ಕೆಪಿಎಲ್ ಕ್ರಿಕೆಟ್’ನ ಒಂದು ಮೆಲುಕು; ಆಟಗಾರರ ಹರಾಜಿಗೆ ಕ್ಷಣಗಣನೆ

First Published Jul 20, 2018, 5:31 PM IST
Highlights

ಬೆಂಗಳೂರು, ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ಪಂದ್ಯಾವಳಿಗಳು ನಡೆಯಲಿದ್ದು, ಬಿಜಾಪುರ ಬುಲ್ಸ್, ಬೆಳಗಾವಿ ಪ್ಯಾಂಥರ್ಸ್, ಬಳ್ಳಾರಿ, ಬಳ್ಳಾರಿ ಟಸ್ಕರ್ಸ್, ಹುಬ್ಬಳ್ಳಿ ಟೈಗರ್ಸ್, ಮೈಸೂರು ವಾರಿಯರ್ಸ್, ನಮ್ಮ ಶಿವಮೊಗ್ಗ, ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. 

ಬೆಂಗಳೂರು[ಜು.20]: ಇಂಡಿಯನ್ ಪ್ರೀಮಿಯರ್ ಲೀಗ್ ಬಳಿಕ ಇದೀಗ ರಾಜ್ಯದ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಪ್ರೀಮಿಯರ್ ಲೀಗ್ ಆನಂದಿಸುವ ಅವಕಾಶ ಒದಗಿ ಬಂದಿದೆ
ಹೌದು, ಆಗಸ್ಟ್ 15ರಿಂದ ಕರ್ನಾಟಕ  ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗಲಿದ್ದು, ಶನಿವಾರ[ಜು.21] ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಏಳನೇ ಆವೃತ್ತಿಯ ಕೆಪಿಎಲ್’ನಲ್ಲಿ ಏಳು ತಂಡಗಳು ಈ ಬಾರಿ ಪ್ರಶಸ್ತಿಗಾಗಿ ಕಾದಾಡಲಿವೆ.

ಬೆಂಗಳೂರು, ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ಪಂದ್ಯಾವಳಿಗಳು ನಡೆಯಲಿದ್ದು, ಬಿಜಾಪುರ ಬುಲ್ಸ್, ಬೆಳಗಾವಿ ಪ್ಯಾಂಥರ್ಸ್, ಬಳ್ಳಾರಿ, ಬಳ್ಳಾರಿ ಟಸ್ಕರ್ಸ್, ಹುಬ್ಬಳ್ಳಿ ಟೈಗರ್ಸ್, ಮೈಸೂರು ವಾರಿಯರ್ಸ್, ನಮ್ಮ ಶಿವಮೊಗ್ಗ, ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. 

ಕೆಪಿಎಲ್ ಕ್ರಿಕೆಟ್’ನ ಮೆಲುಕು ನಿಮ್ಮ ಮುಂದೆ..

ಮೊದಲ ಆವೃತ್ತಿ: 2009/10 - ಪ್ರಾವಿಡೆಂಟ್ ಬೆಂಗಳೂರು ಚಾಂಪಿಯನ್ 
ಕೆಪಿಎಲ್ ಮೊದಲ ಆವೃತ್ತಿಯಲ್ಲಿ ಒಟ್ಟು 8 ತಂಡಗಳು ಪಾಲ್ಗೊಂಡಿದ್ದವು. ಎಂ. ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡವನ್ನು ಮಣಿಸಿ ಪ್ರಾವಿಡೆಂಟ್ ಬೆಂಗಳೂರು ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಮನೀಶ್ ಪಾಂಡೆ ಅಜೇಯ 112 ರನ್ ಸಿಡಿಸುವ ಮೂಲಕ ವೈಯುಕ್ತಿಕ ಗರಿಷ್ಠ ಮೊತ್ತ ಬಾರಿಸಿದ ದಾಖಲೆ ನಿರ್ಮಿಸಿದರು.

ಎರಡನೇ ಆವೃತ್ತಿ: 2010/11 - ಮಂಗಳೂರು ಯುನೈಟೈಡ್ ಚಾಂಪಿಯನ್
ಎರಡನೇ ಆವೃತ್ತಿಯಲ್ಲಿ ಗಮನಾರ್ಹ ಪ್ರದರ್ಶನ ತೋರುವ ಮೂಲಕ ಶಾಮನೂರು ದಾವಣಗೆರೆ ಡೈಮಂಡ್ಸ್ ಆಡಿದ 7 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಹಂತ ಪ್ರವೇಶಿಸಿತ್ತು. ಆದರೆ ಪ್ರಶಸ್ತಿ ಸುತ್ತಿಗೇರಲು ವಿಫಲವಾಯಿತು. ಇನ್ನು ಸತತ ಎರಡನೇ ಬಾರಿಗೆ ಚಾಂಪಿಯನ್ ಆಗುವ ಪ್ರಾವಿಡೆಂಟ್ ಬೆಂಗಳೂರು ತಂಡದ ಕನಸನ್ನು ಭಗ್ನ ಮಾಡಿ ಮಂಗಳೂರು ಯುನೈಟೈಡ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.

ಮೂರನೇ ಆವೃತ್ತಿ: 2014/15 - ಮೈಸೂರು ವಾರಿಯರ್ಸ್
ಕೆಪಿಎಲ್ ಮೂರನೇ ಆವೃತ್ತಿಯಲ್ಲಿ 7 ತಂಡಗಳು ಪಾಲ್ಗೊಂಡಿದ್ದವು. ಮೈಸೂರು ವಾರಿಯರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಬೆಳಗಾವಿ ಪ್ಯಾಂಥರ್ಸ್ ತಂಡ ಎರಡನೇ ಬಾರಿಗೆ ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸಿತು.

ನಾಲ್ಕನೇ ಆವೃತ್ತಿ: 2015/16 - ಬಿಜಾಪುರ ಬುಲ್ಸ್ ಚಾಂಪಿಯನ್
ನಾಲ್ಕನೇ ಆವೃತ್ತಿಯ ಕೆಪಿಎಲ್’ನಲ್ಲಿ ಮತ್ತೆ ನಾಲ್ಕು ತಂಡಗಳು ಪಾಲ್ಗೊಂಡಿದ್ದವು. ನಮ್ಮ ಶಿವಮೊಗ್ಗ ಹೊಸದಾಗಿ ಸೇರ್ಪಡೆಗೊಂಡ ತಂಡ. ಬಿಜಾಪುರ ಬುಲ್ಸ್ ಚಾಂಪಿಯನ್ ಆದರೆ, ಹುಬ್ಬಳ್ಳಿ ಟೈಗರ್ಸ್ ರನ್ನರ್ಸ್’ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಐದನೇ ಆವೃತ್ತಿ: 2016/17 - ಬಳ್ಳಾರಿ ಟಸ್ಕರ್ಸ್ ಚಾಂಪಿಯನ್
ಐದನೇ ಆವೃತ್ತಿಯಲ್ಲಿ ಮೈಸೂರು ವಾರಿಯರ್ಸ್, ಹುಬ್ಬಳ್ಳಿ ಟೈಗರ್ಸ್, ಬೆಳಗಾವಿ ಪ್ಯಾಂಥರ್ಸ್ ಹಾಗೂ ಬಳ್ಳಾರಿ ಟಸ್ಕರ್ಸ್ ತಂಡಗಳು ಸೆಮಿಫೈನಲ್ ಪ್ರವೇಶಿಸಿದ್ದವು. ಬಳ್ಳಾರಿ ಟಸ್ಕರ್ಸ್ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಹುಬ್ಬಳ್ಳಿ ಟೈಗರ್ಸ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಆರನೇ ಆವೃತ್ತಿ: 2017/18 - ಬೆಳಗಾವಿ ಪ್ಯಾಂಥರ್ಸ್ ಚಾಂಪಿಯನ್
ಕಳೆದ ಆವೃತ್ತಿಯಲ್ಲಿ ರಾಕ್’ಸ್ಟಾರ್ಸ್ ತಂಡ ಭಾಗವಹಿಸಿರಲಿಲ್ಲ. ಹೀಗಾಗಿ ಮತ್ತೆ 7 ತಂಡಗಳು ಕೆಪಿಎಲ್ ಆವೃತ್ತಿಯಲ್ಲಿ ಪಾಲ್ಗೊಂಡಿದ್ದವು. ಬಿಜಾಪುರ ಬುಲ್ಸ್ ತಂಡವನ್ನು ಮಣಿಸಿ ಬೆಳಗಾವಿ ಪ್ಯಾಂಥರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 

ಏಳನೇ ಆವೃತ್ತಿ....?

click me!