ಧೋನಿ ದಾಖಲೆ ಬ್ಯಾಟಿಂಗ್; ಭಾರತಕ್ಕೆ ಕೈತಪ್ಪಿತು ಮ್ಯಾಚು

By Suvarna Web DeskFirst Published Jul 3, 2017, 1:27 PM IST
Highlights

ಕೆಲ ವರ್ಷಗಳ ಹಿಂದಿನವರೆಗೂ ಧೋನಿ ಬೆಸ್ಟ್ ಫಿನಿಶರ್ ಆಗಿದ್ದರು. ಆರಂಭದಲ್ಲಿ ನಿಧಾನಗತಿಯಲ್ಲಿ ಆಡಿದರೂ ಇನಿಂಗ್ಸ್ ಅಂತ್ಯದ ವೇಳೆಗೆ ಸರಿಯಾಗಿ ವೇಗ ಕಂಡುಕೊಂಡು ಬಿಗ್ ಹಿಟ್'ಗಳ ಮೂಲಕ ಗೆಲುವು ದಕ್ಕಿಸಿಕೊಳ್ಳುತ್ತಿದ್ದರು. ನಿನ್ನೆಯ ಪಂದ್ಯದಲ್ಲೂ ಧೋನಿ ಅದೇ ತಂತ್ರ ಅನುಸರಿಸಲು ಮುಂದಾಗಿದ್ದಿರಬಹುದು.

ಆಂಟಿಗುವಾ: ನಿನ್ನೆ ವಿಂಡೀಸ್ ಒಡ್ಡಿದ 190 ರನ್'ಗಳ ಅಲ್ಪಮೊತ್ತದ ಗೆಲುವಿನ ಸವಾಲಿಗೆ ಪ್ರತಿಯಾಗಿ ಭಾರತ ಮುಗ್ಗರಿಸಿ 11 ರನ್'ಗಳಿಂದ ಸೋಲಪ್ಪಿತು. ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಹೆಚ್ಚೂಕಡಿಮೆ ಕೊನೆಯವರೆಗೂ ಕ್ರೀಸ್'ನಲ್ಲಿ ನಿಂತರೂ ಗೆಲುವು ದಕ್ಕಿಸಿಕೊಡಲಾಗಲಿಲ್ಲ. ಧೋನಿ ಅರ್ಧಶತಕ ಭಾರತಕ್ಕೆ ಉಪಯೋಗಕ್ಕೆ ಬರಲಿಲ್ಲ. ಕಳೆದ ಪಂದ್ಯದಲ್ಲಿ ಮಿಂಚಿನ ಗತಿಯಲ್ಲಿ ಅಜೇಯ 78 ರನ್ ಗಳಿಸಿದ್ದ ಧೋನಿ ಈ ಪಂದ್ಯದಲ್ಲಿ 114 ಬಾಲ್'ನಲ್ಲಿ ಅರ್ಧಶತಕ ಮುಟ್ಟಿದರು. 1999ರ ನಂತರ ಭಾರತೀಯನೊಬ್ಬ ಗಳಿಸಿದ ಅತ್ಯಂತ ನಿಧಾನಗತಿಯ ಅರ್ಧಶತಕ ಇದಾಗಿದೆ. 1999ರಲ್ಲಿ ಸಡಗೋಪನ್ ರಮೇಶ್ ಅರ್ಧಶತಕ ಗಳಿಸಲು 117 ಎಸೆತ ತೆಗೆದುಕೊಂಡಿದ್ದರು. ಅದಾದ ಬಳಿಕ ಧೋನಿಯೇ ಸ್ಲೋಯೆಸ್ಟ್ ಇಂಡಿಯನ್ ಎನಿಸಿದ್ದಾರೆ. 2005ರಲ್ಲಿ ಗಂಗೂಲಿ ಅವರು ಶ್ರೀಲಂಕಾ ವಿರುದ್ಧ 105 ಬಾಲ್'ನಲ್ಲಿ ಅರ್ಧಶತಕ ಗಳಿಸಿದ್ದರು.

ಧೋನಿ ಕ್ರೀಸ್'ನಲ್ಲಿರುವವರೆಗೂ ಭಾರತಕ್ಕೆ ಗೆಲುವಿನ ಆಸೆ ಇತ್ತು. ಆದರೆ, ಪ್ರಮುಖ ಹಂತದಲ್ಲಿ ಧೋನಿ ಔಟಾಗುವ ಮೂಲಕ ಗೆಲುವಿನ ಆಸೆ ಕಮರಿಹೋಗಿತ್ತು.

ಧೋನಿ ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭ ಇದಾಗಿರಬಹುದು. ಯಾಕೆಂದರೆ, ಕೆಲ ವರ್ಷಗಳ ಹಿಂದಿನವರೆಗೂ ಧೋನಿ ಬೆಸ್ಟ್ ಫಿನಿಶರ್ ಆಗಿದ್ದರು. ಆರಂಭದಲ್ಲಿ ನಿಧಾನಗತಿಯಲ್ಲಿ ಆಡಿದರೂ ಇನಿಂಗ್ಸ್ ಅಂತ್ಯದ ವೇಳೆಗೆ ಸರಿಯಾಗಿ ವೇಗ ಕಂಡುಕೊಂಡು ಬಿಗ್ ಹಿಟ್'ಗಳ ಮೂಲಕ ಗೆಲುವು ದಕ್ಕಿಸಿಕೊಳ್ಳುತ್ತಿದ್ದರು. ನಿನ್ನೆಯ ಪಂದ್ಯದಲ್ಲೂ ಧೋನಿ ಅದೇ ತಂತ್ರ ಅನುಸರಿಸಲು ಮುಂದಾಗಿದ್ದಿರಬಹುದು. ಆದರೆ, ಇನಿಂಗ್ಸ್ ಆಕ್ಸಲರೇಟ್ ಮಾಡಲು ಅವರಿಂದ ಸಾಧ್ಯವಾಗಲಿಲ್ಲ. ಕೆಲ ಓವರ್'ಗಳ ಹಿಂದೆಯೇ ಅವರು ತಮ್ಮ ಬ್ಯಾಟಿಂಗ್'ಗೆ ವೇಗ ತಂದುಕೊಂಡಿದ್ದರೆ ಬಹುಶಃ ಗುರಿಯ ಒತ್ತಡ ಕಡಿಮೆ ಇದ್ದಿರತ್ತಿತ್ತು ಎಂಬುದು ಕ್ರಿಕೆಟ್ ತಜ್ಞರ ಮಾತು.

ಭಾರತ ಈ ಪಂದ್ಯ ಸೋಲಲು ಧೋನಿಯೊಬ್ಬರೇ ಕಾರಣರಲ್ಲ. ಎಲ್ಲಾ ಬ್ಯಾಟುಗಾರರೂ ಜವಾಬ್ದಾರರೇ. ಕೊಹ್ಲಿ, ಯುವರಾಜ್ ಸಿಂಗ್, ಧವನ್ ವಿಫಲರಾಗಿದ್ದು ಭಾರತಕ್ಕೆ ಮುಳುವಾಯಿತು. ಆದರೆ, 100ಕ್ಕೂ ಹೆಚ್ಚು ಬಾಲ್ ಆಡಿ ಕ್ರೀಸ್'ನಲ್ಲಿದ್ದ ಧೋನಿ ಮೇಲೆ ಎಲ್ಲರ ನಂಬಿಕೆ ನೆಟ್ಟಿದ್ದಂತೂ ಸುಳ್ಳಲ್ಲ.

click me!