KPL ಸ್ಪಾಟ್ ಫಿಕ್ಸಿಂಗ್ ಯತ್ನಿಸಿದ್ದ ಬುಕ್ಕಿ ಬಂಧನ..!

By Kannadaprabha NewsFirst Published Oct 3, 2019, 9:43 AM IST
Highlights

ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯ ವೇಳೆ ಸ್ಪಾಟ್ ಫಿಕ್ಸಿಂಗ್ ನಡೆಸಲು ಯತ್ನಿಸಿದ ಬುಕ್ಕಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಬೆಂಗಳೂರು[ಅ.03]: ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಟಿ20 ಪಂದ್ಯಾವಳಿಗೆ ಬೆಟ್ಟಿಂಗ್‌ ಕಳಂಕದ ತರುವಾಯ ಇದೀಗ ಫಿಕ್ಸಿಂಗ್‌ ಕಪ್ಪು ಚುಕ್ಕೆ ಅಂಟಿಕೊಂಡಿದೆ. ತಂಡವೊಂದರ ಬೌಲರ್‌ಗೆ ಓವರೊಂದರಲ್ಲಿ ಹೆಚ್ಚು ರನ್‌ ನೀಡಿದರೆ ಭಾರೀ ಹಣ ನೀಡುವುದಾಗಿ ಆಮಿಷವೊಡ್ಡಿದ್ದ ಬುಕ್ಕಿಯೊಬ್ಬನನ್ನು ಬೆಂಗಳೂರು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಕೆಪಿಎಲ್ ಬೆಟ್ಟಿಂಗ್: ಬೆಳಗಾವಿ ತಂಡದ ಮಾಲೀಕನ ಬಂಧನ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಹಾಗೂ ಕೆಪಿಎಲ್‌ನಲ್ಲಿ ಡ್ರಮ್ಮರ್‌ ಆಗಿ ಮಿಂಚುತ್ತಿದ್ದ ರಾಜಸ್ಥಾನ ಮೂಲದ ಭವೇಶ್‌ ಬಾಫ್ನಾ (28) ಎಂಬಾತನೇ ಬಂಧಿತ ಬುಕ್ಕಿ. ಈತ ಕೆಪಿಎಲ್‌ನ ಬಳ್ಳಾರಿ ಟಸ್ಕರ್ಸ್‌ ತಂಡದ ವೇಗದ ಬೌಲರ್‌ ಭಾವೇಶ್‌ ಗುಲೇಚಾ (26) ಅವರನ್ನು ಸ್ಪಾಟ್‌ ಫಿಕ್ಸಿಂಗ್‌ಗೆ ಸಹಕರಿಸುವಂತೆ ಸಂಪರ್ಕ ಮಾಡಿದ್ದ. ಓವರೊಂದರಲ್ಲಿ 10ಕ್ಕೂ ಹೆಚ್ಚು ರನ್‌ ನೀಡುವಂತೆ ಆಮಿಷವೊಡ್ಡಿದ್ದ. ಈ ಹಿನ್ನೆಲೆಯಲ್ಲಿ ಬಾಫ್ನಾನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಪ್ರಮುಖ ಬುಕಿ ಸಯ್ಯಂ ಎಂಬಾತ ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

KPL ಫಿಕ್ಸಿಂಗ್; ನಾಲ್ವರು ಕ್ರಿಕೆಟಿಗರಿಗೆ CCB ಸಮನ್ಸ್!

ಮೂಲತಃ ರಾಜಸ್ಥಾನದ ಭಾವೇಶ್‌ ಗುಲೇಚಾ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. 16ನೇ ವಯಸ್ಸಿನಿಂದ ಜವಾನ್‌ ಕ್ರಿಕೆಟ್‌ ಕ್ಲಬ್‌ ಪರ ಆಡುತ್ತಿದ್ದ ಭಾವೇಶ್‌ಗೆ ಬುಕ್ಕಿ ಭವೇಶ್‌ ಬಾಫ್ನಾ ಚಿಕ್ಕಂದಿನಿಂದಲೂ ಸ್ನೇಹಿತ. ಪ್ರಸ್ತುತ ಭಾವೇಶ್‌ ಗುಲೇಚಾ ಕೆಪಿಎಲ್‌ನಲ್ಲಿ ಬಳ್ಳಾರಿ ಟಸ್ಕರ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಕೆಪಿಎಲ್‌ ಆರಂಭಕ್ಕೂ ಮುನ್ನ ಕಳೆದ ಜುಲೈನಲ್ಲಿ ಸ್ನೇಹಿತ ಭಾವೇಶ್‌ ಗುಲೇಚಾಗೆ ಕರೆ ಮಾಡಿದ್ದ ಆರೋಪಿ, ತನ್ನನ್ನು ಭೇಟಿಯಾಗುವಂತೆ ಹೇಳಿದ್ದ. ಇಬ್ಬರೂ ಬೆಂಗಳೂರಿನ ಜೆ.ಪಿ.ನಗರದ ಕೆಫೆಯೊಂದರಲ್ಲಿ ಭೇಟಿಯಾಗಿದ್ದರು.

ಓವರ್‌ಗೆ 10 ರನ್‌ ನೀಡು!:

ಈ ವೇಳೆ ಬುಕ್ಕಿ ಬೌಲರ್‌ ಭಾವೇಶ್‌ ಗುಲೇಚಾಗೆ ಓವರ್‌ನಲ್ಲಿ 10 ರನ್‌ ಅಥವಾ ಅದಕ್ಕಿಂತ ಹೆಚ್ಚು ರನ್‌ ಹೊಡೆಸಿಕೊಂಡರೆ ಹೆಚ್ಚು ಹಣ ಗಳಿಸಬಹುದೆಂದು ಹೇಳಿದ್ದ. ಇದಕ್ಕೆ ಭಾವೇಶ್‌ ನಿರಾಕರಿಸಿದ್ದರು. ಆದರೂ ಬುಕ್ಕಿ ಒತ್ತಾಯ ಮಾಡಿದ್ದ.

ಕೆಪಿಎಲ್‌ ಪಂದ್ಯಾವಳಿ ಆರಂಭವಾದ ಬಳಿಕ ಪುನಃ ಬುಕ್ಕಿ, ಭಾವೇಶ್‌ ಅವರನ್ನು ಸಂಪರ್ಕ ಮಾಡಿದ್ದ. ಈ ವೇಳೆ ಬುಕ್ಕಿ, ‘ಐಪಿಎಲ್‌ನಲ್ಲಿ ನೀನು ಆಡಲು ಸಹಾಯ ಮಾಡುವ ವ್ಯಕ್ತಿಯನ್ನು ಭೇಟಿ ಮಾಡಿಸುತ್ತೇನೆ’ ಎಂದು ಏರ್‌ಪೋರ್ಟ್‌ ಸಮೀಪದ ತಾಜ್‌ ಹೋಟೆಲ್‌ಗೆ ಭಾವೇಶ್‌ರನ್ನು ಕರೆದೊಯ್ದಿದ್ದ. ಹೋಟೆಲ್‌ನ ಕೊಠಡಿಯೊಂದರಲ್ಲಿದ್ದ ಸಯ್ಯಂನನ್ನು ಪರಿಚಯ ಮಾಡಿಸಿದ್ದ. ಎರಡು ಲಕ್ಷ ಹಣ ಕೊಡುತ್ತೇನೆ. ಓವರ್‌ವೊಂದರಲ್ಲಿ 10 ಹಾಗೂ ಅದಕ್ಕಿಂತ ಹೆಚ್ಚು ರನ್‌ ನೀಡಬೇಕು. ತಾವು ಹೇಳಿದಂತೆ ನಡೆದುಕೊಂಡರೆ ಹಣದ ಜತೆಗೆ ಇತರೆ ಸೌಲಭ್ಯ ಕೊಡುವುದಾಗಿ ಭಾವೇಶ್‌ಗೆ ಸಯ್ಯಂ ಪುಸಲಾಯಿಸಿದ್ದ. ಇದಕ್ಕೆ ಒಪ್ಪದ ಭಾವೇಶ್‌ ಹೋಟೆಲ್‌ನಿಂದ ತೆರಳಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಕೆಪಿಎಲ್‌ನ 8ನೇ ಆವೃತ್ತಿಯಲ್ಲಿ ಬೆಟ್ಟಿಂಗ್‌ ಮತ್ತು ಮ್ಯಾಚ್‌ ಫಿಕ್ಸಿಂಗ್‌ ನಡೆಸಿರುವ ಹಿನ್ನೆಲೆಯಲ್ಲಿ ಬೆಳಗಾವಿ ತಂಡದ ಮಾಲೀಕ ಅಶ್ಫಾಕ್‌ ಅಲಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಅಶ್ಫಾಕ್‌ ದುಬೈ ಮೂಲದ ಬುಕ್ಕಿ ಜತೆ ಬೆಟ್ಟಿಂಗ್‌ ನಡೆಸಿರುವುದು ಸಿಸಿಬಿ ತನಿಖೆ ವೇಳೆ ಬೆಳಕಿಗೆ ಬಂದಿತ್ತು.

ಬಂಧಿತ ಭವೇಶ್‌ ಬಾಫ್ನಾ ಐಪಿಎಲ್‌(ಇಂಡಿಯನ್‌ ಪ್ರೀಮಿಯರ್‌ ಲೀಗ್‌)ನಲ್ಲಿ ಸುಮಾರು ಏಳು ವರ್ಷಗಳಿಂದ ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ ತಂಡದ ಡ್ರಮ್ಮರ್‌ ಆಗಿದ್ದ. ಪ್ರಸಕ್ತ ಕೆಪಿಎಲ್‌ನಲ್ಲಿ ‘ಡ್ರಮ್ಮರ್‌’ ಆಗಿದ್ದ. ಹೀಗಾಗಿ ಆತನಿಗೆ ಆಟಗಾರರ ಪರಿಚಯವಿದೆ. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಸಿಕ್ಕ ಬಳಿಕ ಹೆಚ್ಚು ಮಾಹಿತಿ ಹೊರ ಬರಲಿದೆ.

- ಸಂದೀಪ್‌ ಪಾಟೀಲ್‌, ಜಂಟಿ ಪೊಲೀಸ್‌ ಆಯುಕ್ತ (ಅಪರಾಧ)

click me!