ಲೆವರ್ ಕಪ್ ಟೂರ್ನಿಯಲ್ಲಿ ಟೆನಿಸ್ ಬದುಕಿನ ಕೊನೆಯ ಪಂದ್ಯವನ್ನಾಡಿದ ರೋಜರ್ ಫೆಡರರ್
ಪುರುಷರ ಡಬಲ್ಸ್ ನಲ್ಲಿ ಗೆಳೆಯ ರಾಫೆಲ್ ನಡಾಲ್ ಜತೆಗೂಡಿ ಕೊನೆಯ ಆಟ
ಪಂದ್ಯದ ಬಳಿಕ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರಿಟ್ಟ ಫೆಡರರ್-ನಡಾಲ್
ಲಂಡನ್(ಸೆ.24): ಸುಮಾರು ಎರಡು ದಶಕಗಳ ಕಾಲ ಟೆನಿಸ್ ಜಗತ್ತನ್ನು ಅಕ್ಷರಶಃ ಆಳಿದ್ದ ಸ್ವಿಸ್ ಟೆನಿಸ್ ದಂತಕಥೆ ರೋಜರ್ ಫೆಡರರ್ ಅವರ ಟೆನಿಸ್ ವೃತ್ತಿಬದುಕು ಶನಿವಾರಕ್ಕೆ ಅಂತ್ಯವಾಗಿದೆ. ತಮ್ಮ ಬಹುಕಾಲದ ಎದುರಾಳಿ ಹಾಗೂ ಆಪ್ತ ಮಿತ್ರ ರಾಫೆಲ್ ನಡಾಲ್ ಜತೆ ಲೆವರ್ ಕಪ್ ಟೆನಿಸ್ ಟೂರ್ನಿಯಲ್ಲಿ ಕಣಕ್ಕಿಳಿದಿದ್ದ ಫೆಡರರ್, ಪುರುಷರ ಡಬಲ್ಸ್‌ನ ಮೊದಲ ಸುತ್ತಿನಲ್ಲೇ ಫ್ರಾನ್ಸೆಸ್ ಟಿಯಾಫೋ ಮತ್ತು ಜ್ಯಾಕ್ ಸಾಕ್ ಜೋಡಿ ಎದುರು ಅಘಾತಕಾರಿ ಸೋಲು ಅನುಭವಿಸುವ ಮೂಲಕ ತನ್ನ ಅಭಿಯಾನವನ್ನು ಅಂತ್ಯಗೊಳಿಸಿದೆ. ವಿದಾಯದ ಪಂದ್ಯದ ಬಳಿಕ ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ಉಕ್ಕಿ ಬರುತ್ತಿದ್ದ ಭಾವನೆಗಳನ್ನು ನಿಯಂತ್ರಿಸಲಾಗದೇ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಘಟನೆಗೆ ಇಡೀ ಟೆನಿಸ್ ಜಗತ್ತು ಸಾಕ್ಷಿಯಾಗಿದೆ.
ರೋಜರ್ ಫೆಡರರ್-ರಾಫೆಲ್ ನಡಾಲ್ ಎದುರು ರೆಸ್ಟ್ ಆಫ್ ದಿ ವಲ್ಡ್‌ರ್ ತಂಡದ ಫ್ರಾನ್ಸೆಸ್ ಟಿಯಾಫೋ ಮತ್ತು ಜ್ಯಾಕ್ ಸಾಕ್ ಜೋಡಿಯು 4-6, 7-6(7/2), 11-9 ಅಂತರದಲ್ಲಿ ಗೆಲುವು ದಾಖಲಿಸಿತು. ಪಂದ್ಯ ಮುಕ್ತಾಯದ ಬಳಿಕ ರೋಜರ್ ಫೆಡರರ್ ಕೊಂಚ ಭಾವೋದ್ವೇಗಕ್ಕೆ ಒಳಗಾಗುವ ಮೂಲಕ ತಮ್ಮ ಟೆನಿಸ್ ವೃತ್ತಿಬದುಕಿನ ಕೆಲವು ಮಹತ್ವದ ಘಟ್ಟಗಳನ್ನು ಸ್ಮರಿಸಿಕೊಂಡರು. ರೋಜರ್ ಫೆಡರರ್ ಭಾವೋದ್ವೇಗಕ್ಕೊಳಗಾಗಿ ಕಣ್ಣೀರಿಡುತ್ತಿದ್ದಂತೆಯೇ ಪಕ್ಕದಲ್ಲೇ ಕುಳಿತಿದ್ದ 22 ಟೆನಿಸ್ ಗ್ರ್ಯಾನ್ ಸ್ಲಾಂ ದುಃಖ ತಡೆಯಲಾಗದೇ ಕಣ್ಣೀರಿಟ್ಟರು. ಈ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
Rafa Nadal and Roger Federer in tears after Federer’s retirement is the best sports moment you’ll see in some time.
Ultimate respect. 🐐🐐 pic.twitter.com/fUeY8wQSTM
ಇನ್ನು ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಅಧಿಕೃತ ಟ್ವಿಟರ್ ಖಾತೆಯಲ್ಲೂ ಈ ಭಾವನಾತ್ಮಕ ಕ್ಷಣಗಳ ಫೋಟೋವನ್ನು ಹಂಚಿಕೊಂಡಿದ್ದು, ಅತಿದೊಡ್ಡ ಎದುರಾಳಿಗಳು, ಅತ್ಯುತ್ತಮ ಸ್ನೇಹಿತರು ಎಂದು ಟ್ವೀಟ್ ಮಾಡಿದೆ.
Biggest rivals, best mates 🥹 pic.twitter.com/CZcEkGVrXA
— #AusOpen (@AustralianOpen)ಸ್ವಿಸ್ ಟೆನಿಸ್ ದಂತಕಥೆ ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ಟೆನಿಸ್ ಅಂಕಣದಲ್ಲಿ ಬದ್ದ ಎದುರಾಳಿಗಳೆಂದೇ ಬಿಂಬಿಸಲ್ಪಟ್ಟಿದ್ದಾರೆ. ಎರಡು ದಶಕಗಳ ಕಾಲ ಈ ಇಬ್ಬರು ಟೆನಿಸ್ ದಿಗ್ಗಜರು ಟೆನಿಸ್ ಜಗತ್ತನ್ನು ಆಳಿದ್ದಾರೆ. ಈ ಇಬ್ಬರು ಆಟಗಾರರೇ ಕಳೆದೆರಡು ದಶಕಗಳಲ್ಲಿ 42 ಟೆನಿಸ್ ಗ್ರ್ಯಾನ್ ಸ್ಲಾಂ ಜಯಿಸಿದ್ದಾರೆ.
Laver Cup 2022 ಟೆನಿಸ್ ತಾರೆಯರ ಜತೆ ಡಿನ್ನರ್ ಪಾರ್ಟಿ ಮಾಡಿದ ರೋಜರ್ ಫೆಡರರ್..!
ಸುಮಾರು ಎರಡೂವರೆ ದಶಕಗಳ ಟೆನಿಸ್ ವೃತ್ತಿಜೀವನದಲ್ಲಿ ರೋಜರ್ ಫೆಡರರ್, ಆಧುನಿಕ ಕಾಲಘಟ್ಟದ ಟೆನಿಸ್ ದಿಗ್ಗಜರಾದ ರಾಫೆಲ್ ನಡಾಲ್ ಹಾಗೂ ನೋವಾಕ್ ಜೋಕೋವಿಚ್ ಜತೆ ಹಲವಾರು ಜಿದ್ದಾಜಿದ್ದಿನ ಕಾದಾಟವನ್ನು ನಡೆಸಿದ್ದರು. ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ಪುರುಷರ ಸಿಂಗಲ್ಸ್‌ನಲ್ಲಿ 9 ಗ್ರ್ಯಾನ್ ಸ್ಲಾಂ ಫೈನಲ್ ಸೇರಿದಂತೆ ಒಟ್ಟು 40 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ನಡಾಲ್ 24 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದರೆ, ಫೆಡರರ್ 16 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ.
ಇನ್ನು ಸರ್ಬಿಯಾದ ನೋವಾಕ್ ಜೋಕೋವಿಚ್ ಹಾಗೂ ರೋಜರ್ ಫೆಡರರ್ ಒಟ್ಟು 50 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಫೆಡರರ್ 23 ಪಂದ್ಯಗಳಲ್ಲಿ ಜಯ ದಾಖಲಿಸಿದ್ದರೆ, ಜೋಕೋವಿಚ್ 27 ಪಂದ್ಯಗಳನ್ನು ಗೆದ್ದು ಬೀಗಿದ್ದಾರೆ.