ಸಾಧಾರಣ ಮೊತ್ತ ಚೇಸ್ ಮಾಡಲು ಭಾರತ ವಿಫಲ; ವಿಂಡೀಸ್'ಗೆ ರೋಚಕ ಜಯ

By Suvarna Web DeskFirst Published Jul 3, 2017, 10:40 AM IST
Highlights

ಐದು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ವಿಂಡೀಸ್'ಗೆ ಇದು ಮೊದಲ ಗೆಲುವಾಗಿದೆ. ಸರಣಿಯಲ್ಲಿ ಭಾರತ 2-1ರಿಂದ ಮುನ್ನಡೆ ಹೊಂದಿದೆ. ಜುಲೈ 6ರಂದು ಕಿಂಗ್ಸ್'ಟನ್'ನಲ್ಲಿ ಸರಣಿಯ ಕೊನೆಯ ಪಂದ್ಯ ನಡೆಯಲಿದೆ. ವಿಂಡೀಸ್'ಗೆ ಸರಣಿ ಸಮ ಮಾಡಿಕೊಳ್ಳುವ ಅವಕಾಶವಿದೆ.

ಆಂಟಿಗುವಾ: ವಿಂಡೀಸ್ ಒಡ್ಡಿದ ಸಾಧಾರಣ ಗುರಿಯನ್ನು ಮುಟ್ಟಲು ಭಾರತ ವಿಫಲವಾಗಿದೆ. ವೆಸ್ಟ್ ಇಂಡೀಸ್'ಗೆ 189 ರನ್'ಗಳಿಗೆ ಪ್ರತಿಯಾಗಿ ಭಾರತ ತಂಡ 178 ರನ್'ಗಳಿಗೆ ಆಲೌಟ್ ಆಗಿ 11 ರನ್'ಗಳಿಂದ ಸೋಲಪ್ಪಿದೆ. ಅಜಿಂಕ್ಯ ರಹಾನೆ ಮತ್ತು ಧೋನಿ ಅರ್ಧಶತಕಗಳು ಭಾರತಕ್ಕೆ ಗೆಲುವು ತಂದುಕೊಡಲಿಲ್ಲ. ಜೇಸನ್ ಹೋಲ್ಡರ್ ಮತ್ತು ಆಜ್ಜೆರಿ ಜೋಸೆಫ್ ಅವರ ಮಾರಕ ವೇಗದ ಬೌಲಿಂಗ್'ಗೆ ಭಾರತೀಯ ಬ್ಯಾಟುಗಾರರ ಬಳಿ ಉತ್ತರವಿರಲಿಲ್ಲ.

ನಾಲ್ಕನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಶಿಖರ್ ಧವನ್, ವಿರಾಟ್ ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್ ವಿಫಲರಾಗಿದ್ದು ಭಾರತಕ್ಕೆ ಮುಳುವಾಯಿತು. ಎಂಎಸ್ ಧೋನಿ ಬಹಳ ನಿಧಾನಗತಿಯಲ್ಲಿ ಬ್ಯಾಟ್ ಮಾಡಿದ್ದೂ ಭಾರತದ ಮೇಲೆ ಒತ್ತಡದ ನಿರ್ಮಾಣವಾಯಿತು. ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಸ್ವಲ್ಪ ಮಟ್ಟಿಗೆ ರನ್ ಗತಿ ಹೆಚ್ಚಿಸಲು ಯತ್ನಿಸಿದರಾದರೂ ವಿಕೆಟ್ ಉಳಿಸಿಕೊಳ್ಳಲಾಗಲಿಲ್ಲ. 44ನೇ ಓವರ್'ನಲ್ಲಿ ಧೋನಿ ಮತ್ತು ಪಾಂಡ್ಯ 16 ರನ್ ಗಳಿಸಿದಾಗ ಭಾರತಕ್ಕೆ ಗೆಲುವಿನ ಆಸೆ ಗಟ್ಟಿಗೊಂಡಿತ್ತು. ಅವರಿಬ್ಬರೂ ಕ್ರೀಸ್'ನಲ್ಲಿರುವವರೆಗೂ ಭಾರತಕ್ಕೆ ಗೆಲುವು ನಿಶ್ಚಿತವೆನಿಸಿತ್ತು. ಆದರೆ, 46ನೇ ಓವರ್'ನಲ್ಲಿ ಪಾಂಡ್ಯ ಔಟಾದಾಗ ಪಂದ್ಯಕ್ಕೆ ಮತ್ತೊಂದು ತಿರುವು ಸಿಕ್ಕಿತು. ಧೋನಿ ಜೊತೆ ಉತ್ತಮವಾಗಿ ಬ್ಯಾಟ್ ಮಾಡಿದ ಜಡೇಜಾ ಅನವಶ್ಯಕ ಹೊಡೆತಕ್ಕೆ ಕೈಹಾಕಿ ಔಟಾದರು. ಇಂಥ ಅನೇಕ ಕ್ಲಿಷ್ಟ ಪರಿಸ್ಥಿತಿಗಳಲ್ಲಿ ತಂಡವನ್ನು ಗೆಲುವಿನ ದಡಕ್ಕೆ ಮುಟ್ಟಿಸಿದ್ದ ಧೋನಿ ಮೇಲೆ ಎಲ್ಲರ ನಿರೀಕ್ಷೆ ಇತ್ತು. ಆದರೆ, 48ನೇ ಓವರ್'ನ ಅಂತ್ಯಕ್ಕೆ ಧೋನಿ ಔಟಾಗುವ ಮೂಲಕ ಭಾರತೀಯ ಅಭಿಮಾನಿಗಳ ಆಸೆಗೆ ತಣ್ಣೀರೆರಚಿದರು. ಅಲ್ಲಿಗೆ ಭಾರತೀಯ ಹೋರಾಟ ಬಹುತೇಕ ಅಂತ್ಯಗೊಂಡಿತು.

ಇದಕ್ಕೆ ಮುನ್ನ, ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡದ ಟಾಪ್ ಆರ್ಡರ್ ಬ್ಯಾಟುಗಾರರು ಒಂದಷ್ಟು ರನ್ ಕಲೆಹಾಕಿದರು. ಆದರೆ, ಶಿಸ್ತುಬದ್ಧ ಬೌಲಿಂಗ್ ದಾಳಿ ಸಂಯೋಜಿಸಿದ ಭಾರತದ ಬೌಲರ್'ಗಳು ಎದುರಾಳಿ ಬ್ಯಾಟುಗಾರರನ್ನು ಹೆಚ್ಚು ರನ್ ಗಳಿಸದಂತೆ ಕಟ್ಟಿಹಾಕಿದರು. ಹೀಗಾಗಿ, ವಿಂಡೀಸ್ ಸ್ಕೋರು 200 ರನ್ ಗಡಿ ಮುಟ್ಟಲು ಸಾಧ್ಯವಾಗಲಿಲ್ಲ. ಆದರೆ, ವಿಂಡೀಸ್ ಬೌಲರ್'ಗಳು ಇನ್ನೂ ಉತ್ತಮವಾಗಿ ಬೌಲಿಂಗ್ ಮಾಡಿ ಭಾರತೀಯ ಬ್ಯಾಟುಗಾರರ ಹೆಡೆಮುರಿ ಕಟ್ಟಿ ಗೆಲುವು ದಕ್ಕಿಸಿದರು.

ಐದು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ವಿಂಡೀಸ್'ಗೆ ಇದು ಮೊದಲ ಗೆಲುವಾಗಿದೆ. ಸರಣಿಯಲ್ಲಿ ಭಾರತ 2-1ರಿಂದ ಮುನ್ನಡೆ ಹೊಂದಿದೆ. ಜುಲೈ 6ರಂದು ಕಿಂಗ್ಸ್'ಟನ್'ನಲ್ಲಿ ಸರಣಿಯ ಕೊನೆಯ ಪಂದ್ಯ ನಡೆಯಲಿದೆ. ವಿಂಡೀಸ್'ಗೆ ಸರಣಿ ಸಮ ಮಾಡಿಕೊಳ್ಳುವ ಅವಕಾಶವಿದೆ.

ಸ್ಕೋರು ವಿವರ:

ವೆಸ್ಟ್ ಇಂಡೀಸ್ 50 ಓವರ್ 189/9
(ಎವಿನ್ ಲಿವಿಸ್ 35, ಕೈಲ್ ಹೋಪ್ 35, ಶಾಯ್ ಹೋಪ್ 25, ರೋಸ್ಟನ್ ಚೇಸ್ 24, ಜೇಸನ್ ಮೊಹಮ್ಮದ್ 20, ದೇವೇಂದ್ರ ಬಿಶೂ 15 ರನ್ - ಉಮೇಶ್ ಯಾದವ್ 36/3, ಹಾರ್ದಿಕ್ ಪಾಂಡ್ಯ 40/3, ಕುಲದೀಪ್ ಯಾದವ್ 31/2)

ಭಾರತ 49.4 ಓವರ್ 178 ರನ್ ಆಲೌಟ್
(ಅಜಿಂಕ್ಯ ರಹಾನೆ 60, ಎಂಎಸ್ ಧೋನಿ 54, ಹಾರ್ದಿಕ್ ಪಾಂಡ್ಯ 20 ರನ್ - ಜೇಸನ್ ಹೋಲ್ಡರ್ 27/5, ಆಲ್ಝರಿ ಜೋಸೆಫ್ 46/2)

click me!