National Games 2022 ಸ್ವಜನಪಕ್ಷಪಾತ, ಭ್ರಷ್ಟಾಚಾರದಿಂದ ಕ್ರೀಡೆ ಈಗ ಮುಕ್ತವಾಗಿದೆ: ಮೋದಿ

By Kannadaprabha NewsFirst Published Sep 30, 2022, 10:02 AM IST
Highlights

ರಾಷ್ಟ್ರೀಯ ಗೇಮ್ಸ್‌ ಕ್ರೀಡಾಕೂಟಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
7 ವರ್ಷಗಳ ಬಳಿಕ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟ
ಗುಜರಾತಿನಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಕರ್ನಾಟಕ ಶುಭಾರಂಭ

ಅಹಮದಾಬಾದ್‌(ಸೆ.30):: 7 ವರ್ಷಗಳ ಬಳಿಕ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ‘ಭಾರತದಲ್ಲಿ ಈಗ ಕ್ರೀಡೆಯು ಸ್ವಜನಪಕ್ಷಪಾತ ಹಾಗೂ ಭ್ರಷ್ಟಾಚಾರದಿಂದ ಮುಕ್ತವಾಗಿದೆ’ ಎಂದರು. ‘ಈ ಮೊದಲು ನಮ್ಮ ಕ್ರೀಡಾಪಟುಗಳಿಗೆ ಸೂಕ್ತ ಅವಕಾಶ ಸಿಗುತ್ತಿರಲಿಲ್ಲ. ನಮ್ಮ ಸರ್ಕಾರ ಭ್ರಷ್ಟಾಚಾರವನ್ನು ಹೋಗಲಾಡಿಸಿ ವ್ಯವಸ್ಥೆಯನ್ನು ಸರಿದಾರಿಗೆ ತಂದಿದ್ದು, ಜಾಗತಿಕ ಮಟ್ಟದಲ್ಲಿ ಭಾರತೀಯ ಕ್ರೀಡಾಪಟುಗಳು ಮಿಂಚು ಹರಿಸುತ್ತಿದ್ದಾರೆ’ ಎಂದು ಮೋದಿ ಹೇಳಿದರು.

‘ನಮ್ಮ ಕ್ರೀಡಾಪಟುಗಳು ಈ ಹಿಂದೆಯೂ ಸಮರ್ಥರಿದ್ದರು. ಪದಕಗಳನ್ನು ಗೆಲ್ಲುವ ಈ ಅಭಿಯಾನ ಈ ಹಿಂದೆಯೇ ಶುರುವಾಗಬಹುದಿತ್ತು. ಆದರೆ ವೃತ್ತಿಪರತೆ ಬದಲಿಗೆ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ನಾವು ವ್ಯವಸ್ಥೆ ಬದಲಿಸಿ ಯುವಕರಲ್ಲಿ ಆತ್ಮವಿಶ್ವಾಸ ತುಂಬಿದ್ದೇವೆ’ ಎಂದ ಮೋದಿ, ‘ಕ್ರೀಡಾಕ್ಷೇತ್ರದಲ್ಲಿ ನಿಮ್ಮ ಗೆಲುವು ದೇಶದಲ್ಲಿ ಇನ್ನಿತರ ಕ್ಷೇತ್ರಗಳಲ್ಲೂ ಯಶಸ್ಸು ಸಾಧಿಸಲು ದಾರಿ ಮಾಡಿಕೊಡಲಿದೆ. ಕ್ರೀಡೆಯಲ್ಲಿನ ಯಶಸ್ಸು ಜಗತ್ತಿನ ಮುಂದೆ ದೇಶದ ಚಿತ್ರಣ ಸಹ ಬದಲಾಗುವಂತೆ ಮಾಡಲಿದೆ’ ಎಂದರು.

National Games 2022: ಇಂದಿನಿಂದ ರಾಷ್ಟ್ರೀಯ ಗೇಮ್ಸ್ ಆರಂಭ; ಗುಜರಾತ್ ಆತಿಥ್ಯ

ತಮ್ಮ ಸರ್ಕಾರ ಬರುವ ಮೊದಲು ಹಾಗೂ ಈಗಿನ ಪರಿಸ್ಥಿತಿಯ ಬಗ್ಗೆಯೂ ಮೋದಿ ಮಾತನಾಡಿದರು. ‘8 ವರ್ಷಗಳ ಹಿಂದೆ ಭಾರತ 100ಕ್ಕಿಂತ ಕಡಿಮೆ ಅಂತಾರಾಷ್ಟ್ರೀಯ ಕೂಟಗಳಲ್ಲಿ ಪಾಲ್ಗೊಳ್ಳುತ್ತಿತ್ತು. ಆದರೆ ಈಗ 300ಕ್ಕೂ ಹೆಚ್ಚು ಅಂ.ರಾ. ಕೂಟಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. 8 ವರ್ಷಗಳ ಹಿಂದೆ ಭಾರತೀಯ ಕ್ರೀಡಾಪಟುಗಳು 20-25 ಕ್ರೀಡೆಗಳಲ್ಲಷ್ಟೇ ಪಾಲ್ಗೊಳ್ಳುತ್ತಿದ್ದರು. ಈಗ 40ಕ್ಕೂ ಹೆಚ್ಚು ಕ್ರೀಡೆಗಳಲ್ಲಿ ನಮ್ಮವರು ಆಡುತ್ತಿದ್ದಾರೆ’ ಎಂದು ಮೋದಿ ಖುಷಿ ವ್ಯಕ್ತಪಡಿಸಿದರು.

ರಾಷ್ಟ್ರೀಯ ಗೇಮ್ಸ್‌ಗೆ ಪ್ರಧಾನಿ ನರೇಂದ್ರ ಮೋದಿಯಿಂದ ವೈಭವದ ಚಾಲನೆ

ಅಹಮದಾಬಾದ್‌: 36ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಅಹಮದಬಾದ್‌ನಲ್ಲಿ ಗುರುವಾರ ಅದ್ಧೂರಿ ಚಾಲನೆ ದೊರೆಯಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಹೆಸರಿನಲ್ಲೇ ಇರುವ ವಿಶ್ವದ ಅತಿದೊಡ್ಡ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಅ.10ರ ವರೆಗೂ ನಡೆಯಲಿರುವ ಕ್ರೀಡಾಕೂಟದಲ್ಲಿ ದೇಶದ 28 ರಾಜ್ಯ, 8 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 7000ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. ಉದ್ಘಾಟನಾ ಸಮಾರಂಭದ ವೇಳೆ ಭಾರತದ ಒಲಿಂಪಿಕ್‌ ಪದಕ ವಿಜೇತ ಕ್ರೀಡಾಪಟುಗಳಾದ ನೀರಜ್‌ ಚೋಪ್ರಾ, ಪಿ.ವಿ.ಸಿಂಧು, ಮೀರಾಬಾಯಿ ಚಾನು, ರವಿ ದಹಿಯಾ, ಮಾಜಿ ಕ್ರೀಡಾಪಟುಗಳಾದ ಗಗನ್‌ ನಾರಂಗ್‌, ಅಂಜು ಬಾಬಿ ಜಾಜ್‌ರ್‍ ಉಪಸ್ಥಿತರಿದ್ದರು.

Glittering start to the National Games! Have a look. pic.twitter.com/55sklhqYbr

— Narendra Modi (@narendramodi)

ಸಮಾರಂಭದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಖ್ಯಾತ ಗಾಯಕರಾದ ಶಂಕರ್‌ ಮಹದೇವನ್‌, ಮೋಹಿತ್‌ ಚೌಹಾಣ್‌ ಪ್ರದರ್ಶನ ನೀಡಿದರು. ನೂರಾರು ಕಲಾವಿದರ ನೃತ್ಯ ಪ್ರದರ್ಶನ ನೋಡುಗರ ಮನ ಸೆಳಯಿತು. ಸುಮಾರು 1 ಲಕ್ಷ ಜನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕ್ರೀಡಾಪಟುಗಳ ಪರವಾಗಿ ಭಾರತದ ತಾರಾ ಟೆನಿಸ್‌ ಆಟಗಾರ್ತಿ ಅಂಕಿತಾ ರೈನಾ ಪ್ರಮಾಣ ವಚನ ಸ್ವೀಕರಿಸಿದರು. ಕ್ರೀಡಾ ಜ್ಯೋತಿಯ ಮೆರವಣಿಗೆ ಸಹ ನಡೆಯಿತು.

ಟೆನಿಸ್‌: ಕರ್ನಾಟಕ ತಂಡ ಸೆಮಿಫೈನಲ್‌ ಪ್ರವೇಶ

ಅಹಮದಾಬಾದ್‌: ರಾಷ್ಟ್ರೀಯ ಗೇಮ್ಸ್‌ನಲ್ಲಿ ಕರ್ನಾಟಕ ಮಹಿಳಾ ಟೆನಿಸ್‌ ತಂಡ ಸೆಮಿಫೈನಲ್‌ ಪ್ರವೇಶಿಸಿದೆ. ಗುರುವಾರ ಅಂತಿಮ-8ರ ಸುತ್ತಿನಲ್ಲಿ ಉತ್ತರ ಪ್ರದೇಶ ವಿರುದ್ಧ 2-0 ಅಂತರದಲ್ಲಿ ಗೆಲುವು ಸಾಧಿಸಿತು. ಶುಕ್ರವಾರ ಸೆಮಿಫೈನಲ್‌ನಲ್ಲಿ ರಾಜ್ಯ ತಂಡಕ್ಕೆ ಆತಿಥೇಯ ಗುಜರಾತ್‌ ಎದುರಾಗಲಿದೆ. ಮತ್ತೊಂದು ಸೆಮೀಸ್‌ನಲ್ಲಿ ತಮಿಳುನಾಡು ಮತ್ತು ಮಹಾರಾಷ್ಟ್ರ ತಂಡಗಳು ಮುಖಾಮುಖಿಯಾಗಲಿವೆ.

ಇದೇ ವೇಳೆ, ಮಹಿಳೆಯರ 10 ಮೀ. ಏರ್‌ ರೈಫಲ್‌ ಶೂಟಿಂಗ್‌ನ ಫೈನಲ್‌ಗೆ ಕರ್ನಾಟಕದ ತಿಲೋತ್ತಮ ಸೇನ್‌ ಪ್ರವೇಶಿಸಿದ್ದಾರೆ. ಅರ್ಹತಾ ಸುತ್ತಿನಲ್ಲಿ 633.6 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದು ಫೈನಲ್‌ಗೇರಿದರು. ಶುಕ್ರವಾರ ಫೈನಲ್‌ನಲ್ಲಿ 8 ಶೂಟರ್‌ಗಳು ಸ್ಪರ್ಧಿಸಲಿದ್ದು, ತಿಲೋತ್ತಮ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

click me!