ನೀರಜ್‌ ಚೋಪ್ರಾಗೆ ಕೆಒಎ ಹಾಲ್‌ ಆಫ್‌ ಫೇಮ್‌ ಗೌರವ!

Naveen Kodase   | Kannada Prabha
Published : Jul 04, 2025, 09:08 AM IST
Neeraj Chopra and Karnataka Chief Minister Siddaramaiah

ಸಾರಾಂಶ

ಒಲಿಂಪಿಕ್ಸ್‌ ಮತ್ತು ವಿಶ್ವ ಚಾಂಪಿಯನ್‌ ನೀರಜ್‌ ಚೋಪ್ರಾ ಅವರನ್ನು ಕರ್ನಾಟಕ ಒಲಿಂಪಿಕ್‌ ಸಂಸ್ಥೆ (ಕೆಒಎ) ಹಾಲ್‌ ಆಫ್‌ ಫೇಮ್‌ಗೆ ಸೇರ್ಪಡೆಗೊಳಿಸಿ ಗೌರವಿಸಿದೆ. ಕರ್ನಾಟಕದ ಹೊರಗಿನ ಕ್ರೀಡಾಪಟುವೊಬ್ಬರನ್ನು ಹಾಲ್‌ ಆಫ್‌ ಫೇಮ್‌ಗೆ ಸೇರಿಸಿರುವುದು ಇದೇ ಮೊದಲು. 

ಬೆಂಗಳೂರು: ಭಾರತದ ತಾರಾ ಜಾವೆಲಿನ್‌ ಎಸೆತಗಾರ, ಒಲಿಂಪಿಕ್ಸ್‌ ಹಾಗೂ ಹಾಲಿ ವಿಶ್ವ ಚಾಂಪಿಯನ್‌ ನೀರಜ್‌ ಚೋಪ್ರಾ ಕರ್ನಾಟಕ ಒಲಿಂಪಿಕ್‌ ಸಂಸ್ಥೆ(ಕೆಒಎ) ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. ನೀರಜ್‌ರನ್ನು ಗುರುವಾರ ಕೆಒಎ ಹಾಲ್‌ ಫೇಮ್‌ಗೆ ಸೇರ್ಪಡೆಗೊಳಿಸಲಾಯಿತು.

ಕರ್ನಾಟಕದ ಕ್ರೀಡಾ ಸಾಧಕರನ್ನು ಗೌರವಿಸಲೆಂದೇ ಕಂಠೀರವ ಕ್ರೀಡಾಂಗಣದ ಬಳಿ ಇರುವ ಒಲಿಂಪಿಕ್ಸ್‌ ಸಂಸ್ಥೆ ಕಚೇರಿಯಲ್ಲಿ ಹಾಲ್‌ ಆಫ್‌ ಫೇಮ್‌ ಮ್ಯೂಸಿಯಂ ಇದೆ. ಇದಕ್ಕೆ ಮೊತ್ತ ಮೊದಲ ಬಾರಿ ಕರ್ನಾಟಕದ ಹೊರಗಿನ ಕ್ರೀಡಾಪಟುವಿನ ಸಾಧನೆಗಳ ವಿವರವಿರುವ ಫೋಟೋ ಸೇರಿಸಲಾಗಿದೆ. ಕೆಒಎ ಅಧ್ಯಕ್ಷ ಡಾ.ಕೆ.ಗೋವಿಂದರಾಜು ಅವರು ನೀರಜ್‌ರನ್ನು ಹಾಲ್‌ ಆಫ್‌ ಫೇಮ್‌ಗೆ ಸೇರ್ಪಡೆಗೊಳಿಸಿದರು. ಈ ವೇಳೆ ಕೆಒಎ ಕಾರ್ಯದರ್ಶಿ ಅನಂತರಾಜು, ಕ್ರೀಡಾ ಇಲಾಖೆ ಆಯುಕ್ತ ಚೇತನ್‌, ಕಾರ್ಯದರ್ಶಿ ನವೀನ್‌ ರಾಜ್‌ ಸಿಂಗ್‌ ಉಪಸ್ಥಿತರಿದ್ದರು. 

 

ನೀರಜ್‌ಗೆ ಸಿದ್ದರಾಮಯ್ಯ, ಕೆಒಎ ಸನ್ಮಾನ

ನೀರಜ್‌ ಚೋಪ್ರಾರನ್ನು ಬುಧವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ನಿವಾಸದಲ್ಲಿ ಸನ್ಮಾನಿಸಿದರು. ಈ ವೇಳೆ ನೀರಜ್‌ ಚೋಪ್ರಾ ಕ್ಲಾಸಿಕ್‌ ಕೂಟದ ವಿಶೇಷ ಜೆರ್ಸಿ ಕೂಡಾ ಬಿಡುಗಡೆ ಮಾಡಲಾಯಿತು. ಬಳಿಕ ಸಂಜೆ ನೀರಜ್‌ರನ್ನು ರಾಜ್ಯ ಒಲಿಂಪಿಕ್‌ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಜೊತೆಗೆ, ವಿಶೇಷ ಫಲಕ ಹಾಗೂ ₹5 ಲಕ್ಷ ನಗದು ಹಸ್ತಾಂತರಿಸಲಾಯಿತು.

ಕಂಠೀರವ ಕ್ರೀಡಾಂಗಣ ಅಂತಾರಾರಾಷ್ಟ್ರೀಯ ಮಾನದಂಡಗಳನ್ನು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಕರ್ನಾಟಕ ಸರ್ಕಾರ, ಕೆಒಎ ಮತ್ತು ಕ್ರೀಡಾ ಇಲಾಖೆಗೆ ಧನ್ಯವಾದ. ಕ್ರೀಡಾಪಟುಗಳಿಗೆ ವಿಶ್ವ ದರ್ಜೆಯ ಸೌಲಭ್ಯ ಒದಗಿಸಲು ಮತ್ತು ಅಭಿಮಾನಿಗಳಿಗೆ ಉತ್ಕೃಷ್ಟ ಅನುಭವವನ್ನು ನೀಡಲು ಇದರಿಂದ ನಮಗೆ ಸಾಧ್ಯವಾಗಲಿದೆ. ಇದಕ್ಕಾಗಿ ಶ್ರಮಿಸಿದ ಸಿಎಂ ಸಿದ್ದರಾಮಯ್ಯ, ಡಾ.ಕೆ.ಗೋವಿಂದರಾಜು ಹಾಗೂ ಎಲ್ಲರಿಗೂ ಧನ್ಯವಾದ.

- ನೀರಜ್‌ ಚೋಪ್ರಾ

ಭಾರತೀಯ ಖೋ ಖೋ ಉಪಾಧ್ಯಕ್ಷರಾಗಿ ರಾಜ್ಯದ ಲೋಕೇಶ್ವರ್‌ ಪುನರಾಯ್ಕೆ

ನವದೆಹಲಿ: ಭಾರತ ಖೋ ಖೋ ಫೆಡರೇಷನ್‌(ಕೆಕೆಎಫ್‌ಐ) ಉಪಾಧ್ಯಕ್ಷರಾಗಿ ಕರ್ನಾಟಕ ಖೋ ಖೋ ಸಂಸ್ಥೆ ಅಧ್ಯಕ್ಷ ಲೋಕೇಶ್ವರ್‌ ಪುನರಾಯ್ಕೆಯಾಗಿದ್ದಾರೆ. ಬುಧವಾರ ನಡೆದ ಆಡಳಿತ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಘೋಷಿಸಲಾಯಿತು. ಅಧ್ಯಕ್ಷರಾಗಿ ಬಿಜೆಪಿ ನಾಯಕ, ನವದೆಹಲಿಯ ಸುಧಾಂಶು ಮಿತ್ತಲ್‌ ಮರು ಆಯ್ಕೆಯಾದರು. ಲೋಕೇಶ್ವರ್‌ 2021ರಲ್ಲಿ ಮೊದಲ ಬಾರಿ ಕೆಕೆಎಫ್‌ಐ ಉಪಾಧ್ಯಕ್ಷರಾಗಿದ್ದರು. ಈ ಸಲ 2ನೇ ಅವಧಿಗೆ ಆಯ್ಕೆಯಾಗಿದ್ದಾರೆ.

ಅವರು 2010ರಿಂದಲೂ ಕರ್ನಾಟಕ ಖೋ ಖೋ ಸಂಸ್ಥೆಯಲ್ಲಿದ್ದು, ಮುಖ್ಯಸ್ಥ, ಕಾರ್ಯದರ್ಶಿ ಸೇರಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದಾರೆ. 2021ರಿಂದ ಅಧ್ಯಕ್ಷ ಸ್ಥಾನದಲ್ಲಿದ್ದು, 3 ತಿಂಗಳ ಹಿಂದೆ ಮರು ಆಯ್ಕೆಯಾಗಿದ್ದರು.

ಭಾರತ ಫುಟ್ಬಾಲ್‌ನ ಕೋಚ್‌ ಹುದ್ದೆಗೆ ಮಾರ್ಕೆಜ್‌ ಗುಡ್‌ಬೈ!

ನವದೆಹಲಿ: ಸತತ ಸೋಲುಗಳಿಂದ ಕಂಗೆಟ್ಟಿರುವ ಭಾರತ ಫುಟ್ಬಾಲ್‌ ತಂಡದ ಕೋಚ್‌ ಹುದ್ದೆಯನ್ನು ಮನೋಲೊ ಮಾರ್ಕೆಜ್‌ ತ್ಯಜಿಸಿದ್ದಾರೆ. ಭಾರತೀಯ ಫುಟ್ಬಾಲ್‌ ಒಕ್ಕೂಟ(ಎಐಎಫ್‌ಎಪ್‌) ಜೊತೆಗಿನ ಪರಸ್ಪರ ಮಾತುಕತೆ ಬಳಿಕ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

ಇಗೊರ್ ಸ್ಟಿಮಾಕ್‌ ವಜಾಗೊಂಡ ಬಳಿಕ ಸ್ಪೇನ್‌ನ ಮಾಜಿ ಫುಟ್ಬಾಲಿಗರಾದ ಮಾರ್ಕೆಜ್‌ರನ್ನು ಕಳೆದ ವರ್ಷ ಜೂನ್‌ನಲ್ಲಿ ಮುಖ್ಯ ಕೋಚ್‌ ಸ್ಥಾನಕ್ಕೆ ನೇಮಿಸಲಾಗಿತ್ತು. ಅವರ ಅವಧಿ 2026ರ ಜೂನ್‌ವರೆಗೂ ಇತ್ತು. ಆದರೆ ಒಂದು ವರ್ಷ ಅವಧಿ ಬಾಕಿ ಇದ್ದಾಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 56 ವರ್ಷದ ಮಾರ್ಕೆಜ್‌ ಅವಧಿಯಲ್ಲಿ ಭಾರತ 8 ಪಂದ್ಯಗಳನ್ನಾಡಿದ್ದು, ಕೇವಲ 1 ಪಂದ್ಯದಲ್ಲಿ ಮಾತ್ರ ಗೆದ್ದಿದೆ. ನೂತನ ಕೋಚ್‌ ಹುದ್ದೆಗೆ ಶೀಘ್ರದಲ್ಲೇ ಅರ್ಜಿ ಆಹ್ವಾನಿಸುವುದಾಗಿ ಎಐಎಫ್‌ಎಫ್‌ ತಿಳಿಸಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ