ಡೇವಿಸ್ ಕಪ್'ನಿಂದ ಹೊರಬಿದ್ದ ಪೇಸ್

By Suvarna Web DeskFirst Published Apr 6, 2017, 3:46 PM IST
Highlights

ಏಷ್ಯಾ ಒಷೇನಿಯಾ ಡೇವಿಸ್ ಕಪ್ ಗುಂಪು ಒಂದರ ಪಂದ್ಯಾವಳಿಗಾಗಿ ನಡೆದ ಡ್ರಾದಲ್ಲಿ ಭಾರತ ತಂಡದ ಡಬಲ್ಸ್ ವಿಭಾಗದಲ್ಲಿ ಬೋಪಣ್ಣ ಹಾಗೂ ಶ್ರೀರಾಮ್ ಬಾಲಾಜಿ ಜತೆಯಾಗಲಿದ್ದಾರೆ ಎಂಬುದು ಡ್ರಾ ವೇಳೆ ಸ್ಪಷ್ಟವಾಯಿತು.

ಬೆಂಗಳೂರು(ಏ.06): ಭಾರತೀಯ ಟೆನಿಸ್‌'ನ ಡಬಲ್ಸ್ ದಿಗ್ಗಜರಾದ ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ ನಡುವಿನ ಸಮರ ಮತ್ತೊಮ್ಮೆ ಸ್ಫೋಟಿಸಿದೆ.

ಇಲ್ಲಿನ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ (ಕೆಎಸ್‌ಎಲ್‌ಟಿಎ)ನಲ್ಲಿ ಶುಕ್ರವಾರದಿಂದ ಆರಂಭವಾಗಲಿರುವ ಪ್ರವಾಸಿ ಉಜ್ಬೇಕಿಸ್ತಾನ ವಿರುದ್ಧದ ಡೇವಿಸ್ ಕಪ್ ಪಂದ್ಯಾವಳಿಗೆ ಪೇಸ್ ಅವರನ್ನು ಕೈಬಿಡಲಾಗಿದ್ದು, ಇದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಸಿಂಗಲ್ಸ್ ಆಟಗಾರ ಯೂಕಿ ಭಾಂಬ್ರಿ ಗಾಯಾಳುವಾಗಿ ಟೂರ್ನಿಯಿಂದ ಹಿಮ್ಮೆಟ್ಟಿದ್ದ ಹಿನ್ನೆಲೆಯಲ್ಲಿ ಮೀಸಲು ಆಟಗಾರರಲ್ಲಿ ಸ್ಥಾನ ಪಡೆದಿದ್ದ ಪೇಸ್ ಹಾಗೂ ಬೋಪಣ್ಣ ನಡುವೆ ಯಾರು ಡಬಲ್ಸ್‌'ಗೆ ಆಯ್ಕೆಯಾಗುತ್ತಾರೆ ಎಂಬುದು ತೀವ್ರ ಕೌತುಕ ಕೆರಳಿಸಿತ್ತು. ಮಹೇಶ್ ಜತೆಗಷ್ಟೇ ಅಲ್ಲದೆ, ಬೋಪಣ್ಣ ಜತೆಗೂ ಪೇಸ್ ಸಂಬಂಧ ಅಷ್ಟಕ್ಕಷ್ಟೆ ಇದ್ದಿದ್ದು ಕೂಡ ಇಷ್ಟೆಲ್ಲಾ ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು. ಅಂತಿಮವಾಗಿ ಇಂದು ಇಲ್ಲಿನ ವಿಧಾನಸೌಧದ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿಕೊಟ್ಟ ಡ್ರಾ ಕೌತುಕಕ್ಕೆ ತೆರೆ ಎಳೆಯಿತು.

ಏಷ್ಯಾ ಒಷೇನಿಯಾ ಡೇವಿಸ್ ಕಪ್ ಗುಂಪು ಒಂದರ ಪಂದ್ಯಾವಳಿಗಾಗಿ ನಡೆದ ಡ್ರಾದಲ್ಲಿ ಭಾರತ ತಂಡದ ಡಬಲ್ಸ್ ವಿಭಾಗದಲ್ಲಿ ಬೋಪಣ್ಣ ಹಾಗೂ ಶ್ರೀರಾಮ್ ಬಾಲಾಜಿ ಜತೆಯಾಗಲಿದ್ದಾರೆ ಎಂಬುದು ಡ್ರಾ ವೇಳೆ ಸ್ಪಷ್ಟವಾಯಿತು.

ಪ್ರಸಕ್ತ ಪೇಸ್‌ಗಿಂತ 34 ಸ್ಥಾನ ಮೇಲಿರುವ ಬೋಪಣ್ಣ ವಿಶ್ವ ಶ್ರೇಯಾಂಕದಲ್ಲಿ 23ನೇ ಶ್ರೇಯಾಂಕ ಪಡೆದಿದ್ದು, ಅವರೊಂದಿಗೆ ಬಾಲಾಜಿ ಉಜ್ಬೇಕಿಸ್ತಾನದ ಡಬಲ್ಸ್ ಆಟಗಾರರಾದ ಫಾರುಖ್ ದುಸ್ತೋವ್ ಹಾಗೂ ಸಾಂಜರ್ ಫೇಜಿವ್ ವಿರುದ್ಧ ಸೆಣಸಲಿದ್ದಾರೆ.

ಶುಕ್ರವಾರ ನಡೆಯಲಿರುವ ಮೊದಲ ಸಿಂಗಲ್ಸ್‌'ನಲ್ಲಿ ತೈಮುರ್ ಇಸ್ಮಾಯಿಲೊವ್ ವಿರುದ್ಧ ರಾಮನಾಥನ್ ಸೆಣಸಲಿದ್ದರೆ, ಪ್ರಗ್ನೇಶ್ ಗುಣೇಶ್ವರನ್ ಎರಡನೇ ಸಿಂಗಲ್ಸ್‌ನಲ್ಲಿ ಫೆಜೀವ್ ವಿರುದ್ಧ ಕಾದಾಡಲಿದ್ದಾರೆ. ಏತನ್ಮಧ್ಯೆ ಭಾನುವಾರ ನಡೆಯಲಿರುವ ರಿವರ್ಸ್ ಸಿಂಗಲ್ಸ್‌ನಲ್ಲಿ ರಾಮನಾಥನ್ ಫೇಜಿವ್ ವಿರುದ್ಧ ಸೆಣಸಲಿದ್ದರೆ, ಗುಣೇಶ್ವರನ್ ಇಸ್ಮಾಯಿ ವಿರುದ್ಧ ಕಾದಾಡಲಿದ್ದಾರೆ.

click me!