾನು ಭರ್ಜರಿ ಶುಭಾರಂಭ ಮಾಡಿದ್ದಾರೆ. ಬ್ರಿಟನ್‌ನ 22 ವರ್ಷದ ರಾಡುಕಾನು ಭಾನುವಾರ ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನಲ್ಲಿ, ಜಪಾನ್‌ನ ಶ್ರೇಯಾಂಕ ರಹಿತ ಎನಾ ಶಿಬಹರಾ ವಿರುದ್ಧ 6-1, 6-2 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ಕಳೆದ 4 ವರ್ಷಗಳಲ್ಲಿ ಒಮ್ಮೆಯೂ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೇರದ ರಾಡುಕಾನು, ಈ ಬಾರಿ ಪ್ರಶಸ್ತಿ ಬರ ನೀಗಿಸುವ ವಿಶ್ವಾಸದೊಂದಿಗೆ ಟೂರ್ನಿಗೆ ಕಾಲಿಟ್ಟಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.