* 2020-21ನೇ ಸಾಲಿನ ಏಕಲವ್ಯ ಪ್ರಶಸ್ತಿ ಘೋಷಣೆ
* ಕರುಣ್ ನಾಯರ್, ಅಶ್ವಲ್ ರೈ ಸೇರಿ 15 ಮಂದಿಗೆ ಒಲಿದ ಏಕಲವ್ಯ ಪ್ರಶಸ್ತಿ
* ರಾಜ್ಯ ಕ್ರೀಡಾ ಸಚಿವ ನಾರಾಯಣಗೌಡ ಅವರಿಂದ ಪ್ರಶಸ್ತಿ ಘೋಷಣೆ
ಬೆಂಗಳೂರು(ಏ.04): ಟೀಂ ಇಂಡಿಯಾ ಕ್ರಿಕೆಟಿಗ ಕರುಣ್ ನಾಯರ್, ಭಾರತ ತಂಡದ ವಾಲಿಬಾಲ್ ಆಟಗಾರ ಅಶ್ವಲ್ ರೈ, ಖ್ಯಾತ ಕಬಡ್ಡಿ ಆಟಗಾರ ಪ್ರಶಾಂತ್ ಕುಮಾರ್ ರೈ ಸೇರಿದಂತೆ ಒಟ್ಟು 15 ಕ್ರೀಡಾಪಟುಗಳು 2020-21ನೇ ಸಾಲಿನ ಏಕಲವ್ಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ರಾಜ್ಯದ ಕ್ರೀಡಾ ಹಾಗೂ ಯುವಜನ ಸಬಲೀಕರಣ ಖಾತೆ ಸಚಿವ ಡಾ. ಕೆ.ಸಿ. ನಾರಾಯಣ ಗೌಡ ಸೋಮವಾರವಾದ ಇಂದು ಪ್ರಸಕ್ತ ಸಾಲಿನ ಏಕಲವ್ಯ, ಕ್ರೀಡಾ ರತ್ನ ಹಾಗೂ ಕ್ರೀಡಾ ಪೋಷಕ ಪ್ರಶಸ್ತಿ ಘೋಷಣೆ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರವು ಏಕಲವ್ಯ ಕ್ರೀಡಾ ಪ್ರಶಸ್ತಿಯನ್ನು 1992ರಿಂದ ನೀಡಲಾಗುತ್ತಿದ್ದ, ಪ್ರಶಸ್ತಿ ವಿಜೇತರಿಗೆ ಏಕಲವ್ಯನ ಕಂಚಿನ ಪ್ರತಿಮೆ ಜತೆಗೆ, 2 ಲಕ್ಷ ರುಪಾಯಿ ನಗದು ಬಹುಮಾನವನ್ನು ನೀಡಲಾಗುತ್ತದೆ. ಇನ್ನು ಜೀವಮಾನದ ಸಾಧನೆ ಪ್ರಶಸ್ತಿಗೆ ಅಥ್ಲೆಟಿಕ್ಸ್ ವಿಭಾಗದಿಂದ ಗಾವಂಕರ್ ಜಿ.ವಿ, ಕಯಾಕಿಂಗ್‌ನಲ್ಲಿ ಅತ್ತುತ್ತಮ ಸಾಧನೆ ಮಾಡಿದ ಕ್ಯಾಪ್ಟನ್ ದಿಲೀಪ್ ಕುಮಾರ್ ಆಯ್ಕೆಯಾಗಿದ್ದಾರೆ. ಜೀವಮಾನದ ಸಾಧನೆ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಫಲಕ ಹಾಗೂ ಒಂದು ಲಕ್ಷ ರುಪಾಯಿ ನಗದು ಬಹುಮಾನ ವಿತರಿಸಲಾಗುತ್ತದೆ.
ಇನ್ನು ಗ್ರಾಮೀಣ ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಸಾಧಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕರ್ನಾಟಕ ಕ್ರೀಡಾ ಪ್ರಶಸ್ತಿಯನ್ನು 2014ರಿಂದ ರಾಜ್ಯ ಸರ್ಕಾರ ನೀಡಲಾಗುತ್ತಿದ್ದು, ಕ್ರೀಡಾರತ್ನ ಪ್ರಶಸ್ತಿ ವಿಜೇತರಿಗೂ ಕೂಡ ಪ್ರಶಸ್ತಿ ಫಲಕ ಹಾಗೂ ಒಂದು ಲಕ್ಷ ರುಪಾಯಿ ಬಹುಮಾನ ನೀಡಿ ಗೌರವಿಸಲಾಗುತ್ತದೆ.
ಇನ್ನು ಕ್ರೀಡೆಗೆ ಪ್ರೋತ್ಸಾಹ ನೀಡುವ ಸಂಸ್ಥೆಗಳನ್ನು ಗುರುತಿಸಿ ಗೌರವಿಸುವ ಯೋಜನೆಯಾದ ಕ್ರೀಡಾ ಪೋಷಕ ಪ್ರಶಸ್ತಿಗೆ ಈ ಬಾರಿ ಒಟ್ಟು 10 ಸಂಸ್ಥೆಗಳು ಆಯ್ಕೆಯಾಗಿವೆ. ಈ ಕ್ರೀಡಾ ಪೋಷಕ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಫಲಕ ಹಾಗೂ 5 ಲಕ್ಷ ರುಪಾಯಿ ನಗದು ಬಹುಮಾನ ನೀಡಿ ಗೌರವಿಸಲಾಗುತ್ತದೆ.
ಏಕಲವ್ಯ ಪ್ರಶಸ್ತಿ ವಿಜೇತರ ವಿವರ ಹೀಗಿದೆ ನೋಡಿ
ಜೀವನ್ ಕೆ ಎಸ್ - ಅಥ್ಲೆಟಿಕ್ಸ್
ಅಶ್ವಿನಿ ಭಟ್ - ಬ್ಯಾಡ್ಮಿಂಟನ್
ಲೋಪಮುದ್ರಾ ತಿಮ್ಮಯ್ಯ - ಬಾಸ್ಕೆಟ್ ಬಾಲ್
ಕರುಣ್ ನಾಯರ್ - ಕ್ರಿಕೆಟ್
ದಾನಮ್ಮ ಚಿಚಖಂಡಿ - ಸೈಕ್ಲಿಂಗ್
ವಸುಂಧರಾ ಎಂ ಎನ್ - ಜುಡೋ
ಪ್ರಶಾಂತ್ ಕುಮಾರ್ ರೈ - ಕಬಡ್ಡಿ
ಮುನೀರ್ ಬಾಷಾ - ಖೋ- ಖೋ
ನಿತಿನ್ - ನೆಟ್ ಬಾಲ್
ಜಿ ತರುಣ್ ಕೃಷ್ಣ ಪ್ರಸಾದ್ - ರೋಯಿಂಗ್
ಲಿಖಿತ್ ಎಸ್ ಪಿ - ಈಜು
ಅನರ್ಘ್ಯ ಮಂಜುನಾಥ್- ಟೇಬಲ್ ಟೆನಿಸ್
ಅಶ್ವಲ್ ರೈ - ವಾಲಿಬಾಲ್
ಪ್ರಧಾನ್ ಸೋಮಣ್ಣ - ಹಾಕಿ
ರಾಧಾ ವಿ - ಪ್ಯಾರಾ ಅಥ್ಲೆಟಿಕ್ಸ್