ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್‌ಗೆ ಇಂದು ಆರಂಭ

Published : Apr 23, 2022, 07:50 AM IST
ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್‌ಗೆ ಇಂದು ಆರಂಭ

ಸಾರಾಂಶ

* ಎರಡನೇ ಆವೃತ್ತಿಯ ಖೇಲೋ ಇಂಡಿಯಾ ವಿವಿ ಗೇಮ್ಸ್‌ ಇಂದಿನಿಂದ ಆರಂಭ * ಖೇಲೋ ಇಂಡಿಯಾ ವಿವಿ ಗೇಮ್ಸ್‌ಗೆ ಏಪ್ರಿಲ್‌ 24ರಂದು ಅಧಿಕೃತ ಚಾಲನೆ * ಕ್ರೀಡಾಕೂಟದಲ್ಲಿ ಕರ್ನಾಟಕದ 18 ಸೇರಿ ಒಟ್ಟಾರೆ 189 ವಿವಿಗಳು ಪಾಲ್ಗೊಳ್ಳಲಿವೆ

ಬೆಂಗಳೂರು(ಏ.23: ಬಹುನಿರೀಕ್ಷಿತ 2ನೇ ಆವೃತ್ತಿಯ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್‌ಗೆ (Khelo India University Games 2022) ವೇದಿಕೆ ಸಜ್ಜುಗೊಂಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ, ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್‌), ಜೈನ್‌ ವಿಶ್ವವಿದ್ಯಾನಿಲಯಗಳ ಸಹಭಾಗಿತ್ವದಲ್ಲಿ ನಡೆಯಲಿರುವ ಗೇಮ್ಸ್‌ಗೆ ಏಪ್ರಿಲ್‌ 24ರಂದು ಚಾಲನೆ ಸಿಗಲಿದ್ದು, ಮೇ 3ರಂದು ಮುಕ್ತಾಯಗೊಳ್ಳಲಿದೆ. ಗೇಮ್ಸ್‌ಗೆ ಬೇಕಾದ ಎಲ್ಲಾ ತಯಾರಿ ಮಾಡಲಾಗುತ್ತಿದ್ದು, ಕ್ರೀಡಾ ಕೇಂದ್ರಗಳು, ಮೈದಾನಗಳು ಕ್ರೀಡಾಪಟುಗಳನ್ನು ಬರಮಾಡಿಕೊಳ್ಳಲು ಕಾತರದಿಂದ ಕಾಯುತ್ತಿವೆ.

‘ಕ್ರೀಡಾಕೂಟದಲ್ಲಿ ಕರ್ನಾಟಕದ 18 ಸೇರಿ ಒಟ್ಟಾರೆ 189 ವಿವಿಗಳು ಪಾಲ್ಗೊಳ್ಳಲಿದ್ದು, ಸುಮಾರು 4500 ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ. ಈ ಬಾರಿ ಹೊಸದಾಗಿ ಯೋಗ (Yoga) ಮತ್ತು ಮಲ್ಲಕಂಬವನ್ನು (Malkhamb) ಸೇರಿಸಲಾಗಿದೆ. ಪರಿಸರದ ಬಗ್ಗೆ ಅರಿವು ಮೂಡಿಸಲು ಗೇಮ್ಸ್‌ನ್ನು ‘ಹಸಿರು ಕ್ರೀಡಾಕೂಟ’ ಎಂದು ಘೋಷಿಸಲಾಗಿದೆ. ಕ್ರೀಡಾಕೂಟದ ವಿಜೇತರು ಮುಂದಿನ ವಿಶ್ವ ವಿವಿ ಗೇಮ್ಸ್‌ಗೆ ಅರ್ಹತೆ ಪಡೆದುಕೊಳ್ಳಲಿದ್ದಾರೆ’ ಎಂದು ಜೈನ್‌ ವಿವಿ ಕ್ರೀಡಾ ನಿರ್ದೇಶಕ ಡಾ.ಶಂಕರ್‌ ಯು.ವಿ. ಮಾಹಿತಿ ನೀಡಿದ್ದಾರೆ.

20 ಕ್ರೀಡೆ, 5 ಕೇಂದ್ರಗಳು

ಈ ಬಾರಿ ಗೇಮ್ಸ್‌ಗೆ ನಗರದ ಕಂಠೀರವ ಕ್ರೀಡಾಂಗಣ, ಕನಕಪುರ ರಸ್ತೆಯಲ್ಲಿರುವ ಜೈನ್‌ ವಿವಿ ಗ್ಲೋಬಲ್‌ ಕ್ಯಾಂಪಸ್‌, ಜೈನ್ಸ್‌ ಸ್ಪೋಟ್ಸ್‌ರ್‍ ಸ್ಕೂಲ್‌, ಸಾಯ್‌ ಶೂಟಿಂಗ್‌ ರೇಂಜ್‌ ಹಾಗೂ ಕೆ.ಎಂ.ಕಾರ್ಯಪ್ಪ ಹಾಕಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಈ ಪೈಕಿ ಕುಸ್ತಿ, ಜುಡೋ, ಕಬಡ್ಡಿ, ವಾಲಿಬಾಲ್‌, ಈಜು, ಮಲ್ಲಕಂಬ, ಯೋಗಾಸನ, ಫೆನ್ಸಿಂಗ್‌, ಕರಾಟೆ, ಫುಟ್ಬಾಲ್‌, ಬಾಕ್ಸಿಂಗ್‌ ಜೈನ್‌ ವಿವಿ ಆವರಣದಲ್ಲಿ ನಡೆಯಲಿದ್ದು, ಸಕಲ ವ್ಯವಸ್ಥೆ ಮಾಡಲಾಗಿದೆ. ಬ್ಯಾಡ್ಮಿಂಟನ್‌, ಟೆನಿಸ್‌, ಟೇಬಲ್‌ ಟೆನಿಸ್‌ಗೆ ಜೈನ್‌ ಸ್ಪೋಟ್ಸ್‌ ಸ್ಕೂಲ್‌ ಆತಿಥ್ಯ ವಹಿಸಲಿದೆ. ಅಥ್ಲೆಟಿಕ್ಸ್‌, ಬಾಸ್ಕೆಟ್‌ಬಾಲ್‌, ಹಾಕಿ ಮತ್ತು ಶೂಟಿಂಗ್‌ ಇನ್ನುಳಿದ 3 ಕಡೆಗಳಲ್ಲಿ ನಡೆಯಲಿದೆ. ಎಲ್ಲಾ ಕೇಂದ್ರಗಳೂ ಕ್ರೀಡೆಗೆ ಸಜ್ಜುಗೊಂಡಿದ್ದು, ಅಂತಿಮ ಸ್ಪರ್ಷ ನೀಡಲಾಗುತ್ತಿದೆ.

ಖೇಲೋ ಇಂಡಿಯಾ ವಿವಿ ಗೇಮ್ಸ್‌ಗೆ ಬೆಂಗಳೂರು ಸಜ್ಜು..!

ವಸತಿ, ಪ್ರಯಾಣ ವ್ಯವಸ್ಥೆ

ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳು, ಅಧಿಕಾರಿಗಳು, ಸಹಾಯಕ ಸಿಬ್ಬಂದಿಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆಯನ್ನು ಈಗಾಗಲೇ ಸಜ್ಜುಗೊಳಿಸಲಾಗಿದೆ. ಜೈನ್‌ ವಿವಿ ಆವರಣದಲ್ಲಿರುವ ವಿದ್ಯಾರ್ಥಿ ಹಾಸ್ಟೆಲ್‌, ಆರ್ಚ್‌ ಆಫ್‌ ಲಿವಿಂಗ್‌ ಹಾಗೂ ನಗರದ ಕೆಲ ಹೋಟೆಲ್‌ಗಳಲ್ಲಿ ಕೋಣೆಗಳನ್ನು ಕಾಯ್ದಿರಿಸಲಾಗಿದೆ. ಊಟದ ವ್ಯವಸ್ಥೆಯನ್ನು ಜೈನ್‌ ವಿವಿ ಹಾಗೂ ಕಂಠೀರವ ಕ್ರೀಡಾಂಗಣದಲ್ಲಿ ಮಾಡಲಾಗುತ್ತದೆ. ಕ್ರೀಡಾ ಕೇಂದ್ರಗಳಿಗೆ ಪ್ರಯಾಣಿಸಲು ಬಸ್‌ ವ್ಯವಸ್ಥೆ ಹಾಗೂ ಆವರಣದಲ್ಲಿ ಬಗ್ಗಿ ವ್ಯವಸ್ಥೆ ಇದೆ ಎಂದು ಶಂಕರ್‌ ಅವರು ತಿಳಿಸಿದ್ದಾರೆ.

ಕ್ಯಾಂಪಸ್‌ನಲ್ಲೇ ಐಸೋಲೇಸನ್‌

ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಪ್ರತಿ ಕ್ರೀಡಾಪಟು ಎರಡು ಡೋಸ್‌ ಲಸಿಕೆ ಪಡೆದಿರಬೇಕು. ಎಲ್ಲಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಗೇಮ್ಸ್‌ ಆಯೋಜಿಸಲಾಗುತ್ತಿದೆ. ಒಂದು ವೇಳೆ ಯಾವುದೇ ಕ್ರೀಡಾಪಟು, ಅಧಿಕಾರಿ, ಸಹಾಯಕ ಸಿಬ್ಬಂದಿಗೆ ಸೋಂಕು ದೃಢಪಟ್ಟರೆ ಅವರಿಗೆ ಕ್ಯಾಂಪಸ್‌ ಒಳಗಡೆಯೇ ಪ್ರತ್ಯೇಕ ಐಸೋಲೇಸನ್‌ ವ್ಯವಸ್ಥೆ ಮಾಡಲಾಗಿದೆ. ನಿರಂತರವಾಗಿ ಕೋವಿಡ್‌ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಖೇಲೋ ಇಂಡಿಯಾ ವಿವಿ ಗೇಮ್ಸ್‌ಗೆ ಆಳ್ವಾಸ್‌ನ 71 ವಿದ್ಯಾರ್ಥಿಗಳು

ಮೂಡುಬಿದಿರೆ: 2ನೇ ಆವೃತ್ತಿಯ ಖೇಲೋ ಇಂಡಿಯಾ ವಿವಿ ಗೇಮ್ಸ್‌ಗೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ 71 ಮಂದಿ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅಥ್ಲೆಟಿಕ್‌ನಲ್ಲಿ ಒಟ್ಟು 41 ವಿದ್ಯಾರ್ಥಿಗಳು, ಮಹಿಳಾ ಕಬಡ್ಡಿಯಲ್ಲಿ 9, ಪುರುಷರ ವಾಲಿಬಾಲ್‌ನಲ್ಲಿ 7, ಮಹಿಳೆಯರ ಹಾಕಿಯಲ್ಲಿ 3, ಮಹಿಳೆಯರ ವೈಟ್‌ ಲಿಫ್ಟಿಂಗ್‌ನಲ್ಲಿ 3, ಮಹಿಳಾ ಕುಸ್ತಿಯಲ್ಲಿ 2 ಹಾಗೂ 6 ಮಂದಿ ಮಲ್ಲಕಂಬ ವಿದ್ಯಾರ್ಥಿಗಳು ಈ ಕ್ರೀಡಾಕೂಟದಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಲಿದ್ದು, ಎಲ್ಲರೂ ಆಳ್ವಾಸ್‌ನ ವಿದ್ಯಾರ್ಥಿಗಳಾಗಿದ್ದಾರೆ ಎಂದು ಹೇಳಿದರು.

ಚೊಚ್ಚಲ ಆವೃತ್ತಿಯ ಗೇಮ್ಸ್‌ನಲ್ಲಿ ಮಂಗಳೂರು ವಿವಿ 7 ಚಿನ್ನ, 6 ಬೆಳ್ಳಿ ಹಾಗೂ 5 ಕಂಚಿನ ಪದಕದೊಂದಿಗೆ ಒಟ್ಟು 18 ಪದಕಗಳನ್ನು ಪಡೆದಿದ್ದು, ಎಲ್ಲ ವಿದ್ಯಾರ್ಥಿಗಳು ಆಳ್ವಾಸ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಾಗಿದ್ದರು. ಇದೇ ಕ್ರೀಡಾಕೂಟದ ವೈಟ್‌ ಲಿಫ್ಟಿಂಗ್‌ ವಿಭಾಗದಲ್ಲೂ 2 ಚಿನ್ನ, 1 ಬೆಳ್ಳಿ ಹಾಗೂ 1 ಕಂಚಿನ ಪದಕದೊಂದಿಗೆ ಆಳ್ವಾಸ್‌ ಕಾಲೇಜಿನ ವಿದ್ಯಾರ್ಥಿಗಳು ಒಟ್ಟು 4 ಪದಕಗಳನ್ನು ಪಡೆದಿದ್ದರು ಎಂದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?