ಏಷ್ಯನ್ ಅಥ್ಲೆಟಿಕ್ಸ್ ಕೂಟ: ಮನ್'ಪ್ರೀತ್, ಲಕ್ಷ್ಮಣನ್ ಚಿನ್ನದ ಸಾಧನೆ

By Suvarna Web DeskFirst Published Jul 7, 2017, 11:12 AM IST
Highlights

ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್'ಶಿಪ್ | ಶಾಟ್'ಪುಟ್'ನಲ್ಲಿ ಚಿನ್ನ ಗೆದ್ದ ಮನ್'ಪ್ರೀತ್ ಕೌರ್ | 5000 ಮೀಟರ್ ಓಟದಲ್ಲಿ ಇತಿಹಾಸ ಬರೆದ ಲಕ್ಷ್ಮಣನ್ ಮಹಿಳೆಯರ 5000 ಮೀಟರ್ ಓಟದಲ್ಲಿ ಸಂಜೀವನಿ, ಜಾವೆಲಿನ್'ನಲ್ಲಿ ಅನ್ನುರಾಣಿಗೆ ಕಂಚು | ಮೊದಲ ದಿನ ಭಾರತಕ್ಕೆ 2 ಚಿನ್ನ ಸೇರಿ ಒಟ್ಟು 7 ಪದಕ.

ಭುನವೇಶ್ವರ: 22ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್'ಶಿಪ್'ನ ಮೊದಲ ದಿನ ಮಹಿಳಾ ಶಾಟ್'ಪುಟ್'ನಲ್ಲಿ ಚಿನ್ನ ಗೆಲ್ಲುವ ಮೂಲಕ ಮನ್'ಪ್ರೀತ್ ಕೌರ್ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟರು. ಗುರುವಾರ 28ನೇ ವರ್ಷಕ್ಕೆ ಕಾಲಿಟ್ಟ ಅವರಿಗೆ 5 ವರ್ಷದ ಮಗುವಿದೆ. ಮನ್'ಪ್ರೀತ್ 18.28 ಮೀ. ಗುಂಡನ್ನು ಎಸೆದು ಮೊದಲ ಸ್ಥಾನ ಪಡೆದುಕೊಂಡರು.

ಹರ್ಯಾಣದ ಅಂಬಾಲದ ಮನ್'ಪ್ರೀತ್ ಈ ವರ್ಷ ಅರಂಭದಲ್ಲಿ ಚೀನಾದಲ್ಲಿ ನಡೆದಿದ್ದ ಏಷ್ಯನ್ ಗ್ರ್ಯಾನ್'ಪ್ರೀಯಲ್ಲಿ 18.86 ಮೀ. ದಾಖಲಿಸುವಲ್ಲಿ ಯಶಸ್ವಿಯಾಗಿದ್ದರು. ಈ ದಾಖಲೆಯನ್ನು ಮುರಿಯುವಲ್ಲಿ ಮನ್'ಪ್ರೀತ್ ಯಶಸ್ವಿಯಾಗದಿದ್ದರೂ ಚಿನ್ನದ ಪದಕ ಅವರ ಕೈತಪ್ಪಲಿಲ್ಲ.

ಮುಂದಿನ ತಿಂಗಳು ಲಂಡನ್'ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್'ಶಿಪ್'ಗೆ ಏಪ್ರಿಲ್'ನಲ್ಲೇ ಅರ್ಹತೆ ಪಡೆದಿದ್ದ ಮನ್'ಪ್ರೀತ್ ಕಳೆದ 20 ತಿಂಗಳಲ್ಲಿ 2 ಬಾರಿ ರಾಷ್ಟ್ರೀಯ ದಾಖಲೆ ಮುರಿದಿದ್ದಾರೆ.

ಲಕ್ಷ್ಮಣ್'ಗೆ ಚಿನ್ನ: ತಮಿಳುನಾಡಿನ ಗೋವಿಂದನ್ ಲಕ್ಷ್ಮಣನ್ ಪುರುಷರ 5000 ಮೀ ಓಟದಲ್ಲಿ ಚಿನ್ನ ಗೆಲ್ಲುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದರು. ಮೊದಲ ಸ್ಥಾನ ಗಿಟ್ಟಿಸುವ ಮೂಲಕ ಲಂಡನ್'ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್'ಶಿಪ್'ಗೆ ಅರ್ಹತೆ ಪಡೆದರು. 14 ನಿಮಿಷ 15.48 ಸೆಕೆಂಡ್'ಗಳಲ್ಲಿ ಓಟ ಮುಗಿಸಿದ ಗೋವಿಂದನ್, ಕೇವಲ ಒಂದು ಸೆಕೆಡಂಡ್ ಮುನ್ನಡೆಯೊಂದಿಗೆ ಕತಾರ್'ನ ಸಲೀಮ್ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದರು. ಆ ಮೂಲಕ ಭಾರತಕ್ಕೆ ಮೊದಲ ದಿನ 2ನೇ ಚಿನ್ನದ ಪದಕ ತಂದುಕೊಟ್ಟರು.

ಕಂಚಿಗೆ ತೃಪ್ತಿಪಟ್ಟ ಅನ್ನುರಾಣಿ: ವಿಶ್ವಚಾಂಪಿಯನ್'ಶಿಪ್'ಗೆ ಅರ್ಹತೆ ಪಡೆದಿರುವ ಜಾವೆಲಿನ್ ಥ್ರೋ ಪಟು ಅನ್ನುರಾಣಿ ಕಂಚಿನ ಪದಕಕ್ಕೆ ತೃಪ್ತಿಪಡುವಂತಾಯಿತು. ಮೊದಲ ಪ್ರಯತ್ನದಲ್ಲೇ 57.32 ಮೀ ದೂರಕ್ಕೆ ಜಾವೆಲಿನ್ ಎಸೆದ ಅನ್ನು, ನಂತರದ ಪ್ರಯತ್ನಗಳಲ್ಲಿ ಇದಕ್ಕಿಂತ ಉತ್ತಮ ಥ್ರೋ ಮಾಡುವಲ್ಲಿ ಯಶಸ್ವಿಯಾಗಲಿಲ್ಲ. ಕರ್ನಾಟಕದ ಕಾಶಿನಾಥ್ ನಾಯ್ಕ್ ಅವರ ಗರಡಿಯಲ್ಲಿ ಅಭ್ಯಾಸ ಮಾಡುತ್ತಿರುವ ಅನ್ನು, ಇತ್ತೀಚೆಗಷ್ಟೇ ವಿಶ್ವಚಾಂಪಿಯನ್'ಶಿಪ್'ಗೆ ಅರ್ಹತೆ ಪಡೆದಿದ್ದರು.

ಲಾಂಗ್ ಜಂಪ್'ನಲ್ಲಿ ಬೆಳ್ಳಿ, ಕಂಚು:
ಮಹಿಳೆಯರ ಲಾಂಗ್'ಜಂಪ್'ನಲ್ಲಿ ಭಾರತದ ನೀನಾ ಬೆಳ್ಳಿ ಗೆದ್ದರೆ, ನಯಾನ ಜೇಮ್ಸ್ ಕಂಚು ಗೆದ್ದರು. ಮಹಿಳೆಯರ 5000 ಮೀಟರ್ ಓಟದಲ್ಲಿ ಭಾರತದ ಸಂಜೀವನಿ ಜಾಧವ್ ಕಂಚಿನ ಪದಕ ಗೆದ್ದರು.

ವಿಕಾಸ್ ಗೌಡಗೆ ಕಂಚು:
2013ರ ಪುಣೆ ಹಾಗೂ 2015ರ ವುಹಾನ್ ಏಷ್ಯನ್ ಅಥ್ಲೆಟಿಕ್ಸ್'ನಲ್ಲಿ ಚಿನ್ನ ಗೆದ್ದಿದ್ದ ಡಿಸ್ಕಸ್ ಥ್ರೋ ಪಟು ಕರ್ನಾಟಕದ ವಿಕಾಸ್ ಗೌಡಗೆ ಹ್ಯಾಟ್ರಿಕ್ ಚಿನ್ನದ ಪದಕ ಕೈತಪ್ಪಿದೆ. ಫೈನಲ್'ನಲ್ಲಿ 60.81 ಮೀ. ದೂರ ಡಿಸ್ಕಸ್ ಎಸೆಯಲಷ್ಟೇ ಶಕ್ತರಾದ ವಿಕಾಸ್ ಕಂಚಿಗೆ ತೃಪ್ತರಾದರು. ಆದರೆ, ಆಗಸ್ಟ್'ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್'ಶಿಪ್'ಗೆ ಅರ್ಹತೆ ಗಿಟ್ಟಿಸುವಲ್ಲಿ ಮತ್ತೊಮ್ಮೆ ವಿಫಲರಾಗಿದ್ದಾರೆ.

ದೇಶ ಚಿನ್ನ ಬೆಳ್ಳಿ ಕಂಚು ಒಟ್ಟು
ಭಾರತ 2 1 4 7
ಚೀನಾ 2 1 0 3
ಕಿರ್ಗಿಸ್ತಾನ 1 0 0 1
ಇರಾನ್ 1 0 0 1
ವಿಯೆಟ್ನಾಂ 1 0 0 0

epaper.kannadaprabha.in

click me!