
ಕೋಲ್ಕತಾ(ಮಾ.02): ಪ್ರತಿಷ್ಠಿತ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸತತ ಮೂರು ಪಂದ್ಯಗಳ ಗೆಲುವಿನೊಂದಿಗೆ ಹ್ಯಾಟ್ರಿಕ್ ಜಯಭೇರಿ ಬಾರಿಸಿರುವ ಕರ್ನಾಟಕ ತಂಡ, ಶುಕ್ರವಾರ ನಡೆಯುತ್ತಿರುವ ನಾಲ್ಕನೇ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಎದುರುಗೊಳ್ಳುತ್ತಿದ್ದು, ನಾಲ್ಕನೇ ಜಯದತ್ತ ಗಮನ ಹರಿಸಿದೆ.
ಇಲ್ಲಿನ ಕಲ್ಯಾಣಿ ಮೈದಾನದಲ್ಲಿ ನಡೆಯಲಿರುವ ‘ಡಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ಗೆಲ್ಲುವ ಫೇವರಿಟ್ ಎನಿಸಿದೆ. ಮೂರೂ ಪಂದ್ಯಗಳಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲಿಯೂ ಆಲ್ರೌಂಡ್ ಪ್ರದರ್ಶನ ನೀಡುತ್ತಾ ಬಂದಿರುವ ಮನೀಶ್ ಪಾಂಡ್ಯ ಪಡೆ, ಜಮ್ಮು ಮತ್ತು ಕಾಶ್ಮೀರ ತಂಡವನ್ನೂ ಮಣಿಸುವ ವಿಶ್ವಾಸದಲ್ಲಿದೆ.
ಮೊದಲ ಪಂದ್ಯದಲ್ಲಿ ಜಾರ್ಖಂಡ್ ಎದುರು 5 ರನ್ ರೋಚಕ ಗೆಲುವು ಪಡೆದ ಕರ್ನಾಟಕ, ಎರಡನೇ ಪಂದ್ಯದಲ್ಲಿ ಸರ್ವೀಸಸ್ ವಿರುದ್ಧ 4 ವಿಕೆಟ್ ಜಯ ಪಡೆದಿತ್ತು. ಆನಂತರದ ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ 73 ರನ್ ಭರ್ಜರಿ ಗೆಲುವು ದಾಖಲಿಸಿತ್ತು.
ಮೂರೂ ಪಂದ್ಯಗಳ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಮನೀಶ್ ಪಡೆಯನ್ನು ಹೈದರಾಬಾದ್ ತಂಡ ರನ್'ರೇಟ್ ಆಧಾರದಲ್ಲಿ ಎರಡನೇ ಸ್ಥಾನಕ್ಕೆ ನೂಕಿದ್ದು, ಮತ್ತೆ ಅಗ್ರಸ್ಥಾನಕ್ಕೇರಲು ಕರ್ನಾಟಕ ಸಜ್ಜಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.