ನಾವೇನು ಮಾಡಬೇಕೆಂದು ಹೊರಗಿಸನವರು ಹೇಳಬೇಕಿಲ್ಲ; ಸಚಿನ್ ಕಿಡಿ

By Suvarna Web DeskFirst Published Apr 5, 2018, 3:38 PM IST
Highlights

‘ನಮ್ಮ ದೇಶದಲ್ಲಿ ತಿಳುವಳಿಕೆ ಇರುವ ಅನೇಕ ಜನರಿದ್ದಾರೆ. ನಾವು ಯಾವಾಗ, ಎಲ್ಲಿ ಏನು ಮಾಡಬೇಕೆಂದು ಹೊರಗಿನವರು ಹೇಳಿಕೊಡುವ ಅಗತ್ಯವಿಲ್ಲ’ ಎಂದು ಸಚಿನ್ ತೆಂಡುಲ್ಕರ್ ಕಟುವಾಗಿ ಟೀಕಿಸಿದ್ದಾರೆ.

ಬೆಂಗಳೂರು(ಏ.05): ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಹೊಡೆದುರುಳಿಸಿದ ಭಾರತೀಯ ಸೇನೆ ವಿರುದ್ಧ ಟ್ವೀಟ್ ಮಾಡಿ ಅನಗತ್ಯ ವಿವಾದ ಸೃಷ್ಟಿಸಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ವಿರುದ್ಧ ಭಾರತೀಯ ಕ್ರಿಕೆಟಿಗರು ಗುಡುಗಿದ್ದಾರೆ.

ಮಂಗಳವಾರ ಅಫ್ರಿದಿ ಟ್ವೀಟ್ ಮಾಡಿದ ಬಳಿಕ, ಗೌತಮ್ ಗಂಭೀರ್ ಪ್ರತಿಕ್ರಿಯಿಸಿ, ಪಾಕ್ ಆಟಗಾರನಿಗೆ ಬಿಸಿ ಮುಟ್ಟಿಸಿದರು. ಸಚಿನ್ ತೆಂಡುಲ್ಕರ್, ಕಪಿಲ್ ದೇವ್, ವಿರಾಟ್ ಕೊಹ್ಲಿ, ಮೊಹಮದ್ ಕೈಫ್, ಸುರೇಶ್ ರೈನಾ ಸಹ ಪ್ರತಿಕ್ರಿಯಿಸಿದ್ದಾರೆ. ‘ನಮ್ಮ ದೇಶದಲ್ಲಿ ತಿಳುವಳಿಕೆ ಇರುವ ಅನೇಕ ಜನರಿದ್ದಾರೆ. ನಾವು ಯಾವಾಗ, ಎಲ್ಲಿ ಏನು ಮಾಡಬೇಕೆಂದು ಹೊರಗಿನವರು ಹೇಳಿಕೊಡುವ ಅಗತ್ಯವಿಲ್ಲ’ ಎಂದು ಸಚಿನ್ ತೆಂಡುಲ್ಕರ್ ಕಟುವಾಗಿ ಟೀಕಿಸಿದ್ದಾರೆ.

ಮುಂಬೈನಲ್ಲಿ ಸೌರವ್ ಗಂಗೂಲಿ ಅವರ ಆತ್ಮಚರಿತ್ರೆ ಬಿಡುಗಡೆ ಕಾರ್ಯಕ್ರಮದಲ್ಲಿ ಸಚಿನ್ ಪಾಲ್ಗೊಂಡಿದ್ದರು. ಇದೇ ವೇಳೆ ‘ಅಫ್ರಿದಿ ಯಾರು?, ಅವರ ಮಾತಿಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ’ ಎಂದು ಕಪಿಲ್ ಹೇಳಿದ್ದಾರೆ.

ಬೆಂಗಳೂರಲ್ಲಿ ಐಪಿಎಲ್ ತಯಾರಿ ನಡೆಸುತ್ತಿರುವ ವಿರಾಟ್ ಕೊಹ್ಲಿ, ‘ದೇಶದ ವಿಷಯ ಬಂದಾಗ, ಮೊದಲ ಆದ್ಯತೆ ದೇಶಕ್ಕೇ ಆಗಿರಲಿದೆ. ದೇಶದ ವಿರುದ್ಧ ಯಾರೇ ಮಾತನಾಡಿದರು ಅದನ್ನು ನಾನು ಬೆಂಬಲಿಸುವುದಿಲ್ಲ’ ಎಂದರು. ಇನ್ನು ಸುರೇಶ್ ರೈನಾ ‘ಕಾಶ್ಮೀರದಲ್ಲಿ ಹಿಂಸಾಚಾರ ನಿಲ್ಲಬೇಕು ಎಂದರೆ ಭಯೋತ್ಪಾದನೆ ನಿಲ್ಲಿಸುವಂತೆ ಪಾಕ್ ಸೇನೆಯನ್ನು ಅಫ್ರಿದಿ ಕೇಳಿಕೊಳ್ಳಲಿ’ ಎಂದು ಟ್ವೀಟ್ ಮಾಡಿದ್ದಾರೆ.

 

click me!