
ನವದೆಹಲಿ: ದಕ್ಷಿಣ ಏಷ್ಯಾ ಗೇಮ್ಸ್'ನಲ್ಲಿ ಚಿನ್ನದ ಪದಕ ಗೆದ್ದಿದ್ದ ಮಾಜಿ ವೇಟ್'ಲಿಫ್ಟರ್ ಕವಿತಾ ದೇವಿ ಡಬ್ಲ್ಯುಡಬ್ಲ್ಯುಇ (ವಿಶ್ವ ಮನರಂಜನಾ ಕುಸ್ತಿ)ಗೆ ಆಯ್ಕೆಯಾಗಿದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಕವಿತಾ ದೇವಿ ಆಯ್ಕೆಯಾಗಿರುವ ವಿಷಯವನ್ನು ಡಬ್ಲ್ಯುಡಬ್ಲ್ಯುಇ ಗುರುವಾರ ಪ್ರಕಟಿಸಿದೆ.
ಹರ್ಯಾಣ ಮೂಲದ ಕವಿತಾ ದೇವಿ, ಪಂಜಾಬ್'ನಲ್ಲಿರುವ ಡಬ್ಲ್ಯುಡಬ್ಲ್ಯುಇ ಮಾಜಿ ವಿಶ್ವ ಚಾಂಪಿಯನ್ ದಿ ಗ್ರೇಟ್ ಕಾಲಿ ಅವರ ಅಕಾಡೆಮಿಯಲ್ಲಿ ವೃತ್ತಿಪರ ಕುಸ್ತಿ ತರಬೇತಿ ಪಡೆಯುತ್ತಿದ್ದಾರೆ.
ಏಪ್ರಿಲ್'ನಲ್ಲಿ ದುಬೈನಲ್ಲಿ ನಡೆದಿದ್ದ "ಡಬ್ಲ್ಯುಡಬ್ಲ್ಯುಇ ದುಬೈ ಟ್ರೈಔಟ್"ನಲ್ಲಿ ಸ್ಪರ್ಧಿಸಿದ್ದ ಕವಿತಾದೇವಿ, ಎಲ್ಲರ ಗಮನ ಸೆಳೆದಿದ್ದರು. ಬಲಿಷ್ಠ ಪ್ರದರ್ಶನದ ಮೂಲಕ ತಮ್ಮ ಸಾಮರ್ಥ್ಯದ ಪರಿಚಯ ಮಾಡಿಸಿದ್ದರು. ಈ ಮೂಲಕ ಎಲ್ಲರ ಗಮನ ಸೆಳೆದಿದ್ದ ಕವಿತಾ, ಡಬ್ಲ್ಯುಡಬ್ಲ್ಯುಇಗೆ ಆಯ್ಕೆ ಆಗುವ ಮೂಲಕ ಭಾರತೀಯ ಕುಸ್ತಿರಂಗದಲ್ಲಿ ನೂತನ ಇತಿಹಾಸ ಬರೆದಿದ್ದಾರೆ.
ಇದೀಗ ಡಬ್ಲ್ಯುಡಬ್ಲ್ಯುಇ ಮೊದಲ ಬಾರಿಗೆ ಮಹಿಳೆಯರಿಗಾಗಿ ಪಂದ್ಯಾವಳಿಯನ್ನು ಆಯೋಜಿಸಿತ್ತಿದೆ. ‘ಮೇ ಯಂಗ್ ಕ್ಲಾಸಿಕ್' ಎನ್ನುವ ಹೆಸರಿನ ಪಂದ್ಯಾವಳಿಯಲ್ಲಿ ಕವಿತಾ, ವಿಶ್ವದ ವಿವಿಧ ಭಾಗಗಳಿಂದ ಆಯ್ಕೆಗೊಂಡಿರುವ ಅಗ್ರ 31 ಕುಸ್ತಿಪಟುಗಳೊಂದಿಗೆ ಸೆಣಸಾಟ ನಡೆಸಲಿದ್ದಾರೆ. ‘ಮೇ ಯಂಗ್ ಕ್ಲಾಸಿಕ್' ಜುಲೈ 13 ಹಾಗೂ 14ರಂದು ಅಮೆರಿಕದ ಫ್ಲೋರಿಡಾದಲ್ಲಿನ ಒಲ್ರ್ಯಾಂಡೊ ನಗರದಲ್ಲಿ ನಡೆಯಲಿದೆ.
ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಕವಿತಾದೇವಿ, ‘ಡಬ್ಲ್ಯುಡಬ್ಲ್ಯುಇನಲ್ಲಿ ಭಾಗವಹಿಸುತ್ತಿರುವ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಗೌರವಕ್ಕೆ ಪಾತ್ರಳಾಗಿರುವುದು ಬಹಳ ಸಂತೋಷ ನೀಡಿದೆ. ಇದು ಭಾರತದ ವನಿತೆಯರಿಗೆ ಸ್ಫೂರ್ತಿಯನ್ನುಂಟು ಮಾಡುತ್ತದೆ ಎನ್ನುವ ವಿಶ್ವಾಸವಿದೆ' ಎಂದಿದ್ದಾರೆ.
ಡಬ್ಲ್ಯುಡಬ್ಲ್ಯುಇಯ ಪ್ರತಿಭಾ ಅಭಿವೃದ್ಧಿ ವಿಭಾಗದ ಉಪಾಧ್ಯಕ್ಷ ಕೆನ್ಯನ್ ಸೆಮನ್, ‘ದುಬೈನಲ್ಲಿ ನಡೆದಿದ್ದ ‘ಟ್ರೈಔಟ್'ನಲ್ಲಿ ಕವಿತಾ ಪ್ರಬಲ ಪ್ರದರ್ಶನ ನೀಡಿದ್ದರು. ಅವರೊಬ್ಬ ಅಥ್ಲೀಟ್. ಬಲಿಷ್ಠ ಮಹಿಳೆ. ಮನರಂಜನಾ ಕ್ರೀಡೆಗೆ ಬೇಕಾಗಿರುವ ಅಂಶಗಳನ್ನು ಗ್ರಹಿಕೆ ಮಾಡುವ ಸಾಮರ್ಥ್ಯ ಅವರಿಗಿದೆ. ಕವಿತಾ ತಮ್ಮ ಪ್ರದರ್ಶನ ಉತ್ತಮಪಡಿಸಿಕೊಂಡರೆ ಮುಂಬರುವ ಸ್ಪರ್ಧೆಯಲ್ಲಿ ಹೆಚ್ಚಿನ ಸಾಧನೆ ಮಾಡಲಿದ್ದಾರೆ. ಅವರನ್ನು ನೋಡಿ ಭಾರತದ ಮತ್ತಷ್ಟು ಮಹಿಳಾ ಕುಸ್ತಿಪಟುಗಳು ವೃತ್ತಿಪರ ಕುಸ್ತಿಗೆ ಕಾಲಿಟ್ಟರೆ ಅಚ್ಚರಿಯಿಲ್ಲ' ಎಂದು ಹೇಳಿದ್ದಾರೆ.
epaper.kannadaprabha.in
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.