
ಬೆಂಗಳೂರು(ಆ. 06): ಕರ್ನಾಟಕದ ಕೆ.ಗೌತಮ್ ಅವರು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತ ಎ ತಂಡಕ್ಕೆ ಆಯ್ಕೆಯಾಗಿದ್ದಾರೆ. 28 ವರ್ಷದ ಗೌತಮ್ ಅವರು ಭಾರತ ಎ ಟೆಸ್ಟ್ ತಂಡದಲ್ಲಿ ಜಯಂತ್ ಯಾದವ್ ಸ್ಥಾನವನ್ನು ತುಂಬಲಿದ್ದಾರೆ. ತಂದೆ ಜೈ ಸಿಂಗ್ ಆ.3ರಂದು ನಿಧನ ಹೊಂದಿದ ಹಿನ್ನೆಲೆಯಲ್ಲಿ ಆಫ್ ಸ್ಪಿನ್ನರ್ ಜಯಂತ್ ಯಾದವ್ ದಕ್ಷಿಣ ಆಫ್ರಿಕಾದಿಂದ ತವರಿಗೆ ಮರಳಿದ್ದರು. ಈ ಹಿನ್ನೆಲೆಯಲ್ಲಿ ಕೆ ಗೌತಮ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಗೌತಮ್ ಕೂಡ ಜಯಂತ್'ರಂತೆ ಆಫ್'ಸ್ಪಿನ್ನರ್ ಮತ್ತು ಆಲ್'ರೌಂಡರ್ ಆಗಿದ್ದಾರೆ.
ಭಾರತ ಎ ಟೆಸ್ಟ್ ತಂಡವು ದಕ್ಷಿಣ ಆಫ್ರಿಕಾ ಎ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಪ್ರತೀ ಪಂದ್ಯವೂ ನಾಲ್ಕು ದಿನಗಳಿರಲಿದ್ದು ಆ.12 ಮತ್ತು ಆ.19ರಂದು ಆರಂಭಗೊಳ್ಳಲಿವೆ. ಈ ತಂಡಕ್ಕೆ ಕರ್ನಾಟಕದ ಕರುಣ್ ನಾಯರ್ ಅವರೇ ನಾಯಕರಾಗಿದ್ದಾರೆ.
ಸದ್ಯ, ಭಾರತ ಎ ಏಕದಿನ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾದಲ್ಲಿ ತ್ರಿಕೋನ ಸರಣಿಯಲ್ಲಿ ಆಡುತ್ತಿದೆ. ಭಾರತ, ದಕ್ಷಿಣ ಆಫ್ರಿಕಾ ಮತ್ತು ಆಫ್ಘಾನಿಸ್ತಾನ ತಂಡಗಳು ಈ ಸರಣಿಯಲ್ಲಿ ಪಾಲ್ಗೊಂಡಿವೆ. ಈಗಾಗಲೇ ಲೀಗ್ ಹಂತ ಮುಕ್ತಾಯಗೊಂಡಿದ್ದು ಭಾರತ ಎ ಮತ್ತು ದಕ್ಷಿಣ ಆಫ್ರಿಕಾ ಎ ತಂಡಗಳು ಫೈನಲ್ ತಲುಪಿವೆ. ಆ. 8ರಂದು ಅಂತಿಮ ಹಣಾಹಣಿ ನಡೆಯಲಿದೆ. ಭಾರತ ಎ ಏಕದಿನ ಕ್ರಿಕೆಟ್ ತಂಡದಲ್ಲೂ ಕರುಣ್ ನಾಯರ್ ಇದ್ದಾರಾದರೂ, ಮನೀಶ್ ಪಾಂಡೆ ನಾಯಕರಾಗಿದ್ದಾರೆ.
ಶ್ರೇಯಸ್ ಅಯ್ಯರ್, ಕರುಣ್ ನಾಯರ್, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಇವರು ಎರಡೂ ತಂಡಗಳಲ್ಲೂ ಅವಕಾಶ ಪಡೆದಿದ್ದಾರೆ.
ಭಾರತ ಎ ಟೆಸ್ಟ್ ತಂಡ:
ಕರುಣ್ ನಾಯರ್(ನಾಯಕ) ಪಾರ್ಥೀವ್ ಪಾಂಚಾಲ್, ಅಭಿನವ್ ಮುಕುಂದ್, ಶ್ರೇಯಸ್ ಅಯ್ಯರ್, ಅಂಕಿತ್ ಬಾವ್ನೆ, ಸುದೀಪ್ ಚಟರ್ಜಿ, ಇಶಾನ್ ಕಿಶನ್(ವಿ.ಕೀ.), ಹನುಮ ವಿಹಾರಿ, ಕೆ.ಗೌತಮ್, ಶಹಬಾಜ್ ನದೀಮ್, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಅನಿಕೇತ್ ಚೌಧರಿ, ಅಂಕಿತ್ ರಜಪೂತ್
ನಾಲ್ಕು ದಿನಗಳ 2 ಪಂದ್ಯಗಳ ವೇಳಾಪಟ್ಟಿ:
1) ಆ.12-15 : ಭಾರತ ಎ ವರ್ಸಸ್ ದ.ಆಫ್ರಿಕಾ ಎ
ಸ್ಥಳ: ಬೆನೋನಿ, ಗೌಟೆಂಗ್
2) ಆ. 19-22 : ಭಾರತ ಎ ವರ್ಸಸ್ ದ.ಆಫ್ರಿಕಾ ಎ
ಸ್ಥಳ: ಸೆನ್ವೆಸ್ ಪಾರ್ಕ್, ಪಾಟ್'ಚೆಫ್ಸ್'ಟ್ರೂಮ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.