ಮುಂಬೈ ಇಂಡಿಯನ್ಸ್ ಐಪಿಎಲ್'ನ ನೂತನ ಸಾಮ್ರಾಟ

By Suvarna Web DeskFirst Published May 22, 2017, 12:13 AM IST
Highlights

ಗೆಲುವಿಗೆ 130 ರನ್‌'ಗಳ ಸುಲಭ ಗುರಿ ಬೆನ್ನಟ್ಟಿದ ಪುಣೆ, ಮುಂಬೈ ವೇಗಿಗಳಾದ ಜಸ್‌'ಪ್ರೀತ್ ಬೂಮ್ರಾ, ಲಸಿತ್ ಮಾಲಿಂಗ ಹಾಗೂ ಮಿಚೆಲ್ ಜಾನ್ಸನ್ ದಾಳಿ ಎದುರು ಮಂಡಿಯೂರಿತು.

ಹೈದರಾಬಾದ್(ಮೇ.21): 10ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಫೈನಲ್'ನಲ್ಲಿ ಮುಂಬೈ ಇಂಡಿಯನ್ಸ್ ರೋಚಕ ಜಯ ಸಾಧಿಸುವ ಮೂಲಕ ಮೂರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು.

ಸಾದಾರಣ ಮೊತ್ತದ ಗುರಿಯಿದ್ದರೂ ತೀವ್ರ ಜಿದ್ದಾಜಿದ್ದಿನಿಂದ ಕೂಡಿದ ಪಂದ್ಯದಲ್ಲಿ ಅಂತಿಮ ಓವರ್ ರೋಚಕ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಮಿಚೆಲ್ ಜಾನ್ಸನ್ ಚಾಣಾಕ್ಷ ಬೌಲಿಂಗ್ ನೆರವಿನಿಂದ ಮುಂಬೈ, ಪುಣೆ ಸೂಪರ್‌'ಜೈಂಟ್ ವಿರುದ್ಧ 1 ರನ್ ರೋಚಕ ಗೆಲುವು ಸಾಧಿಸಿತು.

ಗೆಲುವಿಗೆ 130 ರನ್‌'ಗಳ ಸುಲಭ ಗುರಿ ಬೆನ್ನಟ್ಟಿದ ಪುಣೆ, ಮುಂಬೈ ವೇಗಿಗಳಾದ ಜಸ್‌'ಪ್ರೀತ್ ಬೂಮ್ರಾ, ಲಸಿತ್ ಮಾಲಿಂಗ ಹಾಗೂ ಮಿಚೆಲ್ ಜಾನ್ಸನ್ ದಾಳಿ ಎದುರು ಮಂಡಿಯೂರಿತು. 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 128 ರನ್ ಗಳಿಸಲಷ್ಟೇ ಶಕ್ತವಾಯಿತು.

ಕೊನೆ 3 ಓವರ್‌'ಗಳಲ್ಲಿ ಪುಣೆ ಗೆಲುವಿಗೆ ಕೇವಲ 30 ರನ್‌'ಗಳ ಅವಶ್ಯಕತೆ ಇತ್ತು. ಸ್ಮಿತ್, ಧೋನಿ, ತಿವಾರಿಯಂತಹ ಶ್ರೇಷ್ಠ ಬ್ಯಾಟ್ಸ್‌ಮನ್‌'ಗಳಿದ್ದರೂ ಪುಣೆಗೆ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಕೊನೆ ಓವರ್‌ನಲ್ಲಿ 11 ರನ್‌ಗಳು ಬೇಕಿದ್ದವು. ಮೊದಲ ಎಸೆತದಲ್ಲಿ 4 ರನ್ ಬಾರಿಸಿದ ತಿವಾರಿ 2ನೇ ಎಸೆತದಲ್ಲಿ ಔಟಾದರು. 3ನೇ ಎಸೆತದಲ್ಲಿ ಸ್ಮಿತ್ ವಿಕೆಟ್ ಕಳೆದುಕೊಂಡರು. ಕೊನೆ ಎಸೆತದಲ್ಲಿ 4 ರನ್ ಬೇಕಿತ್ತು. ಕ್ರಿಶ್ಚಿಯನ್ ಗಳಿಸಿದ್ದು 2 ರನ್ ಮಾತ್ರ. ಮಿಚೆಲ್ ಜಾನ್ಸನ್ ಅದ್ಭುತ ಓವರ್ ಮೂಲಕ ಮುಂಬೈಗೆ ರೋಚಕ ಗೆಲುವು ತಂದುಕೊಟ್ಟರು.

ಇದಕ್ಕೂ ಮೊದಲು ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಆಯ್ದುಕೊಂಡಿತು. ಪುಣೆ ಸೂಪರ್‌'ಜೈಂಟ್ ಬೌಲರ್‌'ಗಳ ಸಂಘಟಿತ ಪ್ರದರ್ಶನದ ಎದುರು ರನ್ ಗಳಿಸಲು ಪರದಾಡಿದರು. ಜಯ್‌'ದೇವ್ ಉನಾದ್ಕತ್ ಆರಂಭಿಕರಾದ ಲೆಂಡಲ್ ಸಿಮನ್ಸ್ ಹಾಗೂ ಪಾರ್ಥಿವ್ ಪಟೇಲ್ ಇಬ್ಬರನ್ನೂ ಬೇಗನೆ ಪೆವಿಲಿಯನ್‌'ಗಟ್ಟಿದರು. ತಂಡದ ಮೊತ್ತ 8 ರನ್ ಗಳಿಸುವಷ್ಟರಲ್ಲಿ ಮುಂಬೈ 2 ವಿಕೆಟ್ ಕಳೆದುಕೊಂಡಿತು.

3ನೇ ವಿಕೆಟ್‌'ಗೆ ಅಂಬಟಿ ರಾಯುಡು ಹಾಗೂ ರೋಹಿತ್ ಶರ್ಮಾ ಕ್ರೀಸ್‌ನಲ್ಲಿ ನೆಲೆಯೂರುವ ಪ್ರಯತ್ನ ನಡೆಸಿದರು. ಇವರಿಬ್ಬರ ನಡುವೆ 33 ರನ್ ಜೊತೆಯಾಟ ಮೂಡಿಬಂತು. ತಂಡ ಚೇತರಿಸಿಕೊಂಡಿತು ಎನ್ನುವಷ್ಟರಲ್ಲಿ ಸ್ಟೀವ್ ಸ್ಮಿತ್, ರಾಯುಡು ಅವರನ್ನು ರನೌಟ್ ಬಲೆಗೆ ಕೆಡವಿದರು.

24 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ರೋಹಿತ್ ಸಹ ರಾಯುಡು ಅವರನ್ನು ಹಿಂಬಾಲಿಸಿದರು. ಇಲ್ಲಿಂದಾಚೆಗೆ ಮುಂಬೈ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆಲ್ರೌಂಡರ್‌'ಗಳಾದ ಕೀರನ್ ಪೊಲಾರ್ಡ್ ಹಾಗೂ ಹಾರ್ದಿಕ್ ಪಾಂಡ್ಯ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಕೃನಾಲ್ ಪಾಂಡ್ಯ ಏಕಾಂಗಿ ಹೋರಾಟ ನಡೆಸಿ ತಂಡವನ್ನು 120ರ ಗಡಿ ದಾಟಿಸಿದರು. ಮಿಚೆಲ್ ಜಾನ್ಸನ್‌'ರಿಂದ ಕೃನಾಲ್‌'ಗೆ ಬೆಂಬಲ ಸಿಕ್ಕಿತು. 47 ರನ್ ಗಳಿಸಿ ಕೊನೆಯವರಾಗಿ ಪಾಂಡ್ಯ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಮುಂಬೈ 20 ಓವರ್‌'ಗಳಲ್ಲಿ 8 ವಿಕೆಟ್ ನಷ್ಟಕ್ಕೆ 129 ರನ್‌'ಗಳ ಗೌರವಾನ್ವಿತ ಮೊತ್ತ ಕಲೆಹಾಕಿತು. ಉನಾದ್ಕತ್, ಜಂಪಾ ಹಾಗೂ ಕ್ರಿಶ್ಚಿಯನ್ ತಲಾ 2 ವಿಕೆಟ್ ಕಿತ್ತರು.

click me!