ಎರಡನೇ ಟೆಸ್ಟ್‌ಗೂ ಮುನ್ನ ದಕ್ಷಿಣ ಆಫ್ರಿಕಾಗೆ ಬಿಗ್ ಶಾಕ್; ಮಾರಕ ವೇಗಿ ಎರಡನೇ ಮ್ಯಾಚ್‌ನಿಂದಲೂ ಔಟ್!

Published : Nov 21, 2025, 04:21 PM IST
South Africa vs India

ಸಾರಾಂಶ

ಭಾರತ ವಿರುದ್ಧದ ಎರಡನೇ ಟೆಸ್ಟ್‌ಗೂ ಮುನ್ನ, ಸ್ಟಾರ್ ವೇಗಿ ಕಗಿಸೊ ರಬಾಡ ಗಾಯದ ಕಾರಣದಿಂದ ಹೊರಗುಳಿದಿರುವುದು ದಕ್ಷಿಣ ಆಫ್ರಿಕಾಗೆ ಹಿನ್ನಡೆಯಾಗಿದೆ. ಗಾಯಗೊಂಡಿರುವ ನಾಯಕ ಶುಭಮನ್ ಗಿಲ್ ಬದಲಿಗೆ ರಿಷಭ್ ಪಂತ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಗುವಾಹಟಿ: ಭಾರತ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್‌ಗೂ ಮುನ್ನ ದಕ್ಷಿಣ ಆಫ್ರಿಕಾಗೆ ಹಿನ್ನಡೆಯಾಗಿದೆ. ನವೆಂಬರ್ 22ರಿಂದ ಗುವಾಹಟಿಯಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್‌ನಲ್ಲಿ ಸ್ಟಾರ್ ವೇಗಿ ಕಗಿಸೊ ರಬಾಡ ಆಡುವುದಿಲ್ಲ ಎಂದು ದಕ್ಷಿಣ ಆಫ್ರಿಕಾದ ನಾಯಕ ತೆಂಬಾ ಬವುಮಾ ಸ್ಪಷ್ಟಪಡಿಸಿದ್ದಾರೆ. ಕೋಲ್ಕತಾದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲೂ ರಬಾಡ ಗಾಯದ ಕಾರಣದಿಂದ ಆಡಿರಲಿಲ್ಲ. ಮೊದಲ ಟೆಸ್ಟ್‌ನಲ್ಲಿ ರಬಾಡ ಅನುಪಸ್ಥಿತಿಯಲ್ಲೂ ಸ್ಪಿನ್ನರ್‌ಗಳ ಉತ್ತಮ ಪ್ರದರ್ಶನದಿಂದ ದಕ್ಷಿಣ ಆಫ್ರಿಕಾ ತಂಡವು ಆತಿಥೇಯ ಭಾರತ ಎದುರು 30 ರನ್‌ಗಳ ರೋಚಕ ಜಯ ಸಾಧಿಸಿತ್ತು.

ಎರಡನೇ ಟೆಸ್ಟ್‌ಗೂ ಮುನ್ನ ಬವುಮಾ ಮಾತು

ಗುವಾಹಟಿಯ ಪಿಚ್ ಮೊದಲ ದಿನಗಳಲ್ಲಿ ಬ್ಯಾಟಿಂಗ್‌ಗೆ ಸಹಕಾರಿಯಾಗಿದ್ದು, ನಂತರ ಸ್ಪಿನ್ನರ್‌ಗಳಿಗೆ ಅನುಕೂಲವಾಗಲಿದೆ ಎಂದು ತೆಂಬಾ ಬವುಮಾ ಹೇಳಿದ್ದಾರೆ. ಕೋಲ್ಕತಾ ಪಿಚ್‌ಗೆ ಹೋಲಿಸಿದರೆ ಗುವಾಹಟಿ ಪಿಚ್ ಸ್ವಲ್ಪ ಹೊಸದಾಗಿದ್ದು, ಸ್ಥಿರ ಪ್ರದರ್ಶನ ನೀಡುವ ನಿರೀಕ್ಷೆಯಿದೆ ಎಂದು ಬವುಮಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ರಬಾಡ ಬದಲಿಗೆ ಮತ್ತೋರ್ವ ಅನುಭವಿ ವೇಗಿ ಲುಂಗಿ ಎನ್‌ಗಿಡಿಯನ್ನು ದಕ್ಷಿಣ ಆಫ್ರಿಕಾ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.

ಈಡನ್ ಗಾರ್ಡನ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ಸ್ಪಿನ್ನರ್‌ಗಳ ಮುಂದೆ ಭಾರತೀಯ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಪರದಾಡಿದ್ದರಿಂದ, ಗುವಾಹಟಿಯಲ್ಲಿ ಟೀಂ ಇಂಡಿಯಾ ವೇಗ ಮತ್ತು ಬೌನ್ಸ್ ಇರುವ ವಿಕೆಟ್ ಕೇಳಿದೆ ಎಂದು ವರದಿಯಾಗಿದೆ. ಬಿಸಿಸಿಐನ ಮುಖ್ಯ ಕ್ಯುರೇಟರ್ ಆಶಿಶ್ ಭೌಮಿಕ್ ಅವರ ತವರು ಇದಾಗಿದೆ.

ಗುವಾಹಟಿ ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿದೆ. ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಗೆದ್ದ ದಕ್ಷಿಣ ಆಫ್ರಿಕಾ ಸರಣಿಯಲ್ಲಿ 1-0 ಮುನ್ನಡೆಯಲ್ಲಿದೆ. ಗುವಾಹಟಿಯಲ್ಲಿ ಎರಡನೇ ಟೆಸ್ಟ್ ಬೆಳಗ್ಗೆ 9 ಗಂಟೆಗೆ ಆರಂಭವಾಗಲಿದೆ. ಗಾಯಗೊಂಡಿರುವ ನಾಯಕ ಶುಭಮನ್ ಗಿಲ್ ಬದಲಿಗೆ ಉಪನಾಯಕ ರಿಷಭ್ ಪಂತ್ ಎರಡನೇ ಟೆಸ್ಟ್‌ನಲ್ಲಿ ಭಾರತವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ರಿಷಭ್ ಪಂತ್ ಟೆಸ್ಟ್‌ನಲ್ಲಿ ಭಾರತದ 38ನೇ ನಾಯಕರಾಗಿದ್ದಾರೆ. ಗಿಲ್ ಬದಲಿಗೆ ಎಡಗೈ ಬ್ಯಾಟರ್ ಸಾಯಿ ಸುದರ್ಶನ್ ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ.

ಟೆಸ್ಟ್ ಸರಣಿ ಗೆಲ್ಲುವ ಕನಸು ಕಾಣುತ್ತಿರುವ ಹರಿಣಗಳು!

ದಕ್ಷಿಣ ಆಫ್ರಿಕಾ ತಂಡವು ಇದುವರೆಗೂ ಭಾರತ ನೆಲದಲ್ಲಿ ಟೆಸ್ಟ್ ಸರಣಿಯನ್ನು ಜಯಿಸಿಲ್ಲ. ಇದೀಗ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಕೋಲ್ಕತಾ ಟೆಸ್ಟ್ ಗೆಲ್ಲುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇದೀಗ ಎರಡನೇ ಟೆಸ್ಟ್‌ನಲ್ಲಿ ಹರಿಣಗಳ ಪಡೆ ಗೆಲುವು ಇಲ್ಲವೇ ಡ್ರಾ ಸಾಧಿಸಿದರೂ ಸಾಕು ಭಾರತ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆದ್ದ ಸಾಧನೆ ಮಾಡಲಿದೆ. ಇನ್ನೊಂದೆಡೆ ತವರಿನಲ್ಲೇ ಮೊದಲ ಪಂದ್ಯ ಸೋತು ಆಘಾತಕ್ಕೊಳಗಾಗಿರುವ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಇದೀಗ ಶತಾಯಗತಾಯ ಎರಡನೇ ಟೆಸ್ಟ್ ಗೆದ್ದು ಸರಣಿ ಸಮಬಲ ಸಾಧಿಸಲು ಭಾರತ ತಂಡವು ಎದುರು ನೋಡುತ್ತಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ