ಇಂಜುರಿಯಿಂದ ಯುಎಸ್ ಓಪನ್ ಟೂರ್ನಿಗೆ ನಡಾಲ್ ವಿದಾಯ

By Web DeskFirst Published Sep 9, 2018, 10:36 AM IST
Highlights

ಯುಎಸ್ ಓಪನ್ ಟೆನಿಸ್ ಟೂರ್ನಿಯಿಂದ ರಾಫೆಲ್ ನಡಾಲ್ ನೋವಿನ ವಿದಾಯ ಹೇಳಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಕಾಣಿಸಿಕೊಂಡ ನೋವಿನಿಂದ ನಡಾಲ್ ಟೂರ್ನಿಗೆ ಗುಡ್‌ ಬೈ ಹೇಳಿದ್ದಾರೆ.

ನ್ಯೂಯಾರ್ಕ್(ಸೆ.09):  ಯುಎಸ್ ಓಪನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಅರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಮತ್ತು ಸರ್ಬಿಯಾದ ನೊವಾಕ್ ಜೋಕೋವಿಚ್ ಸೆಣಸಿಗೆ ವೇದಿಕೆ ಸಿದ್ಧವಾಗಿದೆ. 

ಹಾಲಿ ಚಾಂಪಿಯನ್ ಅಗ್ರ ಶ್ರೇಯಾಂಕಿತ ಸ್ಪೇನ್‌ನ ರಾಫೆಲ್ ನಡಾಲ್ ಮಂಡಿ ನೋವಿನಿಂದಾಗಿ ನಿವೃತ್ತಿ ಪಡೆದರು. ಪುರುಷರ ಸಿಂಗಲ್ಸ್‌ನ ಸೆಮೀಸ್‌ನಲ್ಲಿ 2009ರ ಯುಎಸ್ ಚಾಂಪಿಯನ್ 3ನೇ ಶ್ರೇಯಾಂಕಿತ ಡೆಲ್ ಪೊಟ್ರೊ 7-6, 6-2  ಸೆಟ್‌ಗಳಲ್ಲಿ ನಡಾಲ್ ವಿರುದ್ಧ ಪಂದ್ಯ ಗೆದ್ದರು. 

ಮೊದಲ ಸೆಟ್‌ನಲ್ಲಿ ಟೈ ಬ್ರೇಕರ್‌ಗೆ ತಿರುಗಿದ ಪಂದ್ಯದಲ್ಲಿ ಹೆಚ್ಚಿನ ಅಂಕಗಳಿಸಿದ ಪೊಟ್ರೊ, ನಡಾಲ್‌ರನ್ನು ಹಿಂದಿಕ್ಕಿದರು. 2ನೇ ಸೆಟ್‌ನಲ್ಲಿ ಅರ್ಜೆಂಟೀನಾ ಆಟಗಾರ 4 ಪಾಯಿಂಟ್‌ಗಳ ಮುನ್ನಡೆ ಪಡೆದಿದ್ದರು. ಈ ವೇಳೆಯಲ್ಲಿ ಮಂಡಿನೋವಿಗೆ ತುತ್ತಾದ ನಡಾಲ್ ಪಂದ್ಯದಿಂದ ಹೊರ ಹೋಗಲು ನಿರ್ಧರಿಸಿದರು. 

ಹೀಗಾಗಿ ಪೊಟ್ರೊ ಫೈನಲ್ ಗೇರಿದರು. ಪೊಟ್ರೊಗೆ ಇದು ವೃತ್ತಿ ಜೀವನದ 2ನೇ ಗ್ರ್ಯಾಂಡ್  ಸ್ಲಾಮ್ ಫೈನಲ್ ಆಗಿದೆ. ಇದರಿಂದಾಗಿ ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ನಲ್ಲಿ 25ನೇ ಬಾರಿ ಫೈನಲ್‌ಗೇರುವ ಅವಕಾಶದಿಂದ ನಡಾಲ್ ವಂಚಿತರಾದರು.

ಪೊಟ್ರೊ, ಫೈನಲ್ ಪಂದ್ಯದಲ್ಲಿ 2011 ಮತ್ತು 2015ರ ಯುಎಸ್ ಚಾಂಪಿಯನ್ ನೊವಾಕ್ ಜೋಕೋವಿಚ್ ರನ್ನು ಎದುರಿಸಲಿದ್ದಾರೆ. ಕಳೆದ 10 ವರ್ಷಗಳಿಂದ ಬದ್ಧ ವೈರಿಯಾಗಿರುವ ಜೋಕೋವಿಚ್ ಎದುರು 18 ಪಂದ್ಯಗಳಲ್ಲಿ ಮುಖಾಮುಖಿ ಯಾಗಿದ್ದು 4 ರಲ್ಲಿ ಮಾತ್ರ ಪೊಟ್ರೊ ಜಯಿಸಿದ್ದಾರೆ. 

ಇನ್ನುಳಿದ 14 ಪಂದ್ಯಗಳಲ್ಲಿ ಜೋಕೋ ಗೆಲುವು ಪಡೆದಿದ್ದಾರೆ. 2002 ಮತ್ತು 2012ರ ಯುಎಸ್ ಓಪನ್‌ನಲ್ಲಿ ಜೋಕೋ, ಪೊಟ್ರೊ ವಿರುದ್ಧದ ಪಂದ್ಯದಲ್ಲಿ 1 ಸೆಟ್
ಹಿನ್ನಡೆಯದೆ ಜಯ ಸಾಧಿಸಿದ್ದರು. 

ಫೈನಲ್‌ಗೇರಿದ ಜೋಕೋ: ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ 3ನೇ ಯುಎಸ್ ಓಪನ್ ಮುಡಿಗೇರಿಸಿಕೊಳ್ಳುವ ಉತ್ಸಾಹದಲ್ಲಿರುವ ನೊವಾಕ್ ಜೋಕೋವಿಚ್ 6-3, 6-4, 6-2 ಸೆಟ್‌ಗಳಲ್ಲಿ ಜಪಾನ್‌ನ ಕೇ ನಿಶಿಕೋರಿ ವಿರುದ್ಧ ಜಯ ಪಡೆದರು. ಇದ ರೊಂದಿಗೆ ಜೋಕೋ 8ನೇ ಬಾರಿ ಯುಎಸ್ ಓಪನ್ ಮತ್ತು 23ನೇ ಬಾರಿ ಗ್ರ್ಯಾಂಡ್ ಸ್ಲಾಮ್ ಫೈನಲ್‌ಗೇರಿದ ಸಾಧನೆ ಮಾಡಿದರು.

click me!