ಲಂಕೆಗೆ ನೆರವಾದ ಕರುಣಾರತ್ನೆ ಶತಕ; ಜಯದ ಕನಸಿನಲ್ಲಿ ಬಾಂಗ್ಲಾ

By Suvarna Web DeskFirst Published Mar 18, 2017, 4:24 PM IST
Highlights

ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಇನ್ನೊಂದೆಡೆ ಗಟ್ಟಿಯಾಗಿ ನೆಲೆಯೂರಿ ಆಟವಾಡಿದ ದಿಮುತ್, ಬಾಂಗ್ಲಾ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದರು. ತಾಳ್ಮೆಯ ಬ್ಯಾಟಿಂಗ್ ನಡೆಸಿದ ದಿಮುತ್ ಟೆಸ್ಟ್ ಕ್ರಿಕೆಟ್‌ನಲ್ಲಿ 5ನೇ ಶತಕ ಸಿಡಿಸಿದರು.

ಕೊಲೊಂಬೊ(ಮಾ.18): ಆರಂಭಿಕ ಬ್ಯಾಟ್ಸ್‌ಮನ್ ದಿಮುತ್ ಕರುಣಾರತ್ನೆ (126) ಅವರ ನಿಧಾನಗತಿಯ ಶತಕದ ನೆರವಿನಿಂದ ಶ್ರೀಲಂಕಾ ತಂಡ, ಎರಡನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 139 ರನ್‌ಗಳ ಸಾಧಾರಣ ಮುನ್ನಡೆ ಪಡೆದಿದ್ದು, ದಿಲ್ರುವಾನ್ ಪೆರೇರಾ (26), ಸುರಂಗ ಲಕ್ಮಲ್ 16 ರನ್ ಗಳಿಸಿ ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದು, ಐದನೇ ದಿನದಾಟವು ಕುತೂಹಲ ಕೆರಳಿಸಿದೆ.

ಇಲ್ಲಿನ ಪಿ. ಸಾರಾ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ನಾಲ್ಕನೇ ದಿನವಾದ ಇಂದು ಯಾವುದೇ ವಿಕೆಟ್ ನಷ್ಟವಿಲ್ಲದೇ 54 ರನ್‌'ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಆತಿಥೇಯ ಶ್ರೀಲಂಕಾ, ದಿನಾಂತ್ಯಕ್ಕೆ 8 ವಿಕೆಟ್‌'ಗೆ 268 ರನ್‌'ಗಳಿಸಿತು. ಮೊದಲ ಇನಿಂಗ್ಸ್‌ನಲ್ಲಿ ಲಂಕಾ 129 ರನ್ ಹಿನ್ನಡೆ ಅನುಭವಿಸಿತ್ತು.

ಎರಡನೇ ಇನಿಂಗ್ಸ್ ಮುಂದುವರೆಸಿದ ಲಂಕಾ ಶುಕ್ರವಾರದ ಮೊತ್ತಕ್ಕೆ 3 ರನ್ ಸೇರಿಸುವಷ್ಟರಲ್ಲಿ ಆರಂಭಿಕ ಆಟಗಾರ ಉಪುಲ್ ತರಂಗಾ (26) ಅವರನ್ನು ಕಳೆದುಕೊಂಡಿತು. ನಂತರ ಕುಸಾಲ್ ಮೆಂಡೀಸ್, ಜತೆಯಾದ ಕರುಣರತ್ನೆ ತಂಡಕ್ಕೆ ಅಗತ್ಯ ರನ್ ಸೇರಿಸಿದರು. ಮೆಂಡೀಸ್ (36) ರನ್ ಗಳಿಸಿದರು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಇನ್ನೊಂದೆಡೆ ಗಟ್ಟಿಯಾಗಿ ನೆಲೆಯೂರಿ ಆಟವಾಡಿದ ದಿಮುತ್, ಬಾಂಗ್ಲಾ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದರು. ತಾಳ್ಮೆಯ ಬ್ಯಾಟಿಂಗ್ ನಡೆಸಿದ ದಿಮುತ್ ಟೆಸ್ಟ್ ಕ್ರಿಕೆಟ್‌ನಲ್ಲಿ 5ನೇ ಶತಕ ಸಿಡಿಸಿದರು. ಬಾಂಗ್ಲಾ ಪರ ಮುಸ್ತಾಫಿಜುರ್, ಶಕೀಬ್ ಅಲ್ ಹಸನ್ ತಲಾ 3 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

ಶ್ರೀಲಂಕಾ ಮೊದಲ ಇನಿಂಗ್ಸ್: 338

ಬಾಂಗ್ಲಾದೇಶ ಮೊದಲ ಇನಿಂಗ್ಸ್: 467

ಶ್ರೀಲಂಕಾ ದ್ವಿತೀಯ ಇನಿಂಗ್ಸ್: 100 ಓವರ್‌'ಗಳಲ್ಲಿ 8 ವಿಕೆಟ್‌ಗೆ 268

(ದಿಮುತ್ 126, ದಿಲುರುವಾನ್ 26*, ಮುಸ್ತಾಫಿಜುರ್ 52/3)

click me!