ಬೆಂಗಳೂರಿನಲ್ಲಿ ನೀರಜ್ ಚೋಪ್ರಾ ಮುಡಿಗೆ ಎನ್‌ಸಿ ಕ್ಲಾಸಿಕ್ ಕಿರೀಟ!

Naveen Kodase   | Kannada Prabha
Published : Jul 06, 2025, 08:42 AM IST
Neeraj Chopra

ಸಾರಾಂಶ

ಚೊಚ್ಚಲ ನೀರಜ್ ಚೋಪ್ರಾ ಕ್ಲಾಸಿಕ್‌ ಜಾವೆಲಿನ್‌ ಥ್ರೋ ಕೂಟದಲ್ಲಿ ನೀರಜ್ ಚೋಪ್ರಾ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ 86.18 ಮೀ. ದೂರಕ್ಕೆ ಜಾವೆಲಿನ್ ಎಸೆದು ಮೊದಲ ಸ್ಥಾನ ಪಡೆದರು.

ಸ್ಪಂದನ್‌ ಕಣಿಯಾರ್‌, ಕನ್ನಡಪ್ರಭ

ಬೆಂಗಳೂರು: ಚೊಚ್ಚಲ ಆವೃತ್ತಿಯ ನೀರಜ್‌ ಚೋಪ್ರಾ ಕ್ಲಾಸಿಕ್‌ ಜಾವೆಲಿನ್‌ ಥ್ರೋ ಕೂಟದಲ್ಲಿ ನೀರಜ್‌ ಅವರೇ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಸ್ಪರ್ಧೆಯಲ್ಲಿ ನೀರಜ್‌ 00.00 ಮೀ. ದೂರಕ್ಕೆ ಜಾವೆಲಿನ್‌ ಎಸೆದು ಮೊದಲ ಸ್ಥಾನ ಪಡೆದರು. ಕೀನ್ಯಾದ ಜೂಲಿಯಸ್‌ ಯೆಗೊ 84.51ಮೀ.ನೊಂದಿಗೆ 2ನೇ ಸ್ಥಾನ ಪಡೆದರೆ, ಶ್ರೀಲಂಕಾದ ರುಮೇಶ್‌ ಪತಿರಗೆ 84.34 ಮೀ.ನೊಂದಿಗೆ 3ನೇ ಸ್ಥಾನ ಪಡೆದರು.

ಭಾರೀ ನಿರೀಕ್ಷೆ ಮೂಡಿಸಿದ್ದ ಕೂಟಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು. ಪಶ್ಚಿಮದಿಂದ ಪೂರ್ವಕ್ಕೆ ಜೋರಾಗಿ ಗಾಳಿ ಬೀಸುತ್ತಿತ್ತು. ಗಾಳಿಯನ್ನು ಸೀಳಿಕೊಂಡು ಜಾವೆಲಿನ್‌ಗಳು ಆಗಸದಲ್ಲಿ ಶರವೇಗವಾಗಿ ಸಾಗಿ, ಬಾಗಿ ಧರೆಗಿಳಿಯುತ್ತಿದ್ದ ದೃಶ್ಯಗಳು ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿತ್ತು. ಸ್ಪರ್ಧೆಯಲ್ಲಿ 12 ಮಂದಿ ಅಥ್ಲೀಟ್‌ಗಳಿದ್ದರು. ಭಾರತದ ಸಾಹಿಲ್‌ ಸಿಲ್ವಾವ್‌ರಿಂದ ಆರಂಭಗೊಳ್ಳುತ್ತಿದ್ದ ಸುತ್ತು, ನೀರಜ್‌ರ ಎಸೆತಗಳೊಂದಿಗೆ ಮುಗಿಯುತ್ತಿತ್ತು.

 

ಮೊದಲ ಯತ್ನದಲ್ಲಿ ನೀರಜ್‌ ಫೌಲ್‌ ಮಾಡಿದರು. ಮೊದಲ ಯತ್ನದಲ್ಲಿ ಯಾವ ಅಥ್ಲೀಟ್‌ ಸಹ 80 ಮೀ. ತಲುಪಲಿಲ್ಲ. ಕೀನ್ಯಾದ ಜೂಲಿಯಸ್‌ ಯೆಗೊ ಎಸೆದ 79.97 ಮೀ. ಗರಿಷ್ಠ ಎನಿಸಿತು. 2ನೇ ಯತ್ನದಲ್ಲಿ ಯೆಗೊ 80.07 ಮೀ. ಎಸೆದರೆ, ಶ್ರೀಲಂಕಾರ ರುಮೇಶ್‌ ಪತಿರಗೆ 81.90 ಮೀ.ನೊಂದಿಗೆ ಮೊದಲ ಸ್ಥಾನಕ್ಕೇರಿದರು. ನೀರಜ್‌, 82.99 ಮೀ. ಎಸೆದು ರುಮೇಶ್‌ರನ್ನು ಹಿಂದಿಕ್ಕಿದರು. ಆದರೆ ರುಮೇಶ್‌ ತಮ್ಮ 3ನೇ ಯತ್ನದಲ್ಲಿ 84.34 ಮೀ. ಎಸೆದು ಮತ್ತೆ ಅಗ್ರಸ್ಥಾನಕ್ಕೇರಿದರು. ಈ ಮಧ್ಯೆ ಭಾರತದ ಸಚಿನ್‌ ಯಾದವ್‌ 82.33 ಮೀ.ನೊಂದಿಗೆ ಟಾಪ್‌-3 ರೇಸ್‌ಗೆ ಪ್ರವೇಶಿಸಿದರು. ನೀರಜ್‌ ತಮ್ಮ 3ನೇ ಯತ್ನದಲ್ಲಿ 86.18 ಮೀ. ದೂರಕ್ಕೆ ಎಸೆದು ಚಾಂಪಿಯನ್‌ಶಿಪ್‌ ಅನ್ನು ಬಹುತೇಕ ಖಚಿತಪಡಿಸಿಕೊಂಡರು.

 

3 ಯತ್ನಗಳ ಬಳಿಕ ಕೊನೆಯ 4 ಸ್ಥಾನಗಳಲ್ಲಿದ್ದ ಅಥ್ಲೀಟ್‌ಗಳು ಸ್ಪರ್ಧೆಯಿಂದ ಹೊರಬಿದ್ದರು. ಆ ಬಳಿಕ ಅಗ್ರ-3 ಸ್ಥಾನಕ್ಕಾಗಿ ಪೈಪೋಟಿ ತೀವ್ರಗೊಂಡಿತು. ಆದರೆ, ನೀರಜ್‌ರನ್ನು ಹಿಂದಿಕ್ಕಲು ಯಾರಿಗೂ ಸಾಧ್ಯವಾಗಲಿಲ್ಲ. 6ನೇ ಹಾಗೂ ಕೊನೆಯ ಯತ್ನದಲ್ಲಿ ನೀರಜ್, 82.22 ಮೀ. ದೂರಕ್ಕೆ ಎಸೆದು ಸ್ಪರ್ಧೆ ಮುಕ್ತಾಯಗೊಳಿಸಿದರು.

ಗೌರ್ನರ್‌, ಸಿಎಂ ಸಾಕ್ಷಿ

ಎನ್‌ಸಿ ಕ್ಲಾಸಿಕ್‌ ವೀಕ್ಷಿಸಲು ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಸೇರಿ ಹಲವು ಗಣ್ಯರು ಆಗಮಿಸಿದ್ದರು.

ಎಲ್ಲಿ ನೋಡಿದ್ರೂ ಪೊಲೀಸರು!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವ ವೇಳೆ ಆದ ಕಾಲ್ತುಳಿತ ದುರಂತ ಬೆಂಗಳೂರು ಪೊಲೀಸರು ಹೆಚ್ಚಿನ ಜಾಗೃತಿ ವಹಿಸುವಂತೆ ಮಾಡಿತು. ಕಂಠೀರವ ಕ್ರೀಡಾಂಗಣ ಹಾಗೂ ಸುತ್ತಮುತ್ತಲಿನ ಸ್ಥಳದಲ್ಲಿ ಎಲ್ಲಿ ನೋಡಿದರೂ ಪೊಲೀಸರೇ ಇದ್ದರು. ಭದ್ರತೆಗಾಗಿ ಆಗಮಿಸಿದ್ದ ಅಧಿಕಾರಿಯೊಬ್ಬರು ತಾವು ಇದೇ ಮೊದಲ ಬಾರಿಗೆ ಕಂಠೀರವ ಕ್ರೀಡಾಂಗಣಕ್ಕೆ ಬಂದಿರುವುದಾಗಿ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

14593 ಪ್ರೇಕ್ಷಕರು: ಎನ್‌ಸಿ ಕ್ಲಾಸಿಕ್‌ ಕೂಟದ ವೀಕ್ಷಣೆಗೆ ಕಂಠೀರವ ಕ್ರೀಡಾಂಗಣಕ್ಕೆ 14,593 ಪ್ರೇಕ್ಷಕರು ಆಗಮಿಸಿದ್ದರು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮದುವೆ ಮುಂದೂಡಿಕೆ ಬಳಿಕ ಸ್ಮೃತಿ ಮಂಧನಾ ಮೊದಲ ಪೋಸ್ಟ್: ನಿಶ್ಚಿತಾರ್ಥ ಉಂಗುರ ನಾಪತ್ತೆ! ಏನಾಯ್ತು ಎಂದ ಫ್ಯಾನ್ಸ್
ದಕ್ಷಿಣ ಆಫ್ರಿಕಾ ಎದುರಿನ ನಿರ್ಣಾಯಕ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಮೇಜರ್ ಚೇಂಜ್?