ನೀರು ಎಂದುಕೊಂಡು ವಿಮಾನದಲ್ಲಿ ಸ್ಪಿರಿಟ್ ಕುಡಿದಿದ್ದ ಕರ್ನಾಟಕ ರಣಜಿ ತಂಡದ ನಾಯಕ ಮಯಾಂಕ್ ಅಗರ್ವಾಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆದರೆ, ಅವರಿಗೆ ಈಗಲೂ ಮಾತನಾಡಲು ಸಾಧ್ಯವಾಗುತ್ತಿಲ್ಲ ಎನ್ನುವ ವರದಿಗಳಿವೆ.
ಬೆಂಗಳೂರು (ಜ.31): ಮುಂದಿನ ರಣಜಿ ಪಂದ್ಯಕ್ಕಾಗಿ ಅಗರ್ತಲಾದಿಂದ ಸೂರತ್‌ಗೆ ವಿಮಾನದಲ್ಲಿ ಪ್ರಯಾಣಿಸುವ ವೇಳೆ, ಸೀಟ್‌ನ ಮುಂಭಾಗದಲ್ಲಿದ್ದ ಸ್ಪಿರಿಟ್‌ಅನ್ನು ನೀರು ಎಂದುಕೊಂಡು ಕುಡಿದಿದ್ದ ಮಯಾಂಕ್ ಅಗರ್ವಾಲ್ ಆರೋಗ್ಯದಲ್ಲಿ ಕೊಂಚ ಪ್ರಗತಿ ಕಂಡಿದೆ. ಅವರನ್ನು ಅಗರ್ತಲಾದ ಐಎಲ್‌ಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ. ಬುಧವಾರ ಬೆಳಗ್ಗೆ ಅವರು ಎಎಲ್‌ಎಸ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಅಲ್ಲಿಂದಲೇ ಬೆಂಗಳೂರಿಗೆ ಪ್ರಯಾಣ ಮಾಡಲಿದ್ದಾರೆ. ಸಂಜೆ 6.40ಕ್ಕೆ ಬೆಂಗಳೂರಿಗೆ ನೇರ ವಿಮಾನವಿದ್ದು, ಅದರಲ್ಲಿಯೇ ವಾಪಾಸ್ ಬರಲಿದ್ದಾರೆ. ಮಂಗಳವಾರ ತ್ರಿಪುರದಿಂದ ಸೂರತ್ ಹೋಗುವಾಗ ವಿಮಾನದಲ್ಲಿ ಮಯಾಂಕ್ ಅಸ್ವಸ್ಥರಾಗಿದ್ದರು. ಸೀಟ್ ಮುಂಭಾಗದಲ್ಲಿದ್ದ ನೀರನ್ನ ಸೇವಿಸಿ ಅಸ್ವಸ್ಥರಾಗಿದ್ದರು. ಆದರೆ ಅದರಲ್ಲಿ ನೀರಿನ ಬದಲು ಶೌಚಾಲಯ ಕ್ಲೀನ್ ಮಾಡುವ ಸ್ಪಿರಿಟ್ ಬಾಟಲ್ ಅನ್ನು ಇರಿಸಲಾಗಿತ್ತು.
ಸ್ಪಿರಿಟ್ ಕುಡಿದ ಬೆನ್ನಲ್ಲಿಯೇ ಅವರ ಬಾಯಿ, ಕೆನ್ನೆ, ನಾಲಿಗೆ ಸುಟ್ಟು ಹೋಗಿದೆ. ತಕ್ಷಣವೇ ಅವರನ್ನು ಸ್ಥಳೀಯ ಐಎಲ್‌ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮೂಲಗಳ ಪ್ರಕಾರ ಅವರಿಗೆ ಗಂಭೀರ ಪ್ರಮಾಣದ ಗಾಯಗಳಾಗಿವೆ ಎಂದು ವರದಿಯಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರು ಬೆಂಗಳೂರಿನಲ್ಲಿ ಆಸ್ಪತ್ರೆಗೆ ಅಡ್ಮಿಟ್ ಆಗುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಅವರು ಪೋಷಕರು ನಿರ್ಧಾರ ಮಾಡಲಿದ್ದಾರೆ ಎಂದು ತಿಳಿಸಲಾಗಿದೆ. ಮಯಾಂಕ್‌ಗೆ ಈಗಲೂ ಮಾತನಾಡಲು ಸಾಧ್ಯವಾಗುತ್ತಿಲ್ಲ. ನೀರು ಮತ್ತು ಎಳೆನೀರನ್ನ ಮಾತ್ರ ಸೇವನೆ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಬಂದಿದೆ.