ಐಸಿಸಿ ಸಭೆಗೆ ಶ್ರೀನಿ ಭಾಗವಹಿಸುವಂತಿಲ್ಲ: ಸುಪ್ರೀಂ

By Suvarna Web DeskFirst Published Apr 17, 2017, 3:37 PM IST
Highlights

ಏಪ್ರಿಲ್ 10ರಂದೇ ಯಾವ ವ್ಯಕ್ತಿ ಬಿಸಿಸಿಐ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿರಲು ಅನರ್ಹರೋ ಅಂಥ ವ್ಯಕ್ತಿ ಐಸಿಸಿ ಸಭೆಗಳಿಗೆ ನಾಮ ನಿರ್ದೇಶನಗೊಳ್ಳುವಂತಿಲ್ಲ ಎಂದು ತಿಳಿಸಿತ್ತು.

ನವದೆಹಲಿ(ಏ.17): ಹಿತಾಸಕ್ತಿ ಸಂಘರ್ಷದಲ್ಲಿ ಸಿಲುಕಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರು ಮುಂದಿನ ವಾರ ದುಬೈನಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಅನರ್ಹರು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

ಏಪ್ರಿಲ್ 24ರಂದು ನಡೆಯಲಿರುವ ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯಲ್ಲಿ ಬಿಸಿಸಿಐ ಪ್ರತಿನಿಧಿಯಾಗಿ ಹಂಗಾಮಿ ಅಧ್ಯಕ್ಷ ಅಮಿತಾಭ್ ಚೌಧರಿ ಹಾಗೂ ಅವರಿಗೆ ಸಹಾಯಕರಾಗಿ ಸಿಇಒ ರಾಹುಲ್ ಜೊಹ್ರಿ ಭಾಗವಹಿಸಬಹುದು ಎಂದು ನ್ಯಾ. ದೀಪಕ್ ಮಿಶ್ರಾ, ಎ.ಎಂ. ಖಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ್ ಅವರಿದ್ದ ತ್ರಿಸದಸ್ಯ ಪೀಠ ಸ್ಪಷ್ಟಪಡಿಸಿತು.

ಜುಲೈ 18ರ ನ್ಯಾಯಾಲಯದ ತೀರ್ಪಿನಂತೆ ಅನರ್ಹರು ಐಸಿಸಿಯ ಪ್ರಮುಖ ಸಭೆಗಳಲ್ಲಿ ಭಾಗವಹಿಸಲು ಅವಕಾಶವಿದೆಯೇ ಎಂಬುದನ್ನು ನ್ಯಾಯಾಲಯ ತಿಳಿಸಬೇಕೆಂದು ವಿನೋದ್ ರಾಯ್ ಸಾರಥ್ಯದ ಬಿಸಿಸಿಐ ಆಡಳಿತ ಸಮಿತಿ (ಸಿಒಎ) ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಈ ಕುರಿತು ಏಪ್ರಿಲ್ 10ರಂದೇ ಯಾವ ವ್ಯಕ್ತಿ ಬಿಸಿಸಿಐ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿರಲು ಅನರ್ಹರೋ ಅಂಥ ವ್ಯಕ್ತಿ ಐಸಿಸಿ ಸಭೆಗಳಿಗೆ ನಾಮ ನಿರ್ದೇಶನಗೊಳ್ಳುವಂತಿಲ್ಲ ಎಂದು ತಿಳಿಸಿತ್ತು.

ಶ್ರೀನಿ ಅನರ್ಹತೆಗೇನು ಕಾರಣ?

ಐಸಿಸಿ ಸಭೆಗೆ ಶ್ರೀನಿವಾಸನ್ ಅನರ್ಹಗೊಳ್ಳಲು ಪ್ರಮುಖ ಕಾರಣಗಳೆಂದರೆ ಮೊದಲನೆಯದಾಗಿ ನ್ಯಾ. ಲೋಧಾ ಸಮಿತಿ ಶಿಫಾರಸಿನನ್ವಯ ಈಗಾಗಲೇ 70ರ ಗಡಿ ದಾಟಿರುವುದು. ಇನ್ನು, 72ರ ಹರೆಯದ ಶ್ರೀನಿವಾಸನ್ ತಮಿಳುನಾಡು ಕ್ರಿಕೆಟ್ ಸಂಸ್ಥೆ ಹಾಗೂ ಬಿಸಿಸಿಐನಲ್ಲಿ 9 ವರ್ಷಗಳ ಕ್ರಿಕೆಟ್ ಆಡಳಿತಾಧಿಕಾರಿಯಾಗಿ ಅಧಿಕಾರ ಅನುಭವಿಸಿರುವುದು. ಇನ್ನೊಂದೆಡೆ, ತಮಿಳುನಾಡು ಕ್ರಿಕೆಟ್ ಸಂಸ್ಥೆ (ಟಿಎನ್‌ಸಿಎ)ಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿರುವುದು. ಈ ಮೂರು ಪ್ರಮುಖ ಕಾರಣಗಳು ಅವರ ಆಸೆಗೆ ತಣ್ಣೀರೆರಚಿದೆ.

click me!