ವಿನಯ್ ದಾಳಿಗೆ ಕುಸಿದ ಮಹಾರಾಷ್ಟ್ರ

By Suvarna Web DeskFirst Published Dec 7, 2016, 3:31 PM IST
Highlights

ಕರ್ನಾಟಕ ಪರ ವಿನಯ್ 46ಕ್ಕೆ ಐದು ವಿಕೆಟ್ ಪಡೆದರೆ, ಎಸ್. ಅರವಿಂದ್ 32ಕ್ಕೆ 2, ಸ್ಟುವರ್ಟ್ ಬಿನ್ನಿ 40ಕ್ಕೆ 2 ಮತ್ತು ಪವನ್ ದೇಶಪಾಂಡೆ 10ಕ್ಕೆ 1 ವಿಕೆಟ್ ಗಳಿಸಿದರು.

ಮೊಹಾಲಿ(ಡಿ.07): ನಾಯಕ ವಿನಯ್ ಕುಮಾರ್ ಸೇರಿದಂತೆ ಎಸ್. ಅರವಿಂದ್ ಹಾಗೂ ಸ್ಟುವರ್ಟ್ ಬಿನ್ನಿ ಅವರ ಶಿಸ್ತುಬದ್ಧ ದಾಳಿಯ ಪರಿಣಾಮವಾಗಿ ರಣಜಿ ಪಂದ್ಯದ ಮೊದಲ ದಿನವೇ ಮಹಾರಾಷ್ಟ್ರ ವಿರುದ್ಧ ಕರ್ನಾಟಕ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಇಲ್ಲಿನ ಪಂಜಾಬ್ ಕ್ರಿಕೆಟ್ ಸಂಸ್ಥೆ (ಎಂಸಿಎ) ಮೈದಾನದಲ್ಲಿ ಆರಂಭವಾದ ‘ಬಿ’ ಗುಂಪಿನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ವಿನಯ್ ಸಾರಥ್ಯದ ಕರಾರುವಾಕ್ ಬೌಲಿಂಗ್ ದಾಳಿಗೆ ನಲುಗಿದ ಮಹಾರಾಷ್ಟ್ರ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 56 ಓವರ್‌ಗಳಲ್ಲಿ 163 ರನ್‌ಗೆ ಆಲೌಟ್ ಆಯಿತು.

ಇದಕ್ಕೆ ಪ್ರತಿಯಾಗಿ ಇನ್ನಿಂಗ್ಸ್ ಆರಂಭಿಸಿರುವ ಕರ್ನಾಟಕ ಮೊದಲ ಓವರ್‌'ನಲ್ಲೇ ಆಘಾತ ಅನುಭವಿಸಿದರೂ, ದಿನದಾಟದ ಅಂತ್ಯಕ್ಕೆ 19 ಓವರ್‌ಗಳಲ್ಲಿ 1 ವಿಕೆಟ್‌ಗೆ 67 ರನ್ ಗಳಿಸಿ ಸುಸ್ಥಿತಿ ಕಾಯ್ದುಕೊಂಡಿದೆ. ಆರಂಭಿಕ ಅರ್ಜುನ ಹೊಯ್ಸಳ (0) ವೇಗಿ ಅನುಪಮ್ ಸಂಕ್ಲೇಚಾಗೆ ಬೌಲ್ಡ್ ಆಗಿ ಕ್ರೀಸ್ ತೊರೆದ ಬಳಿಕ ಎಚ್ಚರಿಕೆಯ ಆಟವಾಡಿದ ಆರ್. ಸಮರ್ಥ್ (33) ಮತ್ತು ಕೌನೇನ್ ಅಬ್ಬಾಸ್ (30) ಎರಡನೇ ವಿಕೆಟ್‌ಗೆ ಮುರಿಯದ 67 ರನ್ ಕಲೆಹಾಕಿದರು. ಸದ್ಯ 96 ರನ್ ಹಿನ್ನಡೆಯಲ್ಲಿರುವ ಕರ್ನಾಟಕ, ಎರಡನೇ ದಿನದಂದು ಸ್ಥಿರ ಬ್ಯಾಟಿಂಗ್ ತೋರಿ ಆ ಮೂಲಕ ಕಳೆದ ಸಾಲಿನಲ್ಲಿ ತನ್ನ ಕ್ವಾರ್ಟರ್‌'ಫೈನಲ್ ಹಾದಿಗೆ ಮುಳ್ಳಾಗಿದ್ದ ಮಹಾರಾಷ್ಟ್ರ ವಿರುದ್ಧ ಅನುಭವಿಸಿದ್ದ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವ ಸಂಕಲ್ಪ ತೊಟ್ಟಿದೆ.

ಇತ್ತೀಚೆಗಷ್ಟೇ ನಡೆದಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಣದ ಪಂದ್ಯ ನಾಲ್ಕು ದಿನಗಳಲ್ಲೇ ಮುಕ್ತಾಯ ಕಂಡಿತ್ತು. ಪಿಚ್ ಕ್ರಮೇಣ ಸ್ಪಿನ್‌ಮಯವಾಗಿ ಬದಲಾಗುವ ಸಾಧ್ಯತೆ ಇದ್ದು, ವಿನಯ್ ಪಡೆ ಎಚ್ಚರಿಕೆ ವಹಿಸಬೇಕಿದೆ. ಈ ಹಿಂದಿನ ಪಂದ್ಯದಲ್ಲಿ ಸೌರಾಷ್ಟ್ರದ ಸ್ಪಿನ್ನರ್‌ಗಳು ಕರ್ನಾಟಕದ ಮೇಲೆ ಪ್ರಭುತ್ವ ಸಾಧಿಸಿದ್ದನ್ನು ಮರೆಯಲಾಗದು.

ಗುಗಾಲೆ ಪಡೆಯ ಪ್ರಮಾದ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಮಹಾರಾಷ್ಟ್ರ ಕಪ್ತಾನ ಸ್ವಪ್ನಿಲ್ ಗುಗಾಲೆ ಒಂದು ಹಂತದಲ್ಲಿ ತಂಡವನ್ನು ಸರಿದಿಸೆಯಲ್ಲೇ ಮುನ್ನಡೆಸುವ ಸುಳಿವು ನೀಡಿದರು. ನಿಧಾನಗತಿಯಲ್ಲಿ ಆಡುತ್ತಿದ್ದ ರೋಹಿತ್ ಮೊಟ್ವಾನಿ ಜತೆಗೂಡಿ ಎಚ್ಚರಿಕೆಯ ಆಟಕ್ಕೆ ಅವರು ಮುಂದಾದರು. ಆದರೆ, ಕರ್ನಾಟಕ ಬೌಲರ್‌ಗಳ ಮೊನಚಿನ ದಾಳಿಯನ್ನು ಸಮರ್ಥವಾಗಿ ನಿರ್ವಹಿಸಲು ಅವರಿಂದ ಸಾಧ್ಯವಾಗಲಿಲ್ಲ. ಇನ್ನಿಂಗ್ಸ್‌ನ 13ನೇ ಓವರ್‌ನಲ್ಲಿ ಈ ಜೋಡಿಯನ್ನು ವೇಗಿ ಸ್ಟುವರ್ಟ್ ಬಿನ್ನಿ ಬೇರ್ಪಡಿಸಿದರು. ಸಹ ಆಟಗಾರ ಮೊಟ್ವಾನಿಗೆ ಹೋಲಿಸಿದರೆ ಒಂದಷ್ಟು ಆಕ್ರಮಣಕಾರಿ ಮನೋಪ್ರವೃತ್ತಿಯಿಂದ ಬ್ಯಾಟ್ ಬೀಸುತ್ತಿದ್ದ ಗುಗಾಲೆ, ಬಿನ್ನಿ ಬೌಲಿಂಗ್‌ನಲ್ಲಿ ವಿಕೆಟ್‌ಕೀಪರ್ ಗೌತಮ್‌ಗೆ ಕ್ಯಾಚಿತ್ತು ಕ್ರೀಸ್ ತೊರೆದರು. 46 ಎಸೆತಗಳನ್ನು ಎದುರಿಸಿದ ಗುಗಾಲೆ 5 ಆಕರ್ಷಕ ಬೌಂಡರಿ ಸೇರಿದ 25 ರನ್ ಗಳಿಸಿದರು.

ವಿನಯ್ ಮಾರಕ ದಾಳಿ

ಆರಂಭಿಕ ಹಾಗೂ ನಾಯಕ ಗುಗಾಲೆ ನಿರ್ಗಮನದ ಬಳಿಕ ಮಹಾರಾಷ್ಟ್ರ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ವಿನಯ್ ಅವರ ಪ್ರಖರ ದಾಳಿಗೆ ಕಂಗೆಟ್ಟ ಅದು ಕಡೆಯ ಹಂತದವರೆಗೂ ಚೇತರಿಸಿಕೊಳ್ಳಲೇ ಇಲ್ಲ. ಗುಗಾಲೆ ನಂತರ ಆಡಲಿಳಿದ ನೌಸದ್ ಶೇಖ್ (3) ಮತ್ತು ಕೇದಾರ್ ಜಾಧವ್ (8) ಅಲ್ಪಾವಧಿಯಲ್ಲೇ ವಿನಯ್ ದಾಳಿಗೆ ಸಿಲುಕಿ ಕ್ರೀಸ್ ತೊರೆದರು. ಇನ್ನು ಅಂಕಿತ್ ಬಾವ್ನೆ (0) ಎಸ್. ಅರವಿಂದ್ ಬೌಲಿಂಗ್‌ನಲ್ಲಿ ಪವನ್ ದೇಶಪಾಂಡೆಗೆ ಕ್ಯಾಚಿತ್ತರು. ಹೀಗಾಗಿ ಮಧ್ಯಾಹ್ನದ ಭೋಜನ ವಿರಾಮದ ಹೊತ್ತಿಗೇ 82 ರನ್‌'ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡ ಮಹಾರಾಷ್ಟ್ರ, ನಂತರ ಜಿಗುಟು ಆಟದಿಂದ ಕ್ರೀಸ್‌ಗೆ ಕಚ್ಚಿ ನಿಂತಿದ್ದ ಮೊಟ್ವಾನಿ (32)ಯನ್ನೂ ಕಳೆದುಕೊಂಡಿತು. ಬಿನ್ನಿ ಬೌಲಿಂಗ್‌ನಲ್ಲಿ ಅವರು ಪವನ್ ದೇಶಪಾಂಡೆಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು. 120 ಎಸೆತಗಳನ್ನು ಎದುರಿಸಿದ ಮೊಟ್ವಾನಿ 2 ಬೌಂಡರಿ ಬಾರಿಸಿದರು. ಅಲ್ಲಿಂದಾಚೆಗೆ ಚಿರಾಗ್ ಖುರಾನ (16), ಸಂಕ್ಲೇಚಾ (13), ಸೈಯದ್ (12) ಹಾಗೂ ಕೊನೇ ಕ್ರಮಾಂಕದಲ್ಲಿ ದಾಧೆ 16 ರನ್ ಗಳಿಸಿದ್ದು ಬಿಟ್ಟರೆ ಮಿಕ್ಕವರು ಎರಡಂಕಿ ದಾಟಲಿಲ್ಲ.

ಕರ್ನಾಟಕ ಪರ ವಿನಯ್ 46ಕ್ಕೆ ಐದು ವಿಕೆಟ್ ಪಡೆದರೆ, ಎಸ್. ಅರವಿಂದ್ 32ಕ್ಕೆ 2, ಸ್ಟುವರ್ಟ್ ಬಿನ್ನಿ 40ಕ್ಕೆ 2 ಮತ್ತು ಪವನ್ ದೇಶಪಾಂಡೆ 10ಕ್ಕೆ 1 ವಿಕೆಟ್ ಗಳಿಸಿದರು.

ಸ್ಕೋರ್ ವಿವರ

ಮಹಾರಾಷ್ಟ್ರ ಮೊದಲ ಇನ್ನಿಂಗ್ಸ್ : 163/10

ಕರ್ನಾಟಕ ಮೊದಲ ಇನ್ನಿಂಗ್ಸ್   :  67/1

click me!