
ಕೊಲೊಂಬೊ(ಸೆ.11): ಶ್ರೀಲಂಕಾ ತಂಡದ ಪಾಕಿಸ್ತಾನ ಪ್ರವಾಸ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ ಲಂಕಾದ ಹಿರಿಯ ಕ್ರಿಕೆಟಿಗರು ಪಾಕ್ ಪ್ರವಾಸ ಮಾಡಲು ಒಪ್ಪಿಲ್ಲ. ಇದರ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನ ಸಚಿವ ಫಾವದ್ ಚೌಧರಿ ಆರೋಪಿಸಿದ್ದರು. ಇದೀಗ ಪಾಕ್ ಸಚಿವನಿಗೆ ಶ್ರೀಲಂಕಾ ತಿರುಗೇಟು ನೀಡಿದೆ. ಇಷ್ಟೇ ಅಲ್ಲ ಪಾಕಿಸ್ತಾನದಲ್ಲಿನ ಭಯೋತ್ಪಾದಕತೆ ಹಾಗೂ ಅಭದ್ರತೆ ಈ ಹತಾಶೆಗೆ ಕಾರಣ ಎಂದಿದೆ.
ಇದನ್ನೂ ಓದಿ: ಪಾಕ್ ಪ್ರವಾಸಕ್ಕೆ ಲಂಕಾ ಕ್ರಿಕೆಟಿಗರ ಬಹಿಷ್ಕಾರ; ಭಾರತದ ಕೈವಾಡ ಎಂದ ಸಚಿವ!
ಶ್ರೀಲಂಕಾ ಸಚಿವ ಹರಿನ್ ಫರ್ನಾಂಡೋ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾರೆ. ಶ್ರೀಲಂಕಾ ಕ್ರಿಕೆಟಿಗರು ಪಾಕ್ ಪ್ರವಾಸದಿಂದ ಹಿಂದೆ ಸರಿಯುವ ನಿರ್ಧಾರದಲ್ಲಿ ಭಾರತದ ಕೈವಾಡಲಿಲ್ಲ. ಈ ಕುರಿತ ವರದಿಗಳು ಸತ್ಯಕ್ಕೆ ದೂರವಾಗಿದೆ. 2009ರ ಘಟನೆಯಿಂದ ಲಂಕಾ ಕ್ರಿಕೆಟಿಗರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ನಾವು ಕ್ರಿಕೆಟಿಗರ ನಿರ್ಧಾರವನ್ನು ಗೌರವಿಸುತ್ತೇವೆ. ಪಾಕ್ ಪ್ರವಾಸ ಮಾಡಲು ಬಯಸಿರುವ ಕ್ರಿಕೆಟಿಗರನ್ನು ತಂಡಕ್ಕೆ ಆಯ್ಕೆ ಮಾಡಿದ್ದೇವೆ. ಈ ತಂಡ ಪಾಕಿಸ್ತಾನದಲ್ಲಿ ಪಾಕ್ ತಂಡವನ್ನು ಮಣಿಸಲಿದೆ ಅನ್ನೋ ವಿಶ್ವಾಸವಿದೆ ಎಂದು ಹರಿನ್ ಫರ್ನಾಂಡೋ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಪಾಕ್ ಪ್ರವಾಸಕ್ಕೆ ನಕಾರ; ಭಾರತದ ಜೊತೆ ಟಿ20 ಸರಣಿಗೆ ಸಹಕಾರ!
ಲಸಿತ್ ಮಾಲಿಂಗ, ಎಂಜಲೋ ಮ್ಯಾಥ್ಯೂಸ್ ಸೇರಿದಂತೆ 10 ಕ್ರಿಕೆಟಿಗರು ಲಂಕಾ ಪ್ರವಾಸ ಮಾಡಲು ಹಿಂದೇಟು ಹಾಕಿದ್ದರು. ಇದರ ಬೆನ್ನಲ್ಲೇ ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫಾವದ್ ಚೌಧರಿ ಭಾರತದ ಮೇಲೆ ಗೂಬೆ ಕೂರಿಸಿದ್ದರು. ಐಪಿಎಲ್ ಟೂರ್ನಿಯಲ್ಲಿ ಅವಕಾಶ ಸಿಗಬೇಕಾದರೆ ಪಾಕ್ ಪ್ರವಾಸ ರದ್ದು ಮಾಡಿ ಎಂದು ಶ್ರೀಲಂಕಾ ಕ್ರಿಕೆಟಿಗರಿಗೆ ಭಾರತ ಬೆದರಿಕೆ ಒಡ್ಡಿದೆ. ಹೀಗಾಗಿ ಲಂಕನ್ನರು ನಿರ್ಧಾರ ಬದಲಿಸಿದ್ದಾರೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಕ್ರಿಕೆಟ್ ಸರಣಿ ಡೌಟ್; ನರಕ ಪ್ರವಾಸಕ್ಕೆ 10 ಲಂಕಾ ಕ್ರಿಕೆಟಿಗರ ನಕಾರ!
2009ರಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ಕ್ರಿಕೆಟಿಗರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಮಹೇಲಾ ಜಯವರ್ದನೆ ಸೇರಿದಂತೆ ಹಲವು ಲಂಕಾ ಕ್ರಿಕೆಟಿಗರು ಗಾಯಗೊಂಡಿದ್ದರು. ಈ ಘಟನೆಯಿಂದ ಪಾಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ನಿಂತು ಹೋಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.