ಪ್ರತಿ ಸಿಕ್ಸರ್‌ - ಬೌಂಡರಿಗೆ ತಲಾ 100, 50 ಸಸಿ ಕೊಡುಗೆ!

By Web DeskFirst Published Aug 17, 2019, 8:59 AM IST
Highlights

KPL ಟೂರ್ನಿಯಲ್ಲಿ ದಾಖಲಾಗುವ ಪ್ರತಿ ಸಿಕ್ಸರ್‌ಗೆ 100 ಸಸಿ ಹಾಗೂ ಪ್ರತಿ ಬೌಂಡರಿಗೆ 50 ಸಸಿಗಳನ್ನು ಕಾವೇರಿ ಕೂಗು ಅಭಿಯಾನಕ್ಕೆ ಕೊಡುಗೆ ನೀಡುವುದಾಗಿ ‘ಆ್ಯಡ್‌ಟುಪ್ರೊ’ ಸಂಸ್ಥೆ ಘೋಷಿಸಿದೆ.

ಬೆಂಗಳೂರು [ಆ.17]:  ಕಾವೇರಿ ನದಿ ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಈಶ ಫೌಂಡೇಶನ್‌ ಹಮ್ಮಿಕೊಂಡಿರುವ ‘ಕಾವೇರಿ ಕೂಗು’ ಕಾವೇರಿ ಜಲಾನಯನ ಪ್ರದೇಶದಲ್ಲಿ ಸಸಿ ನೆಡುವ ಅಭಿಯಾನಕ್ಕೆ ಈ ಬಾರಿಯ ಕರ್ನಾಟಕ ಪ್ರೀಯರ್‌ ಲೀಗ್‌(ಕೆಪಿಎಲ್‌) ಸಾಥ್‌ ನೀಡಿದೆ.

ಈ ಟೂರ್ನಿಯಲ್ಲಿ ದಾಖಲಾಗುವ ಪ್ರತಿ ಸಿಕ್ಸರ್‌ಗೆ 100 ಸಸಿ ಹಾಗೂ ಪ್ರತಿ ಬೌಂಡರಿಗೆ 50 ಸಸಿಗಳನ್ನು ಕಾವೇರಿ ಕೂಗು ಅಭಿಯಾನಕ್ಕೆ ಕೊಡುಗೆ ನೀಡುವುದಾಗಿ ‘ಆ್ಯಡ್‌ಟುಪ್ರೊ’ ಸಂಸ್ಥೆ ಘೋಷಿಸಿದೆ. ಈ ಸಸಿಗಳನ್ನು ರೈತರಿಗೆ ವಿತರಿಸಿ ಕಾವೇರಿ ಜಲಾನಯನ ಪ್ರದೇಶದಲ್ಲಿ ನೆಡಿಸಲಾಗುತ್ತದೆ.

ಶುಕ್ರವಾರ ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 8ನೇ ಆವೃತ್ತಿಯ ಕೆಪಿಎಲ್‌ ಕ್ರಿಕೆಟ್‌ ಪಂದ್ಯಾವಳಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತ ತಂಡದ ಮಾಜಿ ವೇಗದ ಬೌಲರ್‌ ವೆಂಕಟೇಶ್‌ ಪ್ರಸಾದ್‌ ಕಾವೇರಿ ಕೂಗು ಅಭಿಯಾನ ಬೆಂಬಲಿಸಿ ಅದರ ಬಗ್ಗೆ ಮಾತನಾಡಿದರು. ಅಂತೆಯೆ ಪಂದ್ಯಾವಳಿಯಲ್ಲಿ ದಾಖಲಾಗುವ ಪ್ರತಿ ಸಿಕ್ಸ್‌ ಮತ್ತು ಬೌಂಡರಿಗೆ ಸಸಿಗಳನ್ನು ಕೊಡುಗೆ ನೀಡುವ ವಿಚಾರ ತಿಳಿದು ಸಂತಸ ವ್ಯಕ್ತಪಡಿಸಿದರು. ಈ ಬಗ್ಗೆ ತಾವು ಬಹಳ ಕಾತುರಾಗಿರುವುದಾಗಿ ಹೇಳಿದರು. ಇದೇ ವೇಳೆ ನಟಿ ರಾಗಿಣಿ ದ್ವಿವೇದಿ ಹಾಗೂ ರಾರ‍ಯಪರ್‌ ಚಂದನ್‌ ಶೆಟ್ಟಿಕೂಡ ಈ ಕಾವೇರಿ ಕೂಗು ಅಭಿಯಾನಕ್ಕೆ ಬೆಂಬಲ ಸೂಚಿಸಿದರು.

ಕಾವೇರಿ ಕಾಲಿಂಗ್‌ ಹೆಸರಿನ ಹ್ಯಾಷ್‌ಟ್ಯಾಗ್‌ನಲ್ಲಿ ಈ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಪ್ರಸ್ತುತ ಆವೃತ್ತಿಯ ಕೆಪಿಎಲ್‌ ಟೂರ್ನಿಯಲ್ಲಿ ಅಭಿಯಾನವನ್ನು ಸಾಮಾಜಿಕ ಕಳಕಳಿಯ ಸಹಭಾಗಿತ್ವದಡಿ ಕೈಗೊಳ್ಳಲಾಗಿದೆ. ಭಾರತ ಕ್ರಿಕೆಟ್‌ ತಂಡ ಸ್ಟಾರ್‌ ಬ್ಯಾಟ್ಸ್‌ಮನ್‌ ಕೆ.ಎಲ್‌.ರಾಹುಲ್‌ ಅವರು ಈ ಹಿಂದೆ ಇಶಾ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು ಜತೆ ಕಾವೇರಿ ನದಿಯ ಸ್ಥಿತಿಗತಿ ಹಾಗೂ ನದಿಪಾತ್ರ ಪುನಶ್ಚೇತನಕ್ಕೆ ಕೈಗೊಳ್ಳಬೇಕಾದ ಅರಣ್ಯ ಕೃಷಿ ಸೇರಿದಂತೆ ಹಲವು ಕ್ರಮಗಳ ಬಗ್ಗೆ ಚರ್ಚಿಸಿದ್ದರು.

ಮಹಾತ್ವಕಾಂಕ್ಷಿ ಯೋಜನೆ :  ಈಶ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು ಅವರು ಕಾವೇರಿ ನದಿ ಸಂರಕ್ಷಿಸುವ ಉದ್ದೇಶದಿಂದ ಕಾವೇರಿ ನದಿ ಪಾತ್ರದಲ್ಲಿ 242 ಕೋಟಿ ಸಸಿ ನೆಡುವ ಮಹಾತ್ವಾಕಾಂಕ್ಷೆಯೊಂದಿಗೆ ದೇಶದಲ್ಲೇ ಮೊದಲ ಬಾರಿಗೆ ಇಂತಹ ಬೃಹತ್‌ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಅರಣ್ಯ ಕೃಷಿಯಿಂದ ರೈತರ ಆದಾಯ ಮುಂದಿನ 5-7 ವರ್ಷದಲ್ಲಿ ಮೂರಕ್ಕೂ ಹೆಚ್ಚುಪಟ್ಟು ಜಾಸ್ತಿಯಾಗುವ ನಿರೀಕ್ಷೆ ಹೊಂದಲಾಗಿದೆ.

click me!