ಯಶಸ್ವಿ ಜೈಸ್ವಾಲ್‌ಗೆ ಸಚಿನ್ ತೆಂಡೂಲ್ಕರ್ ನೀಡಿದ ಗಿಫ್ಟ್ ಏನು?

First Published Jul 9, 2018, 2:57 PM IST
Highlights

ಪಾನಿಪೂರಿ ಮಾರಾಟ ಮಾಡಿ ಟೀಂ ಇಂಡಿಯಾ ಸೇರಿಕೊಂಡಿರುವು ಯಶಸ್ವಿ ಜೈಸ್ವಾಲ್ ಭವಿಷ್ಯ ಸ್ಟಾರ್ ಕ್ರಿಕೆಟಿಗ ಎಂದೇ ಗುರುತಿಸಿಕೊಂಡಿದ್ದಾರೆ. ಕಠಿಣ ಹಾದಿ ಸವೆಸಿ ಟೀಂ ಇಂಡಿಯಾಗೆ ಲಗ್ಗೆ ಇಟ್ಟಿರುವ ಜೈಸ್ವಾಲ್‌ಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ವಿಶೇಷ ಗಿಫ್ಟ್ ನೀಡಿದ್ದಾರೆ. ಸಚಿನ್ ನೀಡಿದ ವಿಶೇಷ ಉಡುಗೊರೆ ಏನು ಇಲ್ಲಿದೆ.

ಮುಂಬೈ(ಜು.09): ಟೆಂಟ್‌ನಲ್ಲಿ ಮಲಗಿ, ಪಾನಿಪೂರಿ ಮಾರಾಟ ಮಾಡಿ ಇದೀಗ ಟೀಂ ಇಂಡಿಯಾ ಅಂಡರ್ 19 ತಂಡ ಸೇರಿಕೊಂಡಿರುವ ಮುಂಬೈನ ಯಶಸ್ವಿ ಜೈಸ್ವಾಲ್‌ಗೆ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ವಿಶೇಷ ಉಡುಗೊರೆ ನೀಡಿದ್ದಾರೆ.

ಭಾರತ ತಂಡದ ಜೊತೆ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಯಶಸ್ವಿ ಜೈಸ್ವಾಲ್‌ಗೆ ಸಚಿನ್ ತೆಂಡೂಲ್ಕರ್ ದಿಢೀರ್ ಆಮಂತ್ರಣ ನೀಡಿದ್ದಾರೆ. ತಮ್ಮ ಮನೆಗೆ ಆಹ್ವಾನಿಸಿದ ಸಚಿನ್, ಜೈಸ್ವಾಲ್‌ಗೆ ಸ್ವತಃ ತಾವೇ ಸಹಿ ಹಾಕಿದ ಬ್ಯಾಟೊಂದನ್ನ ಉಡುಗೊರೆಯಾಗಿ ನೀಡಿದ್ದಾರೆ.

ಇಷ್ಟಕ್ಕೆ ಮುಗಿದಿಲ್ಲ, ವಿಶ್ವ ಕ್ರಿಕೆಟ್‌ನ ದಿಗ್ಗಜ ಸಚಿನ್ ತೆಂಡೂಲ್ಕರ್, ಯಶಸ್ವಿ ಜೈಸ್ವಾಲ್‌ಗೆ ಬ್ಯಾಟಿಂಗ್ ಟಿಪ್ಸ್ ನೀಡಿದ್ದಾರೆ. ಪರಿಸ್ಥಿತಿ ಹಾಗೂ ಒತ್ತಡವನ್ನ ನಿಭಾಯಿಸೋ ಕಲೆ ಕುರಿತು ಸಚಿನ್ ಸೂಚನೆ ನೀಡಿದ್ದಾರೆ.

ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಹಾಗೂ ಯಶಸ್ವಿ ಜೈಸ್ವಾಲ್ ಇಬ್ಬರೂ ಟೀಂ ಇಂಡಿಯಾ ಅಂಡರ್ 19 ತಂಡದ ಸದಸ್ಯರು. ಸಚಿನ್ ತೆಂಡೂಲ್ಕರ್ ಭೇಟಿಯಾಗಬೇಕೆಂದು ಜೈಸ್ವಾಲ್, ಅರ್ಜುನ್ ತೆಂಡೂಲ್ಕರ್ ಬಳಿ ಹೇಳಿಕೊಂಡಿದ್ದರು.

ಜೈಸ್ವಾಲ್ ಮನವಿ ಸಚಿನ್ ತೆಂಡೂಲ್ಕರ್ ಕಿವಿಗೆ ಬಿದ್ದ ತಕ್ಷಣವೇ ಬುಲಾವ್ ನೀಡಿದ್ದಾರೆ. ಜೈಸ್ವಾಲ್‌ನನ್ನ ಮನೆಗೆ ಕರೆಯಿಸಿಕೊಂಡು ಉಡುಗೊರೆ ನೀಡಿದ್ದಾರೆ. ಇಷ್ಟೇ ಅಲ್ಲ ಮುಂಬರುವ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಶುಭ ಹಾರೈಸಿದ್ದಾರೆ.

ಉತ್ತರ ಪ್ರದೇಶ ಮೂಲದ ಯಶಸ್ವಿ ಜೈಸ್ವಾಲ್ 11ನೇ ವಯಸ್ಸಿಗೆ ಮುಂಬೈ ನಗರಿಗೆ ಕಾಲಿಟ್ಟ. ಕ್ರಿಕೆಟಿಗನಾಗಬೇಕೆಂಬ ಕನಸಿನೊಂದಿಗೆ ಮುಂಬೈಗೆ ಬಂದಿಳಿದ ಜೈಸ್ವಾಲ್‌ಗೆ ಗುರಿ ಸಾಧಿಸಲು ಟೆಂಟ್‌ನಲ್ಲಿ ಮಲಗಿ, ಪಾನಿಪೂರಿ ಮಾರಾಟ ಮಾಡಿ ಕ್ರಿಕೆಟ್ ಕ್ಲಬ್ ಸೇರಿಕೊಂಡ.

ಇದನ್ನು ಓದಿ: ಪಾನಿಪೂರಿ ಮಾರುತ್ತಿದ್ದ ಹುಡುಗ ಈಗ ಟೀಂಇಂಡಿಯಾ ಕ್ರಿಕೆಟಿಗ

ಅದೆಷ್ಟೋ ದಿನಗಳನ್ನ ಖಾಲಿ ಹೊಟ್ಟೆಯಲ್ಲೇ ಮಲಗಿ, ತನ್ನ ಕನಸನ್ನ ಸಾಕಾರಗೊಳಿಸಿದ ಯಶಸ್ವಿ ಜೈಸ್ವಾಲ್ ಪ್ರತಿಯೊಬ್ಬರಿಗೂ ಮಾದರಿ. ತನ್ನ 17ನೇ ವಯಸ್ಸಿಗೆ ಟೀಂ ಇಂಡಿಯಾ ಅಂಡರ್ 19 ತಂಡ ಸೇರಿಕೊಂಡ ಯಶಸ್ವಿ ಜೈಸ್ವಾಲ್ ಇದೀಗ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದಾರೆ.

click me!