
ಚೆನ್ನೈ(ಡಿ.19): ಬರೋಬ್ಬರಿ ಎಂಟು ದಶಕಗಳ ಭಾರತೀಯ ಟೆಸ್ಟ್ ಕ್ರಿಕೆಟ್'ನಲ್ಲಿ ಮತ್ತೊಂದು ತ್ರಿಶತಕದ ನಕ್ಷತ್ರವೊಂದು ಉದಯಿಸಿದೆ. 84 ವರ್ಷಗಳ ಭಾರತೀಯ ಟೆಸ್ಟ್ ಕ್ರಿಕೆಟ್'ನ ಚರಿತ್ರೆಗೆ ಈ ಟ್ರಿಪಲ್ ಶತಕದ ದಾಖಲೆ ಬರೆದದ್ದು ಕನ್ನಡಿಗ ಕರುಣ್ ನಾಯರ್.
ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧದ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಇಂದು ಕರುಣ್ ಗಳಿಸಿದ ಐತಿಹಾಸಿಕ ಅಜೇಯ 303 ರನ್'ಗಳ ನೆರವಿನೊಂದಿಗೆ ಅಲಸ್ಟೇರ್ ಕುಕ್ ಸಾರಥ್ಯದ ಇಂಗ್ಲೆಂಡ್ ವಿರುದ್ಧ 190.4 ಓವರ್‌ಗಳಲ್ಲಿ 7 ವಿಕೆಟ್‌ಗೆ 759 ರನ್ ಕಲೆಹಾಕಿದ ಭಾರತ ತನ್ನ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡು ಆ ಮೂಲಕ 289 ರನ್ ಮುನ್ನಡೆ ಪಡೆದಿದ್ದು, ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ಯಾವುದೇ ವಿಕೆಟ್ ನಷ್ಟವಿಲ್ಲದೆ ಇಂಗ್ಲೆಂಡ್ 12 ರನ್ ಗಳಿಸಿದೆ. ನಾಯಕ ಕುಕ್ ಮತ್ತು ಕೀಟ್ ಜೆನಿಂಗ್ಸ್ ಕ್ರಮವಾಗಿ 3 ಮತ್ತು 9 ರನ್ ಗಳಿಸಿ ಕೊನೆಯ ದಿನವಾದ ಮಂಗಳವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.
ಮೂರನೇ ಪಂದ್ಯದಲ್ಲಿ ಮುನ್ನೂರು
ಭಾರತದ ಪರ ಎರಡು ಏಕದಿನ ಪಂದ್ಯಗಳನ್ನಾಡಿರುವ ಕರುಣ್ ನಾಯರ್, ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಮೂರನೇ ಪಂದ್ಯದಲ್ಲೇ ಅಭೂತಪೂರ್ವ ಇನ್ನಿಂಗ್ಸ್ ಕಟ್ಟುವ ಮೂಲಕ ದಾಖಲೆಗಳ ಸರದಾರನೆನಿಸಿದರು. ಶಿಖರ್ ಧವನ್ ಎಡ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರಿಂದ ಇಂಗ್ಲೆಂಡ್ ವಿರುದ್ಧದ ಸರಣಿಗೆ ಕರೆಯಲ್ಪಟ್ಟಿದ್ದ ಕರುಣ್ ನಾಯರ್, ಮೊಹಾಲಿ ಟೆಸ್ಟ್‌ನಲ್ಲಿ ಆಡುವ ಹನ್ನೊಂದು ಮಂದಿಯೊಳಗೆ ಕಾಣಿಸಿಕೊಂಡರೂ, ಕೇವಲ 4 ರನ್ ಗಳಿಸಿದ್ದ ಕರುಣ್, ಮುಂಬೈ ಟೆಸ್ಟ್‌ನಲ್ಲಿ 13 ರನ್‌ಗೆ ವಿಕೆಟ್ ಒಪ್ಪಿಸಿದ್ದರು. ಆದರೆ, ಈ ನಿರಾಸೆಯನ್ನು ಚೆನ್ನೈ ಟೆಸ್ಟ್'ನಲ್ಲಿ ಅವರು ಮೆಟ್ಟಿನಿಂತರು.
ದಾಖಲೆಗಳ ಸರದಾರ
ಮೊದಲೆರಡು ಪಂದ್ಯಗಳಲ್ಲಿನ ವೈಫಲ್ಯದಿಂದ ಧೃತಿಗೆಡದೆ ಮೂರನೇ ಟೆಸ್ಟ್‌ನಲ್ಲಿ ಚಾರಿತ್ರಿಕ ಸಾಧನೆ ಮೆರೆದ ಕರುಣ್ ನಾಯರ್, ಈ ಚೆನ್ನೈ ಟೆಸ್ಟ್‌ನಲ್ಲಿ ದಾಖಲೆಗಳ ಸರಮಾಲೆಯನ್ನೇ ಧರಿಸಿದರು. ಮೊಟ್ಟಮೊದಲಿಗೆ ಈ ಸಾಧನೆ ಮಾಡಿದ ಮೊದಲ ಕನ್ನಡಿಗ ಎನಿಸಿದ್ದಲ್ಲದೆ, ಭಾರತದ ಎರಡನೇ ಕ್ರಿಕೆಟಿಗನೆಂಬ ಗರಿಮೆಗೂ ಭಾಜನರಾದರು. ಇನ್ನು, ಚೊಚ್ಚಲ ಟೆಸ್ಟ್ ಶತಕವನ್ನು ತ್ರಿಶತಕವನ್ನಾಗಿ ಪರಿವರ್ತಿಸಿದ ಭಾರತದ ಮೊದಲ ಹಾಗೂ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ಕೂಡ. ಜತೆಗೆ, ಕೇವಲ 25ರ ಹರೆಯದಲ್ಲೇ ಈ ಅದಮ್ಯ ಸಾಧನೆ ಮೆರೆದ ವಿಶ್ವದ ಕಿರಿಯ ಕ್ರಿಕೆಟಿಗ ಕೂಡ.
ಪಿಚ್ ತಿರುವು ಪಡೆದುಕೊಂಡದ್ದೇ ಆದಲ್ಲಿ ಆಂಗ್ಲರನ್ನು ಹಣಿದು ಆ ಮೂಲಕ ಐದು ಪಂದ್ಯ ಸರಣಿಯನ್ನು ಟೀಂ ಇಂಡಿಯಾ 4-0 ಅಂತರದಿಂದ ಗೆಲ್ಲುವುದಂತೂ ಖಾತ್ರಿಯಾಗಿದೆ.
ಸ್ಕೋರ್ ವಿವರ
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: 477/10
ಭಾರತ ಪ್ರಥಮ ಇನ್ನಿಂಗ್ಸ್: 759/7
ಕರುಣ್ ನಾಯರ್ ಅಜೇಯ 303
ಕೆ.ಎಲ್ ರಾಹುಲ್ : 199
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.