ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌: ಮೊದಲ ಸುತ್ತಲ್ಲೇ ಸೈನಾ ಔಟ್‌!

By Web DeskFirst Published Apr 4, 2019, 2:01 PM IST
Highlights

ಮಹಿಳಾ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲಿ ಸೈನಾ, ಥಾಯ್ಲೆಂಡ್‌ನ ಪೊರ್ನಾಪಾವಿ ಚೊಚುವಾಂಗ್‌ ವಿರುದ್ಧ 22-20, 15-21, 10-21 ಗೇಮ್‌ಗಳಲ್ಲಿ ಪರಾಭವಗೊಂಡರು. ಸೈನಾ ಎದುರಿನ 5 ಮುಖಾಮುಖಿಯಲ್ಲಿ ಚೊಚುವಾಂಗ್‌ ಮೊದಲ ಬಾರಿ ಗೆಲುವು ಪಡೆದಿದ್ದಾರೆ.

ಕೌಲಾಲಂಪುರ[ಏ.04]: ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ 2ನೇ ದಿನವಾದ ಬುಧವಾರ ಭಾರತಕ್ಕೆ ಮಿಶ್ರ ಫಲ ದೊರಕಿದೆ. ಭಾರತದ ತಾರಾ ಶಟ್ಲರ್‌ ಸೈನಾ ನೆಹ್ವಾಲ್‌ ಮೊದಲ ಸುತ್ತಲ್ಲಿ ಸೋಲುಂಡು ಹೊರಬಿದ್ದಿದ್ದರೆ, ಪಿ.ವಿ. ಸಿಂಧು ಹಾಗೂ ಕಿದಂಬಿ ಶ್ರೀಕಾಂತ್‌ ಪ್ರಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ.

ಮಹಿಳಾ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲಿ ಸೈನಾ, ಥಾಯ್ಲೆಂಡ್‌ನ ಪೊರ್ನಾಪಾವಿ ಚೊಚುವಾಂಗ್‌ ವಿರುದ್ಧ 22-20, 15-21, 10-21 ಗೇಮ್‌ಗಳಲ್ಲಿ ಪರಾಭವಗೊಂಡರು. ಸೈನಾ ಎದುರಿನ 5 ಮುಖಾಮುಖಿಯಲ್ಲಿ ಚೊಚುವಾಂಗ್‌ ಮೊದಲ ಬಾರಿ ಗೆಲುವು ಪಡೆದಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದಿದ್ದ ಇಂಡೋನೇಷ್ಯಾ ಮಾಸ್ಟರ್ಸ್‌ನಲ್ಲಿ ಚೊಚುವಾಂಗ್‌ ವಿರುದ್ಧ ಸೈನಾ ಗೆಲುವು ಸಾಧಿಸಿದ್ದರು. ಮೊದಲ ಗೇಮ್‌ನಲ್ಲಿ ಮುನ್ನಡೆ ಸಾಧಿಸಿದ ಸೈನಾ, 2 ಹಾಗೂ 3ನೇ ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿ ಪಂದ್ಯ ಕೈ ಚೆಲ್ಲಿದರು.

ಸಿಂಧುಗೆ ಜಯ: ಮತ್ತೊಂದು ಸಿಂಗಲ್ಸ್‌ನಲ್ಲಿ ಒಲಿಂಪಿಕ್‌ ಮತ್ತು ವಿಶ್ವ ಚಾಂಪಿಯನ್‌ಶಿಪ್‌ ಬೆಳ್ಳಿ ವಿಜೇತೆ ಸಿಂಧು, ಜಪಾನ್‌ನ ಅಯಾ ಒಹೊರಿ ವಿರುದ್ಧ 22-20, 21-12 ಗೇಮ್‌ಗಳಲ್ಲಿ ಜಯ ಪಡೆದರು. ಮೊದಲ ಗೇಮ್‌ನಲ್ಲಿ ಜಪಾನ್‌ ಶಟ್ಲರ್‌ನಿಂದ ಪ್ರಬಲ ಸವಾಲು ಎದುರಿಸಿದ ಸಿಂಧು, 2ನೇ ಗೇಮ್‌ನಲ್ಲಿ ಸುಲಭ ಮುನ್ನಡೆ ಕಾಯ್ದುಕೊಂಡು ಪಂದ್ಯ ಗೆದ್ದರು.

ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಶ್ರೀಕಾಂತ್‌, ಇಂಡೋನೇಷ್ಯಾದ ಮೌಲಾನ ಮುಸ್ತಾಫಾ ವಿರುದ್ಧ 21-18, 21-16 ಗೇಮ್‌ಗಳಲ್ಲಿ ಜಯ ಸಾಧಿಸಿದರು. ಕೇವಲ 38 ನಿಮಿಷಗಳ ಆಟದಲ್ಲಿ ಶ್ರೀಕಾಂತ್‌ ಜಯಭೇರಿ ಬಾರಿಸಿದರು. ಇದೇ ವೇಳೆ ಎಚ್‌.ಎಸ್‌. ಪ್ರಣಯ್‌, ಥಾಯ್ಲೆಂಡ್‌ನ ಸಿತ್ತಿಕೋಮ್‌ ತಮ್ಮಸಿನ್‌ ಎದುರು 21-12, 16-21, 14-21 ಗೇಮ್‌ಗಳಲ್ಲಿ ಸೋಲುಂಡು ಹೊರಬಿದ್ದರು. ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ-ಬಿ. ಸುಮಿತ್‌ ರೆಡ್ಡಿ ಜೋಡಿ, ಚೀನಾದ ಹನ್‌ ಚೆಂಕಾಯ್‌-ಜೊ ಹೊಡೊಂಗ್‌ ಜೋಡಿ ಎದುರು 16-21, 6-21 ಗೇಮ್‌ಗಳಲ್ಲಿ ಸೋತು ಹೊರಬಿತ್ತು.

click me!