ಇಂದಿನಿಂದ ಬಹುನಿರೀಕ್ಷಿತ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಆರಂಭ
ಕೂಟದಲ್ಲಿ 202 ದೇಶಗಳ 2000ಕ್ಕೂ ಹೆಚ್ಚಿನ ಅಥ್ಲೀಟ್‌ಗಳು ಕಣಕ್ಕೆ
ಆ.27ರ ವರೆಗೆ ಕೂಟ ನಡೆಯಲಿದ್ದು, ಭಾರತದ 27 ಅಥ್ಲೀಟ್‌ಗಳು ಸ್ಪರ್ಧಿಸಲಿದ್ದಾರೆ
ಬುಡಾಪೆಸ್ಟ್(ಹಂಗೇರಿ): ಬಹುನಿರೀಕ್ಷಿತ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಇಲ್ಲಿ ಶನಿವಾರ ಆರಂಭಗೊಳ್ಳಲಿದ್ದು, ಭಾರತದ ತಾರಾ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ಕೂಟದಲ್ಲಿ 202 ದೇಶಗಳ 2000ಕ್ಕೂ ಹೆಚ್ಚಿನ ಅಥ್ಲೀಟ್‌ಗಳು ಕಣಕ್ಕಿಳಿಯಲಿದ್ದಾರೆ.
ಆ.27ರ ವರೆಗೆ ಕೂಟ ನಡೆಯಲಿದ್ದು, ಭಾರತದ 27 ಅಥ್ಲೀಟ್‌ಗಳು ಸ್ಪರ್ಧಿಸಲಿದ್ದಾರೆ. ಕಳೆದ ಬಾರಿ ಬೆಳ್ಳಿ ಗೆದ್ದಿದ್ದ ನೀರಜ್ ಚೋಪ್ರಾ ಈ ಸಲ ಚಿನ್ನ ಗೆಲ್ಲುವ ಫೇವರಿಟ್ ಎನಿಸಿದ್ದಾರೆ. ಉಳಿದಂತೆ 3000 ಮೀ. ಸ್ಟೀಪಲ್ ಚೇಸ್‌ನಲ್ಲಿ ಅವಿನಾಶ್ ಸಾಬ್ಳೆ, ಪಾರುಲ್ ಚೌಧರಿ, ಟ್ರಿಪಲ್ ಜಂಪ್‌ನಲ್ಲಿ ಎಲ್ಡೋಸ್ ಪೌಲ್, ಮಹಿಳೆಯರ ಹರ್ಡಲ್ಸ್‌ನಲ್ಲಿ ಜ್ಯೋತಿ ಯರ್ರಾಜಿ, ಲಾಂಗ್‌ಜಂಪ್‌ನಲ್ಲಿ ಮುರಳಿ ಶ್ರೀಶಂಕರ್, ಜೆಸ್ವಿನ್ ಆಲ್ಡ್ರಿನ್ ಪದಕ ಗೆಲ್ಲಲು ಎದುರು ನೋಡುತ್ತಿದ್ದಾರೆ. ಜಾವೆಲಿನ್‌ನಲ್ಲಿ ಕರ್ನಾಟಕದ ಡಿ.ಪಿ. ಮನು ಸಹ ಸ್ಪರ್ಧಿಸಲಿದ್ದಾರೆ.
ಈವರೆಗೆ 2 ಪದಕ ಗೆದ್ದಿದೆ ಭಾರತ!
1983ರಿಂದ ವಿಶ್ವ ಅಥ್ಲೆಟಿಕ್ಸ್ ಕೂಟ ನಡೆಯುತ್ತಿದ್ದು, ಈವರೆಗೆ ಭಾರತ ಕೇವಲ 2 ಪದಕಗಳನ್ನು ಗೆದ್ದಿದೆ. 2003ರ ಪ್ಯಾರಿಸ್ ವಿಶ್ವ ಕೂಟದ ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ಅಂಜು ಬಾಬಿ ಜಾರ್ಜ್ ಮೊದಲ ಪದಕ ತಂದುಕೊಟ್ಟಿದ್ದರು. ಕಳೆದ ವರ್ಷ ಅಮೆರಿಕದಲ್ಲಿ ನಡೆದಿದ್ದ ಕೂಟದಲ್ಲಿ ಪುರುಷರ ಜಾವೆಲಿನ್ ಎಸೆತದಲ್ಲಿ ನೀರಜ್ ಬೆಳ್ಳಿ ಪದಕ ಗೆದ್ದಿದ್ದರು. ಅಮೆರಿಕದ ಅಥ್ಲೀಟ್‌ಗಳೇ ವಿಶ್ವ ಕೂಟದಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದು, ಈವರೆಗೆ ಒಟ್ಟಾರೆ 414 ಪದಕ ಬಾಚಿಕೊಂಡಿದ್ದಾರೆ.
"ರಜೆ ಇದೆ, ಆದ್ರೂ...?": ವಿರಾಟ್ ಕೊಹ್ಲಿ ವರ್ಕೌಟ್ ಬಗ್ಗೆ ಹೇಳಿದ್ದೇನು? ವಿಡಿಯೋ ವೈರಲ್
ಜಾವಲಿನ್ ಪಟು ಕಿಶೋರ್‌ಗೆ ದೊರೆತ ಹಂಗೇರಿ ವೀಸಾ
ನವದೆಹಲಿ: ಭಾರತದ ಜಾವೆಲಿನ್ ಪಟು ಕಿಶೋರ್ ಜೆನಾಗೆ ಕೊನೆಗೂ ಹಂಗೇರಿ ವೀಸಾ ಸಿಕ್ಕಿದ್ದು, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಬುಧವಾರ ಕಿಶೋರ್‌ರ ವೀಸಾವನ್ನು ಹಂಗೇರಿ ದೂತಾವಾಸ ಕಚೇರಿ ರದ್ದುಗೊಳಿಸಿತ್ತು.
ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನ
ಬಾಕು(ಅಜರ್‌ಬೈಜಾನ್): ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಒಲಿದಿದೆ. ಶುಕ್ರವಾರ 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದ ಫೈನಲ್‌ನಲ್ಲಿ ಇಶಾ ಸಿಂಗ್ ಹಾಗೂ ಶಿವ ನರ್ವಾಲ್ ಅವರಿದ್ದ ತಂಡ ಟರ್ಕಿಯ ತರ್ಹಾನ್ ಹಾಗೂ ಯೂಸುಫ್ ವಿರುದ್ಧ 16-10 ಅಂಕಗಳಿಂದ ಜಯಗಳಿಸಿ ಚಿನ್ನಕ್ಕೆ ಮುತ್ತಿಟ್ಟಿತು. ಇದು ಕೂಟದಲ್ಲಿ ಭಾರತಕ್ಕೆ ಸಿಕ್ಕ 2ನೇ ಪದಕ. ಭಾರತ ಪದಕ ಪಟ್ಟಿಯಲ್ಲಿ ಸದ್ಯ 2ನೇ ಸ್ಥಾನದಲ್ಲಿದೆ. ಚೀನಾ 5 ಚಿನ್ನ, 2 ಕಂಚಿನೊಂದಿಗೆ ಅಗ್ರಸ್ಥಾನದಲ್ಲಿದೆ.