6ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೋಚ್ ಬಿ.ಸಿ.ರಮೇಶ್ ತಂಡ ತೊರೆದಿದ್ದಾರೆ.
ಬೆಂಗಳೂರು[ಮಾ.21]: ಪ್ರೊ ಕಬಡ್ಡಿ 7ನೇ ಆವೃತ್ತಿ ಹತ್ತಿರವಾಗುತ್ತಿದ್ದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. 6ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೋಚ್ ಬಿ.ಸಿ.ರಮೇಶ್ ತಂಡ ತೊರೆದಿದ್ದಾರೆ. ಮುಂದಿನ ಆವೃತ್ತಿಯಲ್ಲಿ ಅವರು ಬೆಂಗಾಲ್ ವಾರಿಯರ್ಸ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ ಚಾಂಪಿಯನ್
‘ಬೆಂಗಳೂರು ತಂಡದೊಂದಿಗೆ 1 ವರ್ಷದ ಒಪ್ಪಂದ ಮಾಡಿಕೊಂಡಿದ್ದೆ. ಒಪ್ಪಂದ ಮುಗಿಯಿತು. ಬೆಂಗಾಲ್ ತಂಡ ಕೋಚ್ ಆಗುವಂತೆ ನೀಡಿದ ಆಹ್ವಾನವನ್ನು ಸ್ವೀಕರಿಸಿದೆ’ ಎಂದು ರಮೇಶ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು. ಕಳೆದ 2 ಆವೃತ್ತಿಗಳಲ್ಲಿ ಬೆಂಗಾಲ್ ಕೋಚ್ ಆಗಿದ್ದ ಕನ್ನಡಿಗ ಜಗದೀಶ್ ಕುಂಬ್ಳೆ, ತೆಲುಗು ಟೈಟಾನ್ಸ್ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಕಳೆದ 5 ಆವೃತ್ತಿಗಳಲ್ಲಿ ಪ್ರಶಸ್ತಿಯ ಬರ ಅನುಭವಿಸುತ್ತಿದ್ದ ಬೆಂಗಳೂರು ಬುಲ್ಸ್ ತಂಡಕ್ಕೆ ರಮೇಶ್ ಮಾರ್ಗದರ್ಶನದಲ್ಲಿ ಬುಲ್ಸ್ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಗುಜರಾತ್ ತಂಡವನ್ನು 5 ಅಂಕಗಳಿಂದ ಮಣಿಸಿದ ಬುಲ್ಸ್ ಆರನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ ಕಪ್ ಜಯಿಸಿ ಸಂಭ್ರಮಿಸಿತ್ತು.
ಅರ್ಜುನ ಪ್ರಶಸ್ತಿ ವಿಜೇತ ಬಿ.ಸಿ ರಮೇಶ್ ಭಾರತ ತಂಡವನ್ನು ಪ್ರತಿನಿಧಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟಿದ್ದಾರೆ. 5ನೇ ಆವೃತ್ತಿಯಲ್ಲಿ ಬಿ.ಸಿ ರಮೇಶ್ ಪುಣೇರಿ ಪಲ್ಟಾನ್ ತಂಡದ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.