ಡಿ.7ಕ್ಕೆ ಕೆಎಸ್‌ಸಿಎ ಚುನಾವಣೆಗೆ ಹೈಕೋರ್ಟ್‌ ಆದೇಶ

Kannadaprabha News   | Kannada Prabha
Published : Nov 22, 2025, 06:56 AM IST
KSCA Election

ಸಾರಾಂಶ

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ(ಕೆಎಸ್‌ಸಿಎ) ಡಿ.7ರಂದು ಚುನಾವಣೆ ನಡೆಸಲು ನಿರ್ದೇಶಿಸಿರುವ ಹೈಕೋರ್ಟ್‌, ನಿವೃತ್ತ ನ್ಯಾಯಮೂರ್ತಿ ಹಾಗೂ ಮಾಜಿ ಉಪಲೋಕಾಯುಕ್ತ ಸುಭಾಷ್‌ ಬಿ.ಅಡಿ ಅವರನ್ನು ಮೇಲ್ವಿಚಾರಕರನ್ನಾಗಿ ನೇಮಿಸಿದೆ.

ಬೆಂಗಳೂರು : ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ(ಕೆಎಸ್‌ಸಿಎ) ಡಿ.7ರಂದು ಚುನಾವಣೆ ನಡೆಸಲು ನಿರ್ದೇಶಿಸಿರುವ ಹೈಕೋರ್ಟ್‌, ನಿವೃತ್ತ ನ್ಯಾಯಮೂರ್ತಿ ಹಾಗೂ ಮಾಜಿ ಉಪಲೋಕಾಯುಕ್ತ ಸುಭಾಷ್‌ ಬಿ.ಅಡಿ ಅವರನ್ನು ಮೇಲ್ವಿಚಾರಕರನ್ನಾಗಿ ನೇಮಿಸಿದೆ.

ಕೆಲ ಗೊಂದಲಗಳ ಹಿನ್ನೆಲೆಯಲ್ಲಿ ಚುನಾವಣೆಯನ್ನು ನ.30ರಿಂದ ಡಿ.30ರವರೆಗೆ ಮುಂದೂಡಿದ್ದ ಚುನಾವಣಾಧಿಕಾರಿಯ ಕ್ರಮ ಆಕ್ಷೇಪಿಸಿ ಕೆಎಸ್‌ಸಿಎ ಮತ್ತು ಬಿ.ಕೆ.ರವಿ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಪೀಠ ಈ ನಿರ್ದೇಶನ ನೀಡಿದೆ.

ಈಗಾಗಲೇ ನಾಮಪತ್ರ ಸ್ವೀಕಾರವಾಗಿದ್ದು, ನಾಮಪತ್ರ ಪರಿಶೀಲನೆ ನ.24ರಂದು ನಡೆಸಬೇಕು. ನ.26ರಂದು ನಾಮಪತ್ರ ಹಿಂಪಡೆಯಲು ಕಾಲಾವಕಾಶ ನೀಡಬೇಕು. ನ.26ರಂದು ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಬೇಕು. ಡಿ.7ರಂದು ಬೆಳಗ್ಗೆ 11ರಿಂದ ಸಂಜೆ 7ರವರೆಗೆ ಮತದಾನ ನಡೆಯಬೇಕು. ನಂತರ ಫಲಿತಾಂಶ ಪ್ರಕಟಿಸಬೇಕು ಎಂದಿದೆ.

ಕೆಎಸ್‌ಸಿಎ ಬೈಲಾಗೆ ಯಾರೇ ನೀಡುವ ಯಾವುದೇ ವ್ಯಾಖ್ಯಾನದ ಪ್ರಭಾವಕ್ಕೆ ಒಳಗಾಗದೇ ಹಾಲಿ ಬೈಲಾದ ಪ್ರಕಾರ ನ್ಯಾಯಯುತ ಮತ್ತು ಪಾರದರ್ಶಕವಾಗಿ ಚುನಾವಣೆ ನಡೆಸಬೇಕು ಎಂದು ಚುನಾವಣಾಧಿಕಾರಿಗೆ ನಿರ್ದೇಶಿಸಿದೆ. ನಿವೃತ್ತ ನ್ಯಾಯಮೂರ್ತಿ ಸುಭಾಷ್‌ ಬಿ.ಅಡಿ ಅವರಿಗೆ ಚುನಾವಣೆ ಉಸ್ತುವಾರಿ ವಹಿಸಬೇಕು ಎಂದೂ ಮನವಿ ಮಾಡಿದೆ.

ರಘುರಾಮ್‌ ಭಟ್‌ ಅಧ್ಯಕ್ಷರಾಗಿದ್ದ ಹಿಂದಿನ ಸಮಿತಿಯ ಅವಧಿ ಸೆ.30ಕ್ಕೆ ಕೊನೆಗೊಂಡಿತ್ತು. 2 ತಿಂಗಳ ವಿಳಂಬ ಬಳಿಕ, ನ.30ರಂದು ಸಂಸ್ಥೆಗೆ ಚುನಾವಣೆ ನಡೆಸುವುದಾಗಿ ಕೆಎಸ್‌ಸಿಎ ತಿಳಿಸಿತ್ತು. ಆದರೆ ಚುನಾವಣೆ ಸ್ಪರ್ಧೆ ಅರ್ಹತೆ ವಿಚಾರದಲ್ಲಿ ಗೊಂದಲ ಇದ್ದ ಕಾರಣ ಚುನಾವಣೆಯನ್ನು ಡಿ.30ಕ್ಕೆ ಮುಂದೂಡಲಾಗಿತ್ತು.

ವೆಂಕಟೇಶ್‌ ಪ್ರಸಾದ್‌ ಬಣಕ್ಕೆ ಹೈಕೋರ್ಟ್‌ ಬಿಗ್‌ ರಿಲೀಫ್‌

ಕೆಎಸ್‌ಸಿಎ ಹಾಲಿ ಬೈಲಾ ಪ್ರಕಾರವೇ ಚುನಾವಣೆ ನಡೆಸಲು ಹೈಕೋರ್ಟ್ ಸೂಚನೆ ನೀಡಿರುವುದರಿಂದ ವೆಂಕಟೇಶ್‌ ಪ್ರಸಾದ್‌ ತಂಡಕ್ಕೆ ರಿಲೀಫ್‌ ಸಿಕ್ಕಿದೆ. ಹಾಲಿ ಬೈಲಾ ಪ್ರಕಾರ, 9 ವರ್ಷ ಆಡಳಿತ ಸಮಿತಿಯಲ್ಲಿ ಸದಸ್ಯರಾಗಿದ್ದವರಿಗೂ ಪದಾಧಿಕಾರಿ ಹುದ್ದೆಗೆ ಸ್ಪರ್ಧಿಸುವ ಅವಕಾಶವಿದೆ. ಇನ್ನು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಎಸ್‌ಸಿಎ ಮಾಜಿ ಖಜಾಂಚಿ ವಿನಯ್ ಮೃತ್ಯುಂಜಯ, ‘ಹೈಕೋರ್ಟ್‌ ಸೂಚನೆ ನಮ್ಮ ತಂಡಕ್ಕೆ ಸಿಕ್ಕ ಗೆಲುವು. ಇದು ಬ್ರಿಜೇಶ್ ತಂಡ ಹೇಳಿಕೊಂಡಿದ್ದ ಒಂಬತ್ತು ವರ್ಷಗಳ ನಿಯಮಕ್ಕೆ ವಿರುದ್ಧವಾಗಿದೆ’ ಎಂದಿದ್ದಾರೆ.

ಇನ್ನು, ‘ನ್ಯಾ.ಲೋಧಾ ಶಿಫಾರಸು ಅನ್ವಯ ಒಬ್ಬ ವ್ಯಕ್ತಿಗೆ 9 ವರ್ಷ ಮಾತ್ರ ಸಂಸ್ಥೆಯಲ್ಲಿರಬಹುದು. ಆಡಳಿತ ಸಮಿತಿ ಅಥವಾ ಪದಾಧಿಕಾರಿ ಹುದ್ದೆ ಸೇರಿ ಗರಿಷ್ಠ 9 ವರ್ಷ ಮೀರಬಾರದು’ ಎಂಬುದು ಕೆಎಸ್‌ಸಿಎ ವಾದ. ಕೆಎಸ್‌ಸಿಎ ಮಾಜಿ ಕಾರ್ಯದರ್ಶಿ ಬ್ರಿಜೇಶ್‌ ಪಟೇಲ್‌ ಕೂಡಾ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದರು. ಆದರೆ ಇದಕ್ಕೆ ತದ್ವಿರುದ್ಧವಾಗಿ ಹೈಕೋರ್ಟ್‌ ಸೂಚನೆ ಬಂದಿರುವುದರಿಂದ ವೆಂಕಟೇಶ್‌ ಬಣದ ಸದಸ್ಯರ ಸ್ಪರ್ಧೆ ಹಾದಿ ಸುಗಮವಾಗಿದೆ.

ವೆಂಕಿ ಟೀಂನಿಂದಲೂ ಹಿಂದಿನ ಸೀಟ್‌ನಿಂದ ಸವಾರಿ: ಬ್ರಿಜೇಶ್‌

ಬೆಂಗಳೂರು : ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮಾಜಿ ವೇಗಿ ವೆಂಕಟೇಶ್‌ ಪ್ರಸಾದ್‌ ನೇತೃತ್ವದ ಗೇಮ್ ಚೇಂಜರ್ಸ್‌ ತಂಡದ ಆರೋಪಗಳಿಗೆ ಎದುರಾಳಿ ಬಣವನ್ನು ಮುನ್ನಡೆಸುತ್ತಿರುವ ಮಾಜಿ ಕ್ರಿಕೆಟಿಗ, ಹಿರಿಯ ಆಡಳಿತಾಧಿಕಾರಿ ಬ್ರಿಜೇಶ್‌ ಪಟೇಲ್‌ ತಿರುಗೇಟು ನೀಡಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಬ್ರಿಜೇಶ್‌ ತಮ್ಮ ತಂಡದಿಂದ ಸ್ಪರ್ಧೆ ಮಾಡುತ್ತಿರುವವರನ್ನು ಪರಿಚಯಿಸಿದ್ದಲ್ಲದೇ, ಎದುರಾಳಿ ಬಣ ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಿದರು.

ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ವೆಂಕಟೇಶ್ ಪ್ರಸಾದ್‌, ‘ಬ್ರಿಜೇಶ್‌ ಪಟೇಲ್‌ ಹಿಂದಿನ ಆಸನದಲ್ಲಿ ಕೂತು ಸವಾರಿ ಮಾಡುತ್ತಿದ್ದಾರೆ. ಅವರ ನಿರ್ದೇಶನದಂತೆಯೇ ರಾಜ್ಯ ಕ್ರಿಕೆಟ್‌ನಲ್ಲಿ ಎಲ್ಲವೂ ನಡೆಯುತ್ತಿದೆ. ರಾಜ್ಯದಲ್ಲಿ ಕ್ರಿಕೆಟ್‌ ವಾತಾವರಣವೇ ಹಾಳಾಗಿದೆ’ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಬ್ರಿಜೇಶ್‌, ‘ರಾಜ್ಯದಲ್ಲಿ ಕ್ರಿಕೆಟ್‌ ಯಾವ ಮಟ್ಟದಲ್ಲಿದೆ ಎನ್ನುವುದನ್ನು ನಾನು ಹೇಳುವ ಅವಶ್ಯಕತೆ ಇಲ್ಲ. ನಮ್ಮ ತಂಡಗಳು ರಾಷ್ಟ್ರೀಯ ಮಟ್ಟದಲ್ಲಿ ಗೆಲ್ಲುತ್ತಿರುವ ಪ್ರಶಸ್ತಿಗಳು, ಅಂತಾರಾಷ್ಟ್ರೀಯ, ಐಪಿಎಲ್‌ನಲ್ಲಿ ನಮ್ಮ ಆಟಗಾರರ ಪ್ರದರ್ಶನಗಳೇ ಎದುರಾಳಿಗಳ ಪ್ರಶ್ನೆಗೆ ಉತ್ತರ ನೀಡುತ್ತವೆ. ಇನ್ನು, ನಾನು ನನ್ನ ಜೊತೆಗಿರುವ ತಂಡಕ್ಕೆ ಮಾರ್ಗದರ್ಶನ ನೀಡುತ್ತಿದ್ದೇನೆ. ಅದರಲ್ಲಿ ಯಾವ ತಪ್ಪೂ ಇಲ್ಲ. ನಾನು ಮಾಡುತ್ತಿರುವುದು ತಪ್ಪು ಎನ್ನುವುದಾದರೆ, ಅನಿಲ್‌ ಕುಂಬ್ಳೆ ಹಾಗೂ ಜಾವಗಲ್‌ ಶ್ರೀನಾಥ್‌ ಮಾಡುತ್ತಿರುವುದೂ ತಪ್ಪು ತಾನೆ. ಅವರೂ ಹಿಂದಿನ ಆಸನದಲ್ಲಿ ಕೂತು ಸವಾರಿ ಮಾಡುತ್ತಿದ್ದಾರೆ ಅಲ್ಲವೇ?’ ಎಂದು ಪ್ರಶ್ನಿಸಿದರು.

‘ಈಗ ಚುನಾವಣೆಗೆ ಸ್ಪರ್ಧಿಸುತ್ತಿರುವವರು ಆಡಳಿತಾಧಿಕಾರಿಗಳಾಗಿ ಸಾಕಷ್ಟು ಅನುಭವ ಹಿಂದಿದ್ದಾರೆ. ಅವರಿಗೆ ಅಧಿಕಾರ ಸಿಕ್ಕರೆ ರಾಜ್ಯ ಕ್ರಿಕೆಟ್‌ ಸುರಕ್ಷಿತ ಕೈಗಳಿಗೆ ಸೇರಲಿದೆ. ಎದುರಾಳಿ ತಂಡ ಹೇಳುವ ಹಾಗೆ ಉತ್ತಮ ಕ್ರಿಕೆಟರ್‌ಗಳು ಉತ್ತಮ ಆಡಳಿತಾಧಿಕಾರಿಗಳಾಗಬಲ್ಲರು ಎನ್ನುವುದನ್ನು ನಾನು ಒಪ್ಪುವುದಿಲ್ಲ’ ಎಂದು ಬ್ರಿಜೇಶ್‌ ಹೇಳಿದರು.

ಚಿನ್ನಸ್ವಾಮಿಗೆ ಕ್ರಿಕೆಟ್‌ ವಾಪಸ್‌ ತರುತ್ತೇವೆ:

ಆರ್‌ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ಪ್ರಕರಣ ಒಂದು ದುರಂತ. ಅದರಿಂದ ತುಂಬಾ ನೋವಾಗಿದೆ ಎಂದ ಬ್ರಿಜೇಶ್‌ ಪಟೇಲ್‌, ನ್ಯಾ.ಕುನ್ಹಾ ವರದಿಯಲ್ಲಿ ತಿಳಿಸಿರುವಂತೆ ಚಿನ್ನಸ್ವಾಮಿ ಕ್ರೀಡಾಂಗಣದ ಪ್ರವೇಶದ್ವಾರಗಳನ್ನು ದೊಡ್ಡದು ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ. ಈಗಾಗಲೇ ಅಗತ್ಯ ವಿನ್ಯಾಸ ಸಿದ್ಧಗೊಳಿಸಲಾಗಿದ್ದು, ನಮ್ಮ ತಂಡ ಚುನಾಯಿತಗೊಂಡರೆ ಮೊದಲು ಆ ಕೆಲಸವನ್ನು ಕೈಗೊಳ್ಳಲಾಗುತ್ತದೆ ಎಂದರು.

ಚಿನ್ನಸ್ವಾಮಿ ಕ್ರೀಡಾಂಗಣ ಕಳೆದ 5 ದಶಕದಲ್ಲಿ 750ಕ್ಕೂ ಹೆಚ್ಚು ಪಂದ್ಯಗಳಿಗೆ ಸಾಕ್ಷಿಯಾಗಿದೆ. ಈ ಐತಿಹಾಸಿಕ ಕ್ರೀಡಾಂಗಣದಲ್ಲಿ ಮತ್ತೆ ಕ್ರಿಕೆಟ್‌ ಆಯೋಜಿಸುವುದು ನಮ್ಮ ಪ್ರಮುಖ ಗುರಿ. ನಮ್ಮ ತಂಡ ಸರ್ಕಾರದೊಂದಿಗೆ ಚರ್ಚಿಸಿ, ಅಗತ್ಯ ಕ್ರಮಗಳನ್ನು ಕೈಗೊಂಡು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಕ್ರಿಕೆಟ್‌ ವಾಪಸ್‌ ತರಲು ಎಲ್ಲ ಪ್ರಯತ್ನ ಮಾಡಲಿದೆ ಎಂದು ಬ್ರಿಜೇಶ್‌ ಹೇಳಿದರು.

ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುತ್ತಿರುವ ಪತ್ರಿಕೋದ್ಯಮಿ ಕೆ.ಎನ್‌.ಶಾಂತಕಮಾರ್‌ ಮಾತನಾಡಿ, ‘ಹಲವು ದಶಕಗಳಿಂದ ನಾನು ಕ್ರೀಡೆಯೊಂದಿಗೆ ನನ್ನನ್ನು ತೊಡಗಿಸಿಕೊಂಡಿದ್ದೇನೆ. ಕ್ರಿಕೆಟ್‌ ಬಗ್ಗೆ ನನಗೂ, ನಮ್ಮ ತಂಡಕ್ಕೂ ಅಪಾರ ಆಸಕ್ತಿ ಹಾಗೂ ಪ್ರೀತಿ ಇದೆ. ಕೆಎಸ್‌ಸಿಎಯನ್ನು ಮುನ್ನಡೆಸಲು ನಾವು ಸಮರ್ಥರಿದ್ದೇವೆ’ ಎಂದರು.

ಕಾರ್ಯದರ್ಶಿ ಹುದ್ದೆಗೆ ಸ್ಪರ್ಧೆ ಮಾಡುತ್ತಿರುವ ಮಾಜಿ ಖಜಾಂಚಿ ಇ.ಎಸ್‌.ಜಯರಾಂ ಮಾತನಾಡಿ, ‘ಕಳೆದ 3 ವರ್ಷದಲ್ಲಿ ರಾಜ್ಯ ಕ್ರಿಕೆಟ್‌ನಲ್ಲಿ ಯಾವುದೇ ಅಭಿವೃದ್ಧಿ ನಡೆದಿಲ್ಲ ಎಂದು ಎದುರಾಳಿ ಬಣ ಆರೋಪಿಸಿದೆ. ಆದರೆ ಅವೆಲ್ಲ ಸುಳ್ಳು. ಹಲವು ಜಿಲ್ಲಾ ಕೇಂದ್ರಗಳಲ್ಲಿ ನಾವು ಕ್ರಿಕೆಟ್‌ ಮೈದಾನಗಳನ್ನು ನಿರ್ಮಿಸಿದ್ದೇವೆ. ಹಲವು ಅಕಾಡೆಮಿಗಳನ್ನು ತೆರೆದಿದ್ದೇವೆ. 3 ವರ್ಷ ಹಿಂದೆ ಮಹಾರಾಜ ಟ್ರೋಫಿ ನಷ್ಟದಲ್ಲಿ ನಡೆಯುತ್ತಿತ್ತು. ಕಳೆದ ಮೂರು ವರ್ಷವೂ ನಾವು ಲಾಭ ಗಳಿಸಿದ್ದೇವೆ’ ಎಂದರು. ‘ಕ್ರಿಕೆಟ್‌ಗಾಗಿ ಹಣ ಖರ್ಚು ಮಾಡುತ್ತಿಲ್ಲ, ಕೇವಲ ಬ್ಯಾಂಕಲ್ಲಿ ಎಫ್‌ಡಿ ಇಡುತ್ತಿದ್ದೇವೆ ಎಂದು ಆರೋಪಿಸಲಾಗಿದೆ. ನಾವು ಕ್ರಿಕೆಟ್‌ ಅಭಿವೃದ್ಧಿಗೆ ಸಾಕಷ್ಟು ಪ್ರಮಾಣದಲ್ಲಿ ಹಣ ವ್ಯಯಿಸುವುದರ ಜೊತೆಗೆ ಉಳಿತಾಯ ಸಹ ಮಾಡಿದ್ದೇವೆ. ಬಹಳ ಲೆಕ್ಕಾಚಾರದೊಂದಿಗೆ ಪ್ರತಿ ರುಪಾಯಿ ಖರ್ಚು ಮಾಡಿದ್ದೇವೆ. ಅನವಶ್ಯಕವಾಗಿ ಹಣ ವ್ಯರ್ಥವಾಗುವುದನ್ನು ತಡೆದಿದ್ದೇವೆ’ ಎಂದರು.

ಖಜಾಂಚಿ ಹುದ್ದೆಗೆ ಸ್ಪರ್ಧಿಸುತ್ತಿರುವ ಹಂಗಾಮಿ ಕಾರ್ಯದರ್ಶಿ ಎಂ.ಎಸ್‌.ವಿನಯ್‌, ಅಂಡರ್‌-12 ವಿಭಾಗದಿಂದ ರಾಜ್ಯ ತಂಡಗಳ ಪ್ರದರ್ಶನದ ಬಗ್ಗೆ ವಿವರಿಸಿದರು. ಮಹಿಳಾ ಕ್ರಿಕೆಟ್‌ಗಾಗಿ ಕೈಗೊಂಡಿರುವ ಯೋಜನೆಗಳ ಬಗ್ಗೆಯೂ ಮಾಹಿತಿ ಹಂಚಿಕೊಂಡರು.

ಇನ್ನು, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಅಂಪೈರ್‌ ಬಿ.ಕೆ.ರವಿ ಮಾತನಾಡಿ, ‘ರಾಜ್ಯದಲ್ಲಿ ಅಂಪೈರ್‌, ಸ್ಕೋರರ್‌ಗಳಿಗೆ ತರಬೇತಿ ನೀಡಲು ಕೇಂದ್ರ ಸ್ಥಾಪಿಸುವ ಯೋಜನೆ ಇದೆ. ಕ್ಲಬ್‌ ಕ್ರಿಕೆಟ್‌ಗೆ ಉತ್ತೇಜನ ಕೊಡಲು ಸಹ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ‘ಟೀಂ ಬ್ರಿಜೇಶ್‌’ನಿಂದ ವಿವಿಧ ವಲಯಗಳ ಸಂಚಾಲಕರ ಹುದ್ದೆ, ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸುತ್ತಿರುವವರು ಉಪಸ್ಥಿತರಿದ್ದರು. ಮಾಜಿ ಕ್ರಿಕೆಟಿಗರಾದ ಸುಧಾಕರ್‌ ರಾವ್‌, ಜೆ.ಅಭಿರಾಂ ಸೇರಿ ಹಲವರು ಟೀಂ ಬ್ರಿಜೇಶ್‌ಗೆ ಬೆಂಬಲ ಸೂಚಿಸಲು ಆಗಮಿಸಿದ್ದರು.

ಕ್ರೀಡಾಂಗಣದ ಸ್ಟ್ಯಾಂಡ್‌ಗೆ ಶಾಂತಾ, ವಿನಯ್‌ ಹೆಸರು

ತಾವು ಅಧಿಕಾರಕ್ಕೆ ಬಂದರೆ ಚಿನ್ನಸ್ವಾಮಿ ಕ್ರೀಡಾಂಗಣದ ಸ್ಟ್ಯಾಂಡ್‌ಗಳಿಗೆ ಭಾರತದ ಮಾಜಿ ಕ್ರಿಕೆಟಿಗರಾದ ಶಾಂತಾ ರಂಗಸ್ವಾಮಿ, ವಿನಯ್‌ ಕುಮಾರ್‌, ಕೆಎಸ್‌ಸಿಎ ಮಾಜಿ ಕಾರ್ಯದರ್ಶಿ ಸಿ.ನಾಗರಾಜ್ ಸೇರಿ ಪ್ರಮುಖರ ಹೆಸರುಗಳನ್ನು ನಾಮಕರಣ ಮಾಡುವುದಾಗಿ ಬ್ರಿಜೇಶ್‌ ಪಟೇಲ್‌ ತಂಡ ಭರವಸೆ ನೀಡಿದೆ. ಈ ಚುನಾವಣೆಯಲ್ಲಿ ಶಾಂತಾ ಅವರು ವೆಂಟಕೇಶ್‌ ಪ್ರಸಾದ್‌ ಬಣಕ್ಕೆ ಬೆಂಬಲ ಘೋಷಿಸಿದ್ದು, ಅವರ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!