IPL 2018: ಎಲಿಮಿನೇಟರ್ ಕಾದಾಟದಲ್ಲಿ ಹೊರಬೀಳೋರ್ಯಾರು..?

First Published May 23, 2018, 4:07 PM IST
Highlights

ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡರ್ಸ್‌ ಹಾಗೂ ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗಲಿದ್ದು, ಗೆಲ್ಲುವ ತಂಡ 2ನೇ ಕ್ವಾಲಿಫೈಯರ್ ಪಂದ್ಯದಲ್ಲಾಡುವ ಅವಕಾಶ ಪಡೆದರೆ, ಸೋಲುವ ತಂಡ ಟೂರ್ನಿ ಯಿಂದ ಹೊರಬೀಳಲಿದೆ. ಈ ಆವೃತ್ತಿಯಲ್ಲಿ ಕೆಕೆಆರ್ ಹಾಗೂ ರಾಜಸ್ಥಾನ ರಾಯಲ್ಸ್ 2 ಬಾರಿ ಮುಖಾಮುಖಿಯಾಗಿದ್ದು, ಎರಡು ಬಾರಿಯೂ ಕೋಲ್ಕತಾ ಪ್ರಾಬಲ್ಯ ಮೆರೆದು, ಗೆಲುವು ಪಡೆದಿದೆ. 

ಕೋಲ್ಕತಾ[ಮೇ.23]: ಐಪಿಎಲ್ ಪ್ಲೇ-ಆಫ್‌ಗೇರಿರುವ 4 ತಂಡಗಳ ಪೈಕಿ ಒಂದು ತಂಡದ ಅಭಿಯಾನ ಇಂದು ಅಂತ್ಯಗೊಳ್ಳಲಿದೆ. ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡರ್ಸ್‌ ಹಾಗೂ ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗಲಿದ್ದು, ಗೆಲ್ಲುವ ತಂಡ 2ನೇ ಕ್ವಾಲಿಫೈಯರ್ ಪಂದ್ಯದಲ್ಲಾಡುವ ಅವಕಾಶ ಪಡೆದರೆ, ಸೋಲುವ ತಂಡ ಟೂರ್ನಿ ಯಿಂದ ಹೊರಬೀಳಲಿದೆ. ಈ ಆವೃತ್ತಿಯಲ್ಲಿ ಕೆಕೆಆರ್ ಹಾಗೂ ರಾಜಸ್ಥಾನ ರಾಯಲ್ಸ್ 2 ಬಾರಿ ಮುಖಾಮುಖಿಯಾಗಿದ್ದು, ಎರಡು ಬಾರಿಯೂ ಕೋಲ್ಕತಾ ಪ್ರಾಬಲ್ಯ ಮೆರೆದು, ಗೆಲುವು ಪಡೆದಿದೆ. 
ಕೆಕೆಆರ್‌ಗೆ ತವರಿನ ಲಾಭ: ಈ ಆವೃತ್ತಿಯಲ್ಲಿ ತವರಿನಲ್ಲಿ ಆಡಿರುವ ಒಟ್ಟು 7 ಪಂದ್ಯಗಳಲ್ಲಿ ಕೆಕೆಆರ್ 4ರಲ್ಲಿ ಗೆಲುವು ಸಾಧಿಸಿದೆ. ಅದರಲ್ಲೂ ಅಂತಿಮ 3 ಲೀಗ್ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಪ್ಲೇ-ಆಫ್ ಪ್ರವೇಶಿಸಿರುವ ಕೆಕೆಆರ್ ಈ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ. ಈ ಆವೃತ್ತಿಯಲ್ಲಿ ಗರಿಷ್ಠ ಮೊತ್ತ ದಾಖಲಿಸುವುದರ ಜತೆಗೆ ಕೊನೆ ಪಂದ್ಯದಲ್ಲಿ ಸನ್‌ರೈಸರ್ಸ್‌ ನೆಲಕ್ಕುರುಳಿಸಿದ ಕೆಕೆಆರ್, ಉತ್ತಮ ಲಯ ಕಾಪಾಡಿಕೊಂಡಿದೆ. ಕೆಕೆಆರ್ ಬ್ಯಾಟಿಂಗ್ ಕ್ರಮಾಂಕ ಬಲಿಷ್ಠವಾಗಿ ತೋರಿದರೂ, ದಿಢೀರ್ ಕುಸಿಯುವ ಸಾಧ್ಯತೆ ಹೆಚ್ಚು. ಒಂದೊಮ್ಮೆ ಬ್ಯಾಟ್ಸ್‌ಮನ್‌ಗಳು ಮಿಂಚಿದರೆ, ರಾಜಸ್ಥಾನ ಜಯಗಳಿಸಲು ಹರಸಾಹಸ ಪಡೆ ಬೇಕಾಗುತ್ತದೆ. ನರೈನ್ ಬ್ಯಾಟಿಂಗ್ ಒಂದು ರೀತಿಯಲ್ಲಿ ಕೆಕೆಆರ್ ಪಾಲಿಗೆ ಲಾಟರಿಯಂತಾಗಿದ್ದು, ಪಂದ್ಯದ ಗತಿಯೇ ಬದಲಾಗಬಹುದು. ಕ್ರಿಸ್ ಲಿನ್, ರಾಬಿನ್ ಉತ್ತಪ್ಪ ಅಗ್ರ ಕ್ರಮಾಂಕದಲ್ಲಿ ಆಡಲಿದ್ದಾರೆ. ಕಾರ್ತಿಕ್ (438) ರನ್‌ನೊಂದಿಗೆ ತಂಡದ ಶ್ರೇಷ್ಠ ಬ್ಯಾಟ್ಸ್‌ಮನ್ ಎನಿಸಿದ್ದಾರೆ. 6 ಪಂದ್ಯಗಳಲ್ಲಿ ಔಟಾಗದೇ ಉಳಿದಿರುವ ಕಾರ್ತಿಕ್, ಫಿನಿಶರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಶುಭ್‌ಮನ್ ಸಹ ಭರವಸೆ ಮೂಡಿಸಿದ್ದು, ತಂಡಕ್ಕೆ ಉಪಯುಕ್ತ ಕೊಡುಗೆ ನೀಡಬಲ್ಲರು. ರಸೆಲ್ ನಿರೀಕ್ಷಿತ ಪ್ರದರ್ಶನ ತೋರದಿದ್ದರೂ, ಅವರನ್ನು ಲಘುವಾಗಿ ಪರಿಗಣಿಸುವಂತಿಲ್ಲ.
ರಾಯಲ್ಸ್ ಮುಂದಿದೆ ಭಾರೀ ಸವಾಲು: ರಾಜಸ್ಥಾನ ಪ್ಲೇ-ಆಫ್‌ಗೇರುವಲ್ಲಿ ಪ್ರಮುಖ ಪಾತ್ರ ವಹಿಸಿದ ಜೋಸ್ ಬಟ್ಲರ್ ಹಾಗೂ ಅವರ ಇಂಗ್ಲೆಂಡ್ ಸಹ ಆಟಗಾರ ಬೆನ್ ಸ್ಟೋಕ್ಸ್, ಲೀಗ್‌ನಿಂದ
ಹೊರನಡೆದಿದ್ದಾರೆ. ಇವರಿಬ್ಬರ ಅನುಪಸ್ಥಿತಿಯಲ್ಲೂ ಅಂತಿಮ ಲೀಗ್ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಗೆದ್ದು ರಾಯಲ್ಸ್ ತನ್ನ ಸಾಮರ್ಥ್ಯ ಸಾಬೀತು ಪಡಿಸಿತ್ತು. ಆದರೆ ಆರ್‌ಸಿಬಿ ಬೌಲಿಂಗ್'ಗೆ ಹೋಲಿಸಿದರೆ, ಕೆಕೆಆರ್ ಬೌಲಿಂಗ್ ಪಡೆ ಬಲಿಷ್ಠವಾಗಿದೆ. ಪ್ರಮುಖವಾಗಿ ಈಡನ್‌ನ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ತ್ರಿವಳಿ ಸ್ಪಿನ್ನರ್‌ಗಳಾದ ಸುನಿಲ್ ನರೈನ್, ಪೀಯೂಷ್ ಚಾವ್ಲಾ ಹಾಗೂ ಕುಲ್ದೀಪ್ ಯಾದವ್‌ರನ್ನು ಎದುರಿಸುವುದು ರಾಯಲ್ಸ್ ಮುಂದಿರುವ ಅತಿದೊಡ್ಡ ಸವಾಲು. ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ ಅತ್ಯುತ್ತಮ ಲಯದಲ್ಲಿದ್ದು, ಕೆಕೆಆರ್ ವೇಗದ ಬೌಲಿಂಗ್ ಪಡೆ ಮುನ್ನಡೆಸಲಿದ್ದಾರೆ. ದ.ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್ ಹೆನ್ರಿಚ್ ಸೆನ್ ರಾಯಲ್ಸ್ ಪರ ಫಿನಿಶರ್ ಪಾತ್ರ ನಿರ್ವಹಿಸುವ ಸಾಧ್ಯತೆ ಇದೆ. ಕರ್ನಾಟಕದ ಕೆ.ಗೌತಮ್ ಹಾಗೂ ಶ್ರೇಯಸ್ ಗೋಪಾಲ್ ಸ್ಪಿನ್ ವಿಭಾಗವನ್ನು ಮುನ್ನಡೆಸಲಿದ್ದು, ರಾಯಲ್ಸ್ ಪಾಲಿಗೆ ಇವರಿಬ್ಬರ ಕೊಡುಗೆ ನಿರ್ಣಾಯಕವೆನಿಸಿದೆ. ಸ್ಯಾಮ್ಸನ್ ಹಾಗೂ ತ್ರಿಪಾಠಿ, ಕೆಕೆಆರ್ ಬೌಲಿಂಗ್‌ಗೆ ತಕ್ಕ ಉತ್ತರ ನೀಡುವ ವಿಶ್ವಾಸದಲ್ಲಿದ್ದಾರೆ. ಪ್ರಶಸ್ತಿ ಗೆಲ್ಲಲು ಮೂರೇ ಮೆಟ್ಟಿಲು ಬಾಕಿ ಇದ್ದು, ಮಾಜಿ ಚಾಂಪಿಯನ್‌ಗಳ ನಡುವೆ ಭಾರೀ ಪೈಪೋಟಿ ನಿರೀಕ್ಷೆ ಮಾಡಲಾಗಿದೆ. 

click me!